

ನವದೆಹಲಿ: ಲಾಕ್ಡೌನ್ ವೇಳೆ ಸಾಲ ಮರುಪಾವತಿ ಅವಧಿ ವಿಸ್ತರಿಸಿದ ಸಮಯಕ್ಕೂ ವಿಧಿಸಿದ ಬಡ್ಡಿಮನ್ನಾ ವಿಚಾರವಾಗಿ ಒಂದು ವಾರದೊಳಗೆ ನಿಲುವು ತಿಳಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿದೆ.
ಮೋರಾಟೋಟರಿಯಂ ಅವಧಿಯಲ್ಲಿ ಹೆಚ್ಚುವರಿ ಬಡ್ಡಿ ವಿಚಾರದಲ್ಲಿ ಕೇಂದ್ರ ಸರ್ಕಾರ ಯಾವುದೇ ಕ್ರಮ ಅಥವಾ ನಿರ್ಧಾರ ಕೈಗೊಳ್ಳದ ಅಂಶವನ್ನು ಗಂಭೀರವಾಗಿ ಪರಿಗಣಿಸಿದ ಕೋರ್ಟ್, ಒಂದು ವಾರದ ಗಡುವು ನೀಡಿದೆ.
ಈ ವಿಚಾರದಲ್ಲಿ ನಿಲುವು ಪ್ರಕಟಿಸಲು ನೈಸರ್ಗಿಕ ವಿಕೋಪ ಕಾಯ್ದೆಯಡಿಯಲ್ಲಿ ಸಾಕಷ್ಟು ಅವಕಾಶವಿದೆ. ಆದರೆ, ಕೇಂದ್ರ ಸರ್ಕಾರ ಆರ್ಬಿಐ ಮರೆಯಲ್ಲಿ ಅಡಗಲು ಪ್ರಯತ್ನಿಸುತ್ತಿದೆ ಎಂದು ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.
ಪೀಠದ ಇನ್ನುಳಿದ ನ್ಯಾಯಮೂರ್ತಿಗಳಾದ ಆರ್. ಸುಭಾಷ್ ರೆಡ್ಡಿ ಹಾಗೂ ಎಂ.ಆರ್. ಷಾ ಕೂಡ ಕೇಂದ್ರದಿಂದ ವಿವರಣೆ ಬಯಸಿದರು. ಬಡ್ಡಿಯ ಮತ್ತೆ ಬಡ್ಡಿ ವಿಧಿಸಬಹುದೇ ಎಂದು ಸರ್ಕಾರವನ್ನು ಪ್ರಶ್ನಿಸಿದರು. ಅಂತಿಮವಾಗಿ ಸಾಲಿಸಿಟರ್ ಜನರಲ್ ತುಷಾರ್ಮೆಹ್ತಾ ಮನವಿ ಮೇರೆಗೆ ಕೇಂದ್ರ ಸರ್ಕಾರಕ್ಕೆ ಒಂದು ವಾರದ ಗಡುವು ನೀಡಿದೆ.
ಇನ್ನೊಂದೆಡೆ ಅರ್ಜಿದಾರರ ಪರವಾಗಿ ವಾದ ಮಂಡಿಸುತ್ತಿರುವ ಹಿರಿಯ ವಕೀಲ ಕಪಿಲ್ ಸಿಬಲ್, ಸಾಲ ಮರುಪಾವತಿ ಅವಧಿ ಹೊಂದಾಣಿಕೆ ಆಗಸ್ಟ್ 31ಕ್ಕೆ ಕೊನೆಗೊಳ್ಳುತ್ತಿದೆ. ಅರ್ಜಿ ವಿಚಾರಣೆ ನಡೆಯವ ತನಕ ಅದನ್ನು ವಿಸ್ತರಿಸಬೇಕೆಂದು ಮನವಿ ಮಾಡಿದರು. ಹೀಗಾಗಿ ನ್ಯಾಯಾಲಯ ಸೆಪ್ಟಂಬರ್ 1ರಂದು ಮುಂದಿನ ವಿಚಾರಣೆ ನಡೆಸುವುದಾಗಿ ತಿಳಿಸಿತು.