

ಹೈದರಾಬಾದ್: ಬಿಗ್ ಬಾಸ್ ಶೋ ವಾರಾಂತ್ಯದ ಸಂಚಿಕೆಯಲ್ಲಿ ಅತಿಥಿಯಾಗಿ ಕಾಣಿಸಿಕೊಂಡ ದಕ್ಷಿಣದ ಖ್ಯಾತ ನಟ ಸೈಯ್ಯಾಜಿ ಶಿಂಧೆ(sayaji shinde) ಪರಿಸರ ಸಂರಕ್ಷಣೆ ಕುರಿತು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ದೇವಸ್ಥಾನದಲ್ಲಿ ಪ್ರಸಾದದ ಜೊತೆಗೆ ಗಿಡವನ್ನು ನೀಡಿದರೆ ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಾಯಕ ಸುಧೀರ್ ಬಾಬು, ಸೈಯ್ಯಾಜಿ ಶಿಂಧೆ ಮತ್ತು ಸಾಯಿ ಚಂದ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ತೆಲುಗಿನ 'ಮಾ ನನ್ನ ಸೂಪರ್ ಹೀರೋ' ಸಿನಿಮಾ, ಅಕ್ಟೋಬರ್ 11 ರಂದು ತೆರೆಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಚಿತ್ರದ ಪ್ರಚಾರ ಕಾರ್ಯ ಆರಂಭಿಸಿದೆ. ನಾಯಕ ಸುಧೀರ್ ಬಾಬು ಮತ್ತು ಸೈಯ್ಯಾಜಿ ಶಿಂಧೆ ಬಿಗ್ ಬಾಸ್ ವಾರಾಂತ್ಯದ ಸಂಚಿಕೆಯಲ್ಲಿ ಭಾಗವಹಿಸಿ ಸಿನಿಮಾವನ್ನು ಪ್ರಚಾರ ಮಾಡಿದರು.
ಈ ಸರಣಿಯಲ್ಲಿ ನಟ ಸೈಯ್ಯಾಜಿ ಶಿಂಧೆ ಪರಿಸರ ಸಂರಕ್ಷಣೆ ಕುರಿತು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ದೇವಸ್ಥಾನದಲ್ಲಿ ಭಕ್ತರಿಗೆ ಪ್ರಸಾದದ ಜೊತೆಗೆ ಸಸಿಗಳನ್ನು ನೀಡಿದರೆ ಉತ್ತಮ. ಮಹಾರಾಷ್ಟ್ರದ ಮೂರು ದೇವಸ್ಥಾನಗಳಲ್ಲಿ ಈ ವ್ಯವಸ್ಥೆ ನಾನು ಆರಂಭಿಸಿದ್ದೇನೆ ಎಂದರು.
ಅಭಿಷೇಕದಲ್ಲಿ ಭಾಗವಹಿಸುವ ಸುಮಾರು 100 ರಿಂದ 200 ಭಕ್ತರಿಗೆ ಪ್ರಸಾದವಾಗಿ ಗಿಡಗಳನ್ನು ನೀಡಲಾಗುತ್ತಿದೆ. ಆಂಧ್ರ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಅಪಾಯಿಂಟ್‌ಮೆಂಟ್ ನೀಡಿದರೆ, ನನ್ನ ಈ ಆಲೋಚನೆಯನ್ನು ಅವರೊಂದಿಗೆ ಹಂಚಿಕೊಳ್ಳುತ್ತೇನೆ ಎಂದು ಸೈಯ್ಯಾಜಿ ಹೇಳಿದರು.
ವಯಸ್ಸಾದ ನನ್ನ ತಾಯಿಯನ್ನು ಉಳಿಸಿಕೊಳ್ಳಲಾಗಲಿಲ್ಲ. ಆಕೆ ಕೊನೆ ಕ್ಷಣಗಳನ್ನು ಎದುರಿಸುತ್ತಿದ್ದಾಗ, ಅಮ್ಮಾ, ನಿನಗಾಗಿ ನಾನೇನು ಮಾಡಲಿ? ಎಂದಾಗ ದೇಶದ ನಾಲ್ಕು ಕಡೆ ನಾಲ್ಕು ಗಿಡ ನೆಡು. ಅವು ದೊಡ್ಡವು ಆದಾಗ ನಾಲ್ಕು ಜೀವಿಗಳಿಗೆ ನೆರಳು, ಆಶ್ರಯ, ಆಹಾರ, ಗಾಳಿ ನೀಡುತ್ತವೆ. ಆ ಮರಗಳನ್ನು ನೋಡೊದಾಗಲೆಲ್ಲ ನನ್ನನ್ನು ಸ್ಮರಿಸಿಕೋ ಎಂದರು. ಹೀಗಾಗಿ ನಾನೂ ಸಸಿಗಳನ್ನು ನೆಟ್ಟು ಇತರರೂ ಪರಿಸರ ಉಳಿಸಲು ಪ್ರೇರೇಪಿಸಲು ಯತ್ನಿಸುತ್ತಿದ್ದೇನೆ ಎಂದು ಸೈಯ್ಯಾಜಿ ಹೇಳಿದರು.
ಸೈಯ್ಯಾಜಿ ಶಿಂಧೆಯವರ ಕಲ್ಪನೆಯನ್ನು ಬಿಗ್ಬಾಸ್ ನಿರೂಪಕ, ಹಿರಿಯ ನಟ ನಾಗಾರ್ಜುನ ಶ್ಲಾಘಿಸಿದರು. ಈ ವಿಚಾರವನ್ನು ಅವರ ಅಭಿಮಾನಿಗಳು ಪವನ್ ಕಲ್ಯಾಣ್ ಅವರ ಗಮನಕ್ಕೆ ಖಂಡಿತ ಕೊಂಡೊಯ್ಯುತ್ತಾರೆ ಎಂದರು.