More

    ನೀರಿನ ಸ್ವಚ್ಛತೆಗಿರಲಿ ಕಾಳಜಿ

    -ಮನೋಹರ್ ಬಳಂಜ ಬೆಳ್ತಂಗಡಿ

    ಜಲಮೂಲಗಳಲ್ಲಿ ನೀರಿನ ಹರಿವು ಕ್ಷೀಣಿಸುತ್ತಿದೆ. ಕೃಷಿಕರು ತಮ್ಮ ಕೃಷಿ ತೋಟಗಳಿಗೆ ನೀರು ಹರಿಸಲು ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಇಳಿಸಿ, ಸಾಂಪ್ರದಾಯಿಕ ಕಟ್ಟಗಳನ್ನು ಕಟ್ಟಿ ನೀರನ್ನು ಸಂಗ್ರಹಿಸಿದ್ದಾರೆ. ಹೀಗೆ ಸಂಗ್ರಹಗೊಂಡ ನೀರು ಕೃಷಿ ತೋಟಗಳಿಗೆ ಉಪಯೋಗವಾಗುವುದರ ಜತೆ ಅಂತರ್ಜಲ ಮೂಲಕ ಹಲವು ಗ್ರಾಮಗಳ ಜನರಿಗೆ ಪ್ರಯೋಜನ ನೀಡುತ್ತದೆ. ಈ ನೀರನ್ನು ಕಲುಷಿತಗೊಳಿಸದೆ ಇರುವಷ್ಟು ಸಮಯ ಉಪಯೋಗಕ್ಕೆ ಸೂಕ್ತವಾಗುವಂತೆ ಕಾಪಾಡಬೇಕಾಗಿರುವುದು ಮುಖ್ಯ.

    ನದಿ, ಹೊಳೆ ಇರುವ ಕಡೆ ಸೇತುವೆಗಳು ಇರುತ್ತವೆ. ಈ ಸೇತುವೆಗಳ ಮೇಲಿನಿಂದ ತ್ಯಾಜ್ಯವನ್ನು ಸುರಿಯುವ ಕಿಡಿಗೇಡಿಗಳು ಇದ್ದಾರೆ. ತ್ಯಾಜ್ಯ ಸಂಗ್ರಹಗೊಂಡ ನೀರಿಗೆ ಸುರಿದರೆ ನೀರು ಕಲುಷಿತಗೊಳ್ಳುತ್ತದೆ. ಈ ನೀರನ್ನು ಬಳಸುವುದು ಅಪಾಯಕಾರಿ. ಇದು ಹಲವು ಪ್ರಾಣಿ, ಪಕ್ಷಿಗಳಿಗೂ ಮಾರಕವಾಗಬಹುದು ಹಾಗೂ ನೀರಿನ ಸಂಗ್ರಹವಿದ್ದರೂ ಅದು ಉಪಯೋಗಕ್ಕೆ ಸಿಗದು.

    ನದಿಗಳ ಪ್ರದೇಶದಲ್ಲಿ ನಡೆಯುವ ಮರಳುಗಾರಿಕೆ, ಮೀನು ಹಿಡಿಯಲು ಸ್ಫೋಟಕಗಳನ್ನು ಸಿಡಿಸುವುದು ಕೂಡ ನೀರು ಕಲುಷಿತಗೊಳ್ಳಲು ಕಾರಣವಾಗುತ್ತದೆ. ನೀರು ಬತ್ತತೊಡಗಿದಂತೆ ಅಕ್ರಮವಾಗಿ ನಡೆಯುವ ಈ ಚಟುವಟಿಕೆಗಳು ಬೇಸಿಗೆ ದಿನಗಳಲ್ಲಿ ಭಾರಿ ಪರಿಣಾಮ ಬೀರುತ್ತವೆ. ಇಷ್ಟೇ ಅಲ್ಲದೆ ನೀರಿಗೆ ವಿಷವನ್ನು ಇಕ್ಕಿ ಮೀನು ಹಿಡಿಯುವ ಪ್ರಕ್ರಿಯೆಗಳು ಸರ್ವೇ ಸಾಮಾನ್ಯ. ಬೆರಳೆಣಿಕೆಯ ಮಂದಿಯ ದುರಾಸೆಯಿಂದ ಸಾವಿರಾರು ಮಂದಿ ಕಷ್ಟ ಪಡುವಂತಾಗುವ ಈ ಚಟುವಟಿಕೆಗಳಿಗೆ ಕಡಿವಾಣ ಬಿದ್ದರೆ ಮಾತ್ರ ಸಂಗ್ರಹಗೊಂಡಿರುವ ನೀರು ಉಪಯೋಗಕ್ಕೆ ಸಿಗಬಹುದು.

    water dam
    ಅಣೆಕಟ್ಟಿನಿಂದ ಸಂಗ್ರಹವಾದ ನೀರು.

    ಸೇತುವೆಗಳಲ್ಲಿ ತ್ಯಾಜ್ಯ

    ಕಿಂಡಿ ಅಣೆಕಟ್ಟು, ಕಟ್ಟಗಳಿರುವ ಪರಿಸರದ ಸೇತುವೆಗಳ ಮೇಲೆ ಹೆಚ್ಚಿನ ಪ್ಲಾಸ್ಟಿಕ್, ಬಾಟಲಿ ಮೊದಲಾದ ತ್ಯಾಜ್ಯ ಸಾಕಷ್ಟು ಕಂಡುಬರುತ್ತಿದೆ. ಇದು ನದಿಗಳನ್ನು ಸೇರುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದು ಕೂಡ ನೀರು ಕಲುಷಿತಗೊಳ್ಳಲು ಕಾರಣವಾಗುತ್ತದೆ. ನದಿಗಳ ಪ್ರದೇಶದಲ್ಲಿ ತ್ಯಾಜ್ಯ ಯಾವ ಮಟ್ಟದಲ್ಲಿ ಸಂಗ್ರಹಗೊಳ್ಳುತ್ತದೆ ಎಂಬುದಕ್ಕೆ 2019ರ ಪ್ರವಾಹ ಉತ್ತಮ ಉದಾಹರಣೆ. ಆ ಪ್ರವಾಹದ ಸಂದರ್ಭ ನದಿಗಳು ತೋಟಗಳನ್ನು ಪ್ರವೇಶಿಸಿದ್ದವು. ಹಲವರ ತೋಟಗಳಲ್ಲಿ ಲೋಡುಗಟ್ಟಲೆ ತ್ಯಾಜ್ಯ ಸಂಗ್ರಹಗೊಂಡು ಅದರ ವಿಲೇವಾರಿಯ ತಲೆ ನೋವಾಗಿ ಪರಿಣಮಿಸಿತ್ತು. ತೋಟಗಳು ಪ್ಲಾಸ್ಟಿಕ್‌ಮಯವಾಗಿ ಗೋಚರಿಸುತ್ತಿದ್ದವು.

    ಅಪಾಯಕಾರಿ

    ನೀರು ಸಂಗ್ರಹಗೊಂಡಿರುವ ಪ್ರದೇಶಗಳಲ್ಲಿ ಸ್ನಾನಕ್ಕೆ, ಬಟ್ಟೆ ತೊಳೆಯಲು ಇಳಿಯುವುದು ಅಪಾಯಕಾರಿ. ಸದ್ಯ ಉತ್ತಮ ನೀರಿನ ಸಂಗ್ರಹವಿದ್ದು ಹಲವು ಅಡಿಗಳಷ್ಟು ನೀರು ಇದೆ. ಬಲೆ ಬೀಸಿ ಮೀನು ಹಿಡಿಯುವುದು ಸಹಿತ ಹಲವು ಅಪಾಯಕಾರಿ, ಅನಗತ್ಯ ಚಟುವಟಿಕೆಗಳು ಕಂಡುಬರುತ್ತವೆ. ಇಲ್ಲಿ ಒಂದಿಷ್ಟು ಎಚ್ಚರ ತಪ್ಪಿದರೂ ಅಪಾಯ ಸಂಭವಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದರಿಂದ ಈ ಪ್ರದೇಶಗಳಲ್ಲಿ ಸಂಚರಿಸುವಾಗ ಎಚ್ಚರಿಕೆ ಅಗತ್ಯ.

    ನೀರು ಅಮೂಲ್ಯವಾಗಿದ್ದು, ದಿನಗಳಲ್ಲಿ ಅದರ ಉಪಯೋಗಕ್ಕೆ ಮಿತಿ ಇರಬೇಕು. ನದಿ ಪ್ರದೇಶಗಳಲ್ಲಿ ಸಂಗ್ರಹಗೊಂಡಿರುವ ನೀರು ವನ್ಯಜೀವಿಗಳಿಗೆ ಪ್ರಾಮುಖ್ಯವಾಗಿದೆ. ಇಂಥ ನೀರನ್ನು ಯಾರು ಕಲುಷಿತಗೊಳಿಸಬಾರದು.
    -ಸಚಿನ್ ಭಿಡೆ
    ಪರಿಸರ ಪ್ರೇಮಿ, ಮುಂಡಾಜೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts