

| ಬಾಲಚಂದ್ರ ಕುಕ್ಕೆಸುಬ್ರಹ್ಮಣ್ಯ
ನಿರ್ದೇಶಕಿ ಜ್ಯೋತ್ಸ್ನ ಕೆ.ರಾಜ್ ಚೊಚ್ಚಲ ನಿರ್ದೇಶನದ ಸಾಂಕೇತ್ ಸಿನಿಮಾ ವಿಜ್ಞಾನ ಹಾಗೂ ಮೂಢನಂಬಿಕೆಗಳ ನಡುವೆ ನಡೆಯುವ ಸಂಘರ್ಷದ ಮೇಲೆ ಬೆಳಕು ಚೆಲ್ಲುತ್ತದೆ.
ಸಮಾಜದ ಒತ್ತಡಕ್ಕೆ ಸಿಲುಕಿದ ವ್ಯಕ್ತಿಯ ಮಾನಸಿಕ ಸ್ಥಿಮಿತ ಊಹೆಗೂ ನಿಲುಕದ ಹಂತಕ್ಕೆ ತಲುಪುವ ಸಂಭವ ಅಧಿಕ ಎಂಬುದನ್ನು ತೆರೆಯ ಮೇಲೆ ಬಿತ್ತರಿಸಲಾಗಿದೆ. ಕಂಟೆಂಟ್ ಆಧರಿತ ಸಾಂಕೇತ್ ಪ್ರೇಕ್ಷಕನ ಕೌತುಕದ ಮಟ್ಟವನ್ನು ತುತ್ತತುದಿಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದೆ.
ವೈದ್ಯ ದಂಪತಿಯ ಸುತ್ತ ಕತೆ ಹಣೆಯಲಾಗಿದೆ. ತನ್ನ ವಂಶ ಬೆಳೆಸುವ ಪ್ರಯತ್ನದಲ್ಲಿದ್ದ ಡಾ.ಪೃಥ್ವಿ ರಾವ್ ಈ ಕಾರಣಕ್ಕಾಗಿ ಮಡದಿ ಡಾ.ಪ್ರಕೃತಿ ರಾವ್ ಜತೆಗೆ ಭಿನ್ನಾಭಿಪ್ರಾಯ ಹೊಂದಿ, ವಾಮ ಮಾರ್ಗದತ್ತ ಆಕರ್ಷಿತನಾಗುತ್ತಾನೆ. ದಿನಗಳೆದಂತೆ ವಂಶವೃದ್ಧಿಯ ಬಯಕೆ ಉತ್ಕಟ ಹಂತಕ್ಕೆ ತಲುಪಿ ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಾನೆ.
ನಿಧಾನವಾಗಿ ಪತಿಯ ಅಸಹಜ ನಡವಳಿಕೆ ಗಮನಕ್ಕೆ ಬಂದು ಪತ್ನಿ ದಿಗ್ಭ್ರಮೆಗೊಂಡಿರುತ್ತಾಳೆ. ಇಲ್ಲಿ ಕರೊನಾ ಅವಧಿಯ ತೀವ್ರತೆಯನ್ನೂ ಚಿತ್ರಿಸಲಾಗಿದೆ. ಇದೇ ಕಾರಣಕ್ಕಾಗಿ ಪತ್ನಿಯ ಸ್ವಾತಂತ್ರವನ್ನು ಪತಿ ಮೊಟಕುಗೊಳಿಸುತ್ತಾನೆ. ಪತಿಯ ಸಮಸ್ಯೆ ಬಗೆಹರಿಸಲು ಪತ್ನಿಯ ಯತ್ನ ನಿರೀಕ್ಷಿತಾ ಫಲ ನೀಡುವುದಿಲ್ಲ. ಈ ವೇಳೆ ಪೃಥ್ವಿ ಮಾನಸಿಕ ಅಸ್ವಸ್ಥತೆಯ ಎಲ್ಲ ಮಟ್ಟ ಮೀರಿಯೂ ಆಗಿತ್ತು.
ಇಲ್ಲಿ ಆಶ್ಚರ್ಯದ ಸಂಗತಿ, ಸಾಮಾನ್ಯವಾಗಿ ವೈದ್ಯಕೀಯ ವಿದ್ಯಾರ್ಥಿಗಳು, ವೈದ್ಯರು ಮೂಢನಂಬಿಕೆ-ವಾಮಚಾರಗಳನ್ನು ನಂಬುವುದಿಲ್ಲ. ಡಾ.ಪೃಥ್ವಿ ಈ ವಿಚಾರದಲ್ಲಿ ವಿಭಿನ್ನ. ವಂಶ ಬೆಳೆಸುವ ಉದ್ದೇಶದಿಂದ ಪೂಜೆ-ಪುನಸ್ಕಾರದತ್ತ ಮುಖಮಾಡಿದ್ದು, ಕ್ರಮೇಣ ಅದು ಮಾನಸಿಕ ಅಸ್ವಸ್ಥೆಗೆ ತಿರುಗಿದ್ದು ಕತೆಯ ಹಂದರ. ಸಾಂಕೇತ್ ಎಂಬ ಕಾಲ್ಪನಿಕ ಪಾತ್ರವೂ ಇದೆ.
ಹೆಣ್ಣು ಸಂತಾನ ಹೆರದಿದ್ದರೆ ಸಮಾಜ ಹೇಗೆ ನೋಡುತ್ತದೋ, ಅದೇ ರೀತಿ ಸಂತಾನ ಪಡೆಯದ ಗಂಡನ್ನೂ ಸಮಾಜ ವಿಕೃತವಾಗಿ ನೋಡುತ್ತದೆ ಎಂಬ ಅಂಶವನ್ನೂ ಚಿತ್ರ ಚರ್ಚಿಸಿದೆ. ವಿಶಾಲ ಮನಸ್ಸಿನವರ ಮೇಲೆ ನೇತಾತ್ಮಕ ವಿಷಯಗಳು ಪರಿಣಾಮ ಬೀರದು. ಮಾನಸಿಕ ದೌರ್ಬಲ್ಯವಿದ್ದವರು ಸಮಾಜದ ಒತ್ತಡಕ್ಕೆ ಒಳಗಾಗಿ ಅಸ್ತಿತ್ವ ಕಳೆದುಕೊಳ್ಳುತ್ತದೆ ಈ ಸಾಂಕೇತ್ ಚಿತ್ರ ಸ್ಪಷ್ಟ ಉದಾಹರಣೆ.
ಚಿತ್ರದಲ್ಲಿ ಹೊಸಮುಖಗಳು ಹೆಚ್ಚಿದ್ದರೂ, ಎಲ್ಲರೂ ಮಾಗಿದ ಅಭಿನಯ ತೋರಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ಈ ಹಿಂದಿನಿಂದಲೇ ಕಂಟೆಂಟ್ ಆಧರಿತ ಚಿತ್ರಗಳನ್ನು ಪ್ರೇಕ್ಷಕ ಮೆಚ್ಚಿಕೊಂಡಿದ್ದು, ಸಾಂಕೇತ್ ಚಿತ್ರಕ್ಕೂ ಸಿನಿಮಾ ಅಭಿಮಾನಿಗಳು ಮೆಚ್ಚುಗೆಯ ಮಹಾಪೂರ ಹರಿಸಿದ್ದಾರೆ.
ಕರೊನಾ ಲಾಕ್ಡೌನ್ ಸಂದರ್ಭ ನಿರ್ದೇಶಕಿ ಜ್ಯೋತ್ಸಾ ಒಳಗೊಂಡ ಐವರ ತಂಡ ಕತೆ ರಚಿಸಿ, ಚಿತ್ರೀಕರಣ ನಡೆಸಿದೆ. ರಿವರ್ಸ್ ಸ್ಟ್ರೀಮ್ ಸ್ಟುಡಿಯೋ ಚಿತ್ರ ನಿರ್ಮಿಸಿದ್ದು, ಶಾಲಿನಿ ಆರ್ಟ್ಸ್ ವಿತರಿಸಿದೆ. ರಾಜ್ ಕಾರ್ತಿಕ್ ಸಂಭಾಷಣೆ ಬರೆದಿದ್ದು, ಶಿವರಾಮ ಆಚಾರ್ಯ ಸಹಕರಿಸಿದ್ದಾರೆ. ನಿಶಾನ್ ಟೆಲ್ಲಿಸ್ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಕ್ಯಾಮರಾಮನ್ ಸನತ್ಕುಮಾರ್ ಪ್ರತಿ ದೃಶ್ಯಗಳಿಗೂ ವೈವಿಧ್ಯತೆ ಒದಗಿಸಿದ್ದು, ಚಿತ್ರೀಕರಣ ಅದ್ಭುತವಾಗಿ ಮೂಡಿಬಂದಿದೆ.
ತಾರಾಬಳಗ: ವಿಕ್ಕಿ ರಾವ್, ಚೈತ್ರಾ ಶೆಟ್ಟಿ, ಮೋಹನ್ ಶೇಣಿ, ರೂಪಾಶ್ರೀ ವರ್ಕಾಡಿ, ರಾಹುಲ್ ಅಮೀನ್, ನಿರೀಕ್ಷಾ ಶೆಟ್ಟಿ, ಸದಾಶಿವ ಅಮೀನ್, ನಿರೀಕ್ಷಾ ರಾಣಿ, ರಜೀತ್ ಕದ್ರಿ, ಮೇಘನಾ, ರಕ್ಷಿತಾ
* ಚಿತ್ರ: ಸಾಂಕೇತ್
* ನಿರ್ದೇಶನ ಹಾಗೂ ಸಂಕಲನ: ಜ್ಯೋತ್ಸ್ನ ಕೆ.ರಾಜ್.
* ನಿರ್ಮಾಣ: ರಿವರ್ ಸ್ಟ್ರೀಮ್ ಸ್ಟುಡಿಯೋಸ್
ವಿಜಯವಾಣಿ ರೇಟಿಂಗ್- 4/5