ಉತ್ತಮ ಜೀವನಶೈಲಿ ಹಾಗೂ ಆಹಾರ ಪದ್ಧತಿಯಿಂದ ಮೂಲವ್ಯಾಧಿಯನ್ನು ದೂರವಿಡಿ

Mulavyadhi

ಬೆಂಗಳೂರು: ಬದಲಾದ ಜೀವನಶೈಲಿ ಹಾಗೂ ಆಹಾರ ಕ್ರಮದಿಂದಾಗಿ ಬರುವ ಹಲವು ಆರೋಗ್ಯ ಸಮಸ್ಯೆಗಳಲ್ಲಿ ಮೂಲವ್ಯಾಧಿಯೂ ಒಂದು. ಆರಂಭದಲ್ಲೇ ಚಿಕಿತ್ಸೆ ಪಡೆದರೆ ತೊಂದರೆ ಇಲ್ಲ. ಒಂದೊಮ್ಮೆ ಉದಾಸೀನ ಮಾಡಿದರೆ ಕ್ಯಾನ್ಸರ್‌ಗೆ ತುತ್ತಾಗುವ ಅಪಾಯವಿದೆ. ಹಾಗಾಗಿ ಸಂಕೋಚ ಬದಿಗೊತ್ತಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎನ್ನುತ್ತಾರೆ ಸ್ಮೈಲ್ ಆಸ್ಪತ್ರೆಯ ಸಿಇಒ ಹಾಗೂ ಕೊಲೊರೆಕ್ಟಲ್ ಸರ್ಜನ್ ಡಾ. ಸಿ.ಎಂ. ಪರಮೇಶ್ವರ.

ಮೂಲವ್ಯಾಧಿಯಲ್ಲಿ ಹಲವು ವಿಧ. ಪೈಲ್ಸ್, ಫಿಶರ್ ಹಾಗೂ ಫಿಸ್ಟುಲಾ ಎಂದು. ಶೇ. 90 ಮಂದಿಗೆ ಜೀವನಶೈಲಿಯಿಂದ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆದಲ್ಲಿ ಜೀವನಕ್ರಮ ಹಾಗೂ ಆಹಾರ ಪದ್ಧತಿಯಿಂದಲೇ ಗುಣ ಹೊಂದಬಹುದು. ಉಳಿದ ಶೇ. 10 ಮಂದಿಗೆ ಕರುಳಿನ ಉರಿಯೂತ ಕಂಡು ಬರುತ್ತದೆ. ಇವರಿಗೆ ಶಸಚಿಕಿತ್ಸೆ ಅನಿವಾರ್ಯವಾಗಿದ್ದು, ಗುಣ ಹೊಂದುವ ಸಾಧ್ಯತೆಗಳು ಕಡಿಮೆ ಇರುತ್ತದೆ. ಹಾಗಾಗಿ ಆರಂಭಿಕ ಹಂತದಲ್ಲಿ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಅರಿವಿನ ಕೊರತೆ ಹಾಗೂ ಇದಕ್ಕೆ ಸಕಾಲದಲ್ಲಿ ಚಿಕಿತ್ಸೆ ಪಡೆಯಲಾಗದೆ ಬಹಳಷ್ಟು ಮಂದಿ ದೊಡ್ಡ ಕರುಳಿನ ಕ್ಯಾನ್ಸರ್ (ಕೊಲೊನ್ ಕ್ಯಾನ್ಸರ್)ಗೆ ಒಳಗಾಗುತ್ತಿದ್ದಾರೆ. ಇದರ ಚಿಕಿತ್ಸೆ ದುಬಾರಿಯಾಗಿದ್ದು, ಜೀವನ ಪರ್ಯಂತ ಪ್ರತಿವಾರ ಇನ್‌ಜೆಕ್ಷನ್ ತೆಗೆದುಕೊಳ್ಳಬೇಕು. ಪ್ರತಿ ಇನ್‌ಜೆಕ್ಷನ್‌ಗೆ 40 ಸಾವಿರ ರೂ. ಆಗಲಿದೆ ಎನ್ನುತ್ತಾರೆ ಡಾ. ಪರಮೇಶ್ವರ.

ನಾಲ್ಕು ಹಂತದಲ್ಲಿ ಮೂಲವ್ಯಾಧಿ: ಈ ರೋಗವನ್ನು ನಾಲ್ಕು ವಿಧದಲ್ಲಿ ಗುರುತಿಸಲಾಗುತ್ತದೆ. ಹಂತ- 1ರಲ್ಲಿ ಸಣ್ಣ ಪ್ರಮಾಣದಲ್ಲಿ ಉರಿಯೂತವನ್ನುಂಟು ಮಾಡುವ ಗಂಟುಗಳು ಗುದನಾಳದ ಭಿತ್ತಿಯೊಳಗೆ ಇರುತ್ತವೆ. ಹಂತ- 2ರಲ್ಲಿ ಮಲವಿಸರ್ಜನೆಯ ವೇಳೆ ಗಂಟುಗಳು ಅಥವಾ ಮೊಳೆಗಳು ಹೊರಗೆ ಬರುತ್ತವೆ ಮತ್ತು ಕೆಲ ಸಮಯದಲ್ಲಿ ತನ್ನಿಂತಾನೇ ಒಳಗೆ ಸೇರಿಕೊಳ್ಳುತ್ತವೆ. ಹಂತ -3ರಲ್ಲಿ ಮೊಳೆಗಳು ಗುದದ್ವಾರದಿಂದ ಹೊರಗೆ ಜೋಲುತ್ತಿರುತ್ತವೆ ಮತ್ತು ಅವುಗಳನ್ನು ಸುಲಭವಾಗಿ ಒಳಗೆ ತಳ್ಳಬಹುದು. ಹಂತ- 4ರಲ್ಲಿ ಗಂಟುಗಳು ಗುದದ್ವಾರದ ಹೊರಗೆ ಇರುತ್ತವೆ ಮತ್ತು ಅವುಗಳನ್ನು ಒಳಗೆ ಸೇರಿಸಲು ಸಾಧ್ಯವಾಗುವುದಿಲ್ಲ ಎಂದು ವಿವರಿಸಿದರು.

ಯಾರಲ್ಲಿ ಮೂಲವ್ಯಾಧಿ ಹೆಚ್ಚು: ಐಟಿ ಉದ್ಯಮಿಗಳು, ವಾಹನ ಚಾಲಕರು, ಟೈಲರ್‌ಗಳು, ಗಾರ್ಮೆಂಟ್ಸ್ ನೌಕರರು ಸೇರಿ ದೀರ್ಘಕಾಲ ಒಂದೇ ಸ್ಥಳದಲ್ಲಿ ಕುಳಿತು ಕೆಲಸ ಮಾಡುವವರಲ್ಲಿ ಮೂಲವ್ಯಾಧಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಮತ್ತು ಮಕ್ಕಳಲ್ಲೂ ಹೆಚ್ಚು ಕಾಣಿಸಿಕೊಳ್ಳುತ್ತಿದೆ.

ರೋಗ ಲಕ್ಷಣಗಳು: ಸಾಮಾನ್ಯವಾಗಿ ಈ ರೋಗದ ಲಕ್ಷಣಗಳು ಗಂಭೀರವಾಗಿರುವುದಿಲ್ಲ ಮತ್ತು ಕೆಲವು ದಿನಗಳ ಬಳಿಕ ತನ್ನಿಂತಾನೇ ಶಮನಗೊಳ್ಳುತ್ತವೆ. ಮಲವಿಸರ್ಜನೆಯಾದರೂ ಇನ್ನೂ ಮಲ ತುಂಬಿರುವಂತೆ ರೋಗಿಗಳಿಗೆ ಅನುಭವವಾಗಬಹುದು. ಗುದದ್ವಾರದ ಸುತ್ತಲಿನ ಜಾಗದಲ್ಲಿ ತುರಿಕೆಯಿದ್ದು, ಅದು ಕೆಂಪಾಗಬಹುದು, ಮಲವಿಸರ್ಜನೆಯ ಸಂದರ್ಭದಲ್ಲಿ ನೋವು, ಗುದದ್ವಾರದ ಸುತ್ತ ಗಟ್ಟಿಯಾದ, ನೋವನ್ನುಂಟು ಮಾಡುವ ಗಂಟು, ಮಲದಲ್ಲಿ ರಕ್ತ ಹೋಗುವಿಕೆ ಈ ಲಕ್ಷಣಗಳು ರೋಗಿಯಲ್ಲಿ ಕಂಡು ಬರಬಹುದು.

ವ್ಯತ್ಯಾಸಗಳು
ಮೂಲವ್ಯಾಧಿ: ಗುದದ್ವಾರದ ಬಳಿ ರಕ್ತನಾಳಗಳು ಊದಿಕೊಳ್ಳುವುದು.
ಫಿಷರ್: ಮಲ ಗಟ್ಟಿಯಾಗಿ ಹೊರಬರುವಾಗ ರಕ್ತಸ್ರಾವ, ಗುದದ್ವಾರದಲ್ಲಿ ಬಿರುಕು.
ಫಿಸ್ತುಲಾ: ರಕ್ತನಾಳಗಳಲ್ಲಿ ಕೀವು ತುಂಬಿಕೊಂಡು ಸೋರುವುದು

ಚಿಕಿತ್ಸಾ ವಿಧಾನ: ಮೂಲವ್ಯಾಧಿಯನ್ನು ನಾಲ್ಕು ಹಂತಗಳಲ್ಲಿ ಗುರುತಿಸಲಾಗುವುದು. ಮೊದಲ ಎರಡು ಹಂತಗಳಲ್ಲೇ ಚಿಕಿತ್ಸೆ ಪಡೆದರೆ ಔಷಧದ ಜತೆಗೆ ಜೀವನ ಶೈಲಿ ಮತ್ತು ಆಹಾರ ಪದ್ಧತಿಯಿಂದಲೇ ಗುಣಹೊಂದಬಹುದು. 3-4 ಹಂತದಲ್ಲಿ ಚಿಕಿತ್ಸೆಗೆ ಬಂದಲ್ಲಿ ಶಸಚಿಕಿತ್ಸೆ (ಲೇಸರ್ ಟ್ರೀಟ್‌ಮೆಂಟ್) ಮಾಡಲೇಬೇಕು. ಆಧುನಿಕ ಚಿಕಿತ್ಸಾ ವಿಧಾನದಲ್ಲಿ ನೋವು ರಹಿತವಾಗಿ ಶಸಚಿಕಿತ್ಸೆ ಮಾಡಬಹುದಾಗಿದ್ದು, ಬೆಳಗ್ಗೆ ಚಿಕಿತ್ಸೆ ಪಡೆದು ಸಂಜೆ ಮನೆಗೆ ತೆರಳಬಹುದಾಗಿದೆ. ಆದರೆ ಆರಂಭದಲ್ಲೇ ಚಿಕಿತ್ಸೆ ಪಡೆಯುವುದರಿಂದ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ಹೇಳಿದರು.

ಆಹಾರ ಕ್ರಮ: ಯಥೇಚ್ಛ ಹಣ್ಣು, ತರಕಾರಿ, ಸೊಪ್ಪ ಸೇವನೆ, ಉತ್ತಮ ನಿದ್ರೆ, ವ್ಯಾಯಮಗಳಿಂದಾಗಿ ಉತ್ತಮ ಆರೋಗ್ಯ ಹೊಂದುವುದರ ಜೊತೆಗೆ ಮೂಲವ್ಯಾಧಿಯನ್ನು ದೂರವಿಡಬಹುದಾಗಿದೆ. ಆದರೆ ಕೆಲವರಲ್ಲಿ ಹಂದಿ ಮಾಂಸ ಸೇವನೆಯಿಂದ ಮೂಲವ್ಯಾಧಿ ನಿವಾರಣೆ ಆಗುತ್ತದೆ ಎಂಬ ತಪ್ಪು ಅಭಿಪ್ರಾಯ ಇದೆ. ಮೂಲವ್ಯಾಧಿಯಿಂದ ದೂರ ಇರಲು ಮಾಂಸಾಹಾರ ಸೇವನೆಯಲ್ಲಿ ಮಿತಿ ಇರಲಿ. ಹೆಚ್ಚು ಮಸಾಲ ಪದಾರ್ಥ, ಖಾರದ ಪದಾರ್ಥ ಸೇವಿಸಬಾರದು. ಜಂಕ್​ಫುಡ್​ನಿಂದ ದೂರವಿದ್ದರೆ ಒಳ್ಳೆಯದು ಎಂದು ಪರಮೇಶ್ವರ ಸಲಹೆ ನೀಡಿದ್ದಾರೆ.

ಸರ್ಕಾರದ ನಿರ್ಲಕ್ಷ್ಯ: ಅರಿವಿನ ಕೊರತೆಯಿಂದ ಜೀವನ ಪರ್ಯಂತ ನರಳುವ ಹಾಗೂ ತಪ್ಪು ಚಿಕಿತ್ಸೆಯಿಂದಾಗಿ ಪ್ರಾಣವನ್ನೇ ಕಳೆದುಕೊಳ್ಳುತ್ತಿರುವ ಮೂಲವ್ಯಾಧಿ ಕುರಿತು ಅರಿವು ಮೂಡಿಸುವ ಯಾವುದೇ ಕಾರ್ಯಕ್ರಮವನ್ನು ಸರ್ಕಾರ ಹಮ್ಮಿಕೊಂಡಿಲ್ಲ. ಆ ಮೂಲಕ ಮೂಲವ್ಯಾಧಿ ಸಮಸ್ಯೆಯನ್ನು ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಇನ್ನಾದರೂ ಈ ಬಗ್ಗೆ ಎಚ್ಚರವಹಿಸಿ ಮೂಲವ್ಯಾಧಿ ಸಮಸ್ಯೆಯನ್ನು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಲ್ಲಿ ಸೇರಿಸಿ, ಜನರಲ್ಲಿ ಜಾಗೃತಿ ಮೂಡಿಸಬೇಕಿದೆ.

ವೈದ್ಯರ ಕೊರತೆ: ದೇಶದಲ್ಲಿ ಪೈಲ್ಸ್, ಫಿಶರ್ ಹಾಗೂ ಫಿಸ್ಟುಲಾ ಸಮಸ್ಯೆಗಳನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಲು ವೈದ್ಯರ ತೀವ್ರ ಕೊರತೆ ಇದೆ. ಅದರಲ್ಲೂ ಫಿಸ್ಟುಲಾಗೆ ಸರಿಯಾದ ಚಿಕಿತ್ಸೆ ನೀಡಲು ದೇಶದಲ್ಲಿ ಕೇವಲ ಮೂವರು ತಜ್ಞರು ಮಾತ್ರ ಪರಿಣಿತಿ ಹೊಂದಿದ್ದಾರೆ. ಉಳಿದಂತೆ ಸಾವಿರಾರು ರೋಗಿಗಳು ನಕಲಿ ವೈದ್ಯರ ಕೈಗೆ ಸಿಲುಕಿ ಸಮಸ್ಯೆ ತಂದುಕೊಂಡರೆ, ಕೆಲವರು ಜೀವವನ್ನೇ ಕಳೆದುಕೊಂಡಿದ್ದಾರೆ ಎನ್ನುತ್ತಾರೆ ಡಾ. ಪರಮೇಶ್ವರ.

ಆಸ್ಪತ್ರೆ ಪರಿಚಯ: ಸ್ಮೈಲ್ಸ್ ಗ್ಯಾಸ್ಟ್ರೋಎಂಟರಾಲಜಿ ಆಸ್ಪತ್ರೆ. ಇದು ಭಾರತದಲ್ಲಿನ ಮೊದಲ ಸಂಯೋಜಿತ ಕೊಲೊ-ರೆಕ್ಟಲ್ ಆಸ್ಪತ್ರೆಗಳಲ್ಲಿ ಒಂದಾಗಿದೆ. ಕೊಲೊರೆಕ್ಟಲ್ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸಾ ಕ್ಷೇತ್ರದಲ್ಲಿ ಕ್ರಾಂತಿ ಮಾಡಿರುವ ಬೆಂಗಳೂರಿನ ಅತ್ಯುತ್ತಮ ಆಸ್ಪತ್ರೆಯಾಗಿದೆ. ಈ ಆಸ್ಪತ್ರೆಯು ಕೊಲೊಪ್ರೊಕ್ಟಾಲಜಿಯಲ್ಲಿ ವಿಶ್ವ ದರ್ಜೆಯ ಸೆಂಟರ್ ಆಫ್​ ಎಕ್ಸಲೆನ್ಸ್ ಅನ್ನು ಸ್ಥಾಪಿಸುವ ಮೂಲಕ ಕೊಲೊರೆಕ್ಟಲ್ ಸಮಸ್ಯೆಗಳೊಂದಿಗೆ ಲಕ್ಷಾಂತರ ಜನರ ನೋವುಗಳನ್ನು ಕೊನೆಗಾಣಿಸುವ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ.

ಡಾ.ಸಿ.ಎಂ. ಪರಮೇಶ್ವರ, ಸಿಇಒ ಮತ್ತು ಸಂಸ್ಥಾಪಕರು, ಸ್ಮೈಲ್ಸ್ ಆಸ್ಪತ್ರೆ
ಇವರು ಕೊಲೊಪ್ರೊಕ್ಟಾಲಜಿ ವಲಯಗಳಲ್ಲಿ ಅತ್ಯುತ್ತಮ ಕೊಲೊರೆಕ್ಟಲ್ ತಜ್ಞರು ಮತ್ತು ಶಸ್ತ್ರಚಿಕಿತ್ಸಕರಾಗಿದ್ದಾರೆ. 20 ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು, 30 ರಾಜ್ಯಗಳ ಹಾಗೂ 30 ದೇಶಗಳಿಂದ ಈವರೆಗೂ 3 ಲಕ್ಷಕ್ಕೂ ಹೆಚ್ಚು ಹೊರ ರೋಗಿಗಳ ತಪಾಸಣೆ ಮಾಡಿದ್ದು, 25 ಸಾವಿರಕ್ಕೂ ಅಧಿಕ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಫಿಸ್ಟುಲಾಗೆ ಶಸಚಿಕಿತ್ಸೆ ನಡೆಸುವ ದೇಶದ ಪ್ರಮುಖ ಮೂವರು ತಜ್ಞರಲ್ಲಿ ಡಾ. ಸಿ.ಎಂ. ಪರಮೇಶ್ವರ ಸಹ ಒಬ್ಬರಾಗಿದ್ದಾರೆ.

ಎಸ್​ಸಿ, ಎಸ್​ಟಿ ಒಳಮೀಸಲಾತಿ ನೀಡುವ ಅಧಿಕಾರ ರಾಜ್ಯಗಳಿಗಿದೆ: ಸುಪ್ರೀಂಕೋರ್ಟ್​ ಮಹತ್ವದ ತೀರ್ಪು

Share This Article

ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?

 ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…

ಈ ದಿನಾಂಕದಂದು ಜನಿಸಿದವರು ದಾನದಲ್ಲಿ ಕರ್ಣನನ್ನು ಮೀರಿಸುತ್ತಾರೆ! ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಗೋಲ್ಡನ್ ಅವರ್ ರಹಸ್ಯ: ಮುಂಜಾನೆ ಬೇಗ ಏಳುವುದರಿಂದ ಇದೆ 6 ಪ್ರಯೋಜನಗಳು

 ಬೆಂಗಳೂರು: ಮನೆಯಲ್ಲಿ ಕೆಲವರು ಸೂರ್ಯೋದಯಕ್ಕೂ ಮೊದಲೇ ಏಳುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಮುಂಜಾನೆ ಬೇಗ ಏಳುವುದನ್ನು ರೂಢಿ…