ಎಸ್​ಸಿ, ಎಸ್​ಟಿ ಒಳಮೀಸಲಾತಿ ನೀಡುವ ಅಧಿಕಾರ ರಾಜ್ಯಗಳಿಗಿದೆ: ಸುಪ್ರೀಂಕೋರ್ಟ್​ ಮಹತ್ವದ ತೀರ್ಪು

Supreme Court
Published on

ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪಂಗಡಗಳಲ್ಲಿ ಅತೀ ಹಿಂದುಳಿದ ಜಾತಿಗಳಿಗೆ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದ ಮೀಸಲಾತಿಯಲ್ಲಿ ರಾಜ್ಯ ಸರ್ಕಾರಗಳು ಒಳಮೀಸಲು ನೀಡಬಹುದು ಎಂದು ಸುಪ್ರೀಂ ಕೋರ್ಟ್ ಇಂದು (ಆಗಸ್ಟ್​ 01) ಮಹತ್ವದ ತೀರ್ಪು ನೀಡಿದೆ. ಈಗಾಗಲೇ ಇರುವ ಶೇ. 15 ಮೀಸಲಾತಿಯಲ್ಲಿ  ಪರಿಶಿಷ್ಟ ಪಂಗಡದ ಅತೀ ಹಿಂದುಳಿದ ಜಾತಿಗಳಿಗೆ ಒಳಮೀಸಲಾತಿ ನೀಡಲು ಉನ್ನತ ನ್ಯಾಯಾಲಯ ಒಪ್ಪಿಗೆ ನೀಡಿದೆ.

ಈ ಮೂಲಕ ಒಳಮೀಸಲು ನೀಡುವ ಅಧಿಕಾರದ ಸಂಬಂಧ 2004ರಲ್ಲಿ ಸುಪ್ರಿಂ ಕೋರ್ಟ್ ನೀಡಿದ ತೀರ್ಪನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಬಿ.ಆರ್​. ಗವಾಲ್​, ವಿಕ್ರಮ್​ ನಾಥ್​, ಬೇಲಾ ಎಂ ತ್ರಿವೇದಿ, ಪಂಕಜ್​ ಮಿತಲ್​, ಮನೋಜ್​ ಮಿಶ್ರ ಮತ್ತು ಸತೀಶ್​ ಸಿ ಶರ್ಮ ಅವರನ್ನೊಳಗೊಂಡ ಸಾಂವಿಧಾನಿಕ ಪೀಠ ರದ್ದುಪಡಿಸಿದೆ.

2004ರಲ್ಲಿ ಸುಪ್ರೀಂ ಕೋರ್ಟ್​ ಶಿಕ್ಷಣ ಮತ್ತು ಉದ್ಯೋಗ ಮೀಸಲು ಸಂದಂರ್ಭದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಲ್ಲಿ ಉಪ ವರ್ಗೀಕರಣ ಮಾಡುವ ಅಧಿಕಾರ ರಾಜ್ಯ ಸರ್ಕಾರಗಳಿಗಿಲ್ಲ ಎಂದು ತೀರ್ಪು ನೀಡಿತ್ತು. ಆದರೆ, ಇದೀಗ ಜಾತಿಗಳ ಉಪವರ್ಗೀಕರಣವು ಸಂವಿಧಾನದ 14ನೇ ವಿಧಿಯನುಸಾರ ಸಮಾನತೆಯನ್ನು ಉಲ್ಲಂಘಿಸುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಉನ್ನತ ನ್ಯಾಯಾಲಯ, ರಾಜ್ಯ ಸರ್ಕಾರಗಳು ಖಚಿತ ದತ್ತಾಂಶಗಳ ಅನುಸಾರವಾಗಿ ನ್ಯಾಯಯುತವಾಗಿ ಉಪ ವರ್ಗೀಕರಣ ಮಾಡಬಹುದು ಎಂದು ತೀರ್ಪು ಪ್ರಕಟಿಸಿದೆ.

ಆದರೆ, ರಾಜಕೀಯ ಲಾಭದ ಉದ್ದೇಶಗಳಿಗಾಗಿ ವರ್ಗೀಕರಣ ಮಾಡುವ ಹಾಗಿಲ್ಲ. ಸರ್ಕಾರಗಳ ನಿರ್ಧಾರಗಳು ನ್ಯಾಯಾಲಯದ ಪರಾಮರ್ಶೆಗೆ ಮುಕ್ತವಾಗಿರುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ,ವೈ. ಚಂದ್ರಚೂಡ್ ತೀರ್ಪು ನೀಡುವ ಸಂದರ್ಭದಲ್ಲಿ ಹೇಳಿದ್ದಾರೆ.

ಏಳು ನ್ಯಾಯಮೂರ್ತಿಗಳಲ್ಲಿ 6 ಮಂದಿ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರೆ, ನ್ಯಾಯಮೂರ್ತಿ ಬೆಲಾ ತ್ರಿವೇದಿ ಅವರು ಭಿನ್ನ ತೀರ್ಪು ಬರೆದಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳಲ್ಲಿ ಉಪವರ್ಗೀಕರಣ ಮಾಡಲು ಬರುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಸಾಮಾಜಿಕವಾಗಿ ಹಿಂದುಳಿದಿರುವ ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವುದು ರಾಜ್ಯ ಸರ್ಕಾರಗಳ ಕರ್ತವ್ಯ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ರಾಜ್ಯದಲ್ಲಿ ಮೀಸಲಾತಿ ಹೆಚ್ಚಳ

2022ರಲ್ಲಿ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರು ಎಸ್​ಸಿ, ಎಸ್​ಟಿ ಮೀಸಲಾತಿ ಹೆಚ್ಚಳ ಮಾಡಿದ್ದರು. ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ವರದಿ ಅನುಸಾರ ಮತ್ತು ಸಂವಿಧಾನದಲ್ಲಿ ಹೇಳಿರುವಂತೆ ಜನಸಂಖ್ಯೆಯ ಆಧಾರದಲ್ಲಿ ಮೀಸಲಾತಿ ನೀಡಬೇಕೆಂಬ ಬೇಡಿಕೆಯಂತೆ ಪರಿಶಿಷ್ಟ ಜಾತಿಗೆ ಶೇ 15 ರಷ್ಟಿದ್ದ ಮೀಸಲಾತಿಯನ್ನು ಶೇ 17% ಕ್ಕೆ ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ 3 ರಿಂದ ಶೇ.7% ಕ್ಕೆ ಮೀಸಲಾತಿಯನ್ನು ಸರ್ಕಾರ ಹೆಚ್ಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net