Sanjay Raut | ಯುದ್ಧವನ್ನೇ ನಿಲ್ಲಿಸುವ ಪ್ರಧಾನಿಗೆ ಭಾರತ ಪಾಕ್​ ಪಂದ್ಯ ತಡೆಯಲು ಸಾಧ್ಯವಾಗಲಿಲ್ಲವೇ..? : ಸಂಜಯ್​ ರಾವತ್​​ ಪ್ರಶ್ನೆ!

Sanjay Raut
Published on

Sanjay Raut: ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಅನುಮತಿ ನೀಡಿರುವ ಕೇಂದ್ರ ಸರ್ಕಾರ, ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ 26 ಜನರಿಗೆ ಅವಮಾನ ಮಾಡಿದೆ, ಟ್ರಂಪ್ ಒತ್ತಡಕ್ಕೆ ಯುದ್ಧವನ್ನೆ ನಿಲ್ಲಿಸಬಹುದಾದ ಪ್ರಧಾನಿಗೆ, ಪಾಕ್​​ ವಿರುದ್ಧದ ಕ್ರಿಕೆಟ್ ಪಂದ್ಯವನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲವೇ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಪ್ರಶ್ನಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ರಾವತ್, ಈ ಪಂದ್ಯವು ಮೋದಿ-ಶಾ ಅವರ ರಾಷ್ಟ್ರೀಯತೆಯ ದಿವಾಳಿತನವನ್ನು ಬಹಿರಂಗಪಡಿಸಿದ್ದು, 1.5 ಲಕ್ಷ ಕೋಟಿ ರೂ. ಮೌಲ್ಯದ ಬೆಟ್ಟಿಂಗ್ ಸಂಬಂಧ ಹೊಂದಿದೆ ಎಂದು ಆರೋಪಿಸಿದರು. ಪಹಲ್ಗಾಮ್‌ನಲ್ಲಿ 26 ಮಹಿಳೆಯರ ಹಣೆಯ ಮೇಲಿನ ಸಿಂಧೂರವನ್ನು ಅಳಿಸಲಾಗಿದೆ, ಆಗ ಎದೆ ಬಡಿದುಕೊಳ್ಳುವ ನಾಟಕವಾಡಿದ ಪ್ರಧಾನಿ ಮೋದಿಗೆ ಪಂದ್ಯ ನಿಲ್ಲಿಸಲು ಏನಾಗಿತ್ತು ಎಂದರು.

ಗೃಹ ಸಚಿವ ಅಮಿತ್​​ ಷಾ ಪುತ್ರ ಮತ್ತು ಐಸಿಸಿ ಅಧ್ಯಕ್ಷ ಜಯ್ ಷಾ ಆಸಕ್ತಿ ಮೇಲೆ ಈ ಪಂದ್ಯ ನಡೆಯುತ್ತಿದ್ದು, ದೇಶಪ್ರೇಮದ ಮಾತುಗಳನ್ನಾಡಲು ಮೋದಿಗೆ ಯಾವುದೇ ನೈತಿಕತೆ ಉಳಿದಿಲ್ಲ ಎಂದು ಹೇಳಿದರು. ಭಾರತೀಯ ಕ್ರಿಕೆಟ್ ತಂಡದ ಆಟಗಾರರ ಜೊತೆ ಮಾತನಾಡಿದ್ದು, ಅನೇಕರು ಪಂದ್ಯವನ್ನು ಆಡಲು ಹಿಂಜರಿಕೆ ತೋರಿದರು, ಆದರೆ ಜಯ್ ಷಾ ಒತ್ತಡದಿಂದ ಆಟಗಾರರನ್ನು ಬಲವಂತವಾಗಿ ಆಡಿಸಲಾಗುತ್ತಿದೆ ಎಂದು ಹೇಳಿದರು.

ಪವಾರ್​ ವಿರುದ್ದ ಕಿಡಿ..

ಕ್ರೀಡೆಯನ್ನು ಕ್ರೀಡೆಯಾಗಿ ನೋಡಬೇಕು ಎಂದು ಹೇಳಿಕೆ ನೀಡಿದ್ದ ಉಪಮುಖ್ಯಮಂತ್ರಿ ಅಜಿತ್ ಪವಾರ್ ವಿರುದ್ಧ ವಾಗ್ದಾಳಿ ನಡೆಸಿದ ರಾವತ್​​, ಅಜಿತ್ ಪವಾರ್ ಅವರ ರಕ್ತನಾಳಗಳಲ್ಲಿ ಪಾಕಿಸ್ತಾನಿ ರಕ್ತ ಹರಿಯುತ್ತಿದೆ. ಅವರು ಅರ್ಧ ಪಾಕಿಸ್ತಾನಿ. ಪಹಲ್ಗಾಮ್‌ನಲ್ಲಿ ಕೊಲ್ಲಲ್ಪಟ್ಟ 26 ಜನರಲ್ಲಿ ಅವರು ಕುಟುಂಬದ ಒಬ್ಬರಾದರೂ ಇದ್ದಿದ್ದರೆ ಈ ರೀತಿ ಮಾತನಾಡುತ್ತಿರಲಿಲ್ಲ. ಇದು ದೇಶಭಕ್ತ ನಾಗರಿಕನ ಭಾಷೆಯಲ್ಲ ಎಂದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net