India Vs Pak | ಭಾರತ ಮತ್ತು ಪಾಕ್​​ ಪಂದ್ಯ ವೀಕ್ಷಿಸುವ ಮುನ್ನ ದೇಶಭಕ್ತ ಸೇನೆಯ ಪರಾಕ್ರಮ, ನಾಗರಿಕರ ಬಲಿದಾನ ಸ್ಮರಿಸುತ್ತಾನೆ ಎಂದ ಉದ್ಧವ್​​ ಠಾಕ್ರೆ!

Uddhav Thackeray
Published on

India Vs Pak: ಭಾನುವಾರ ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಕ್ರಿಕೆಟ್ ಪಂದ್ಯದ ವಿರುದ್ಧ ಮಹಾರಾಷ್ಟ್ರದಾದ್ಯಂತ ತಮ್ಮ ಪಕ್ಷದಿಂದ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಶನಿವಾರ(ಸೆ 13) ಘೋಷಿಸಿದ್ದಾರೆ.

ಮುಂಬೈನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಠಾಕ್ರೆ, ಸೆಪ್ಟೆಂಬರ್ 14 ರಂದು ನಡೆಯುವ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಪಂದ್ಯವನ್ನು ನೋಡುವ ಮುನ್ನ ನಿಜವಾದ ದೇಶಭಕ್ತ ನಮ್ಮ ಸೇನೆ ಮತ್ತು ಮುಗ್ಧ ನಾಗರಿಕರ ತ್ಯಾಗವನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತಾನೆ, ಭಾನುವಾರ ನಿಗದಿಯಾಗಿದ್ದ ಉಭಯ ದೇಶಗಳ ನಡುವಿನ ಏಷ್ಯಾಕಪ್ ಪಂದ್ಯವನ್ನು ಬಹಿಷ್ಕರಿಸುವ ಮೂಲಕ ಭಯೋತ್ಪಾದನೆಯ ಬಗೆಗಿನ ಭಾರತದ ನಿಲುವನ್ನು ಜಗತ್ತಿಗೆ ತಿಳಿಸಲು ಉತ್ತಮ ಅವಕಾಶ ಸಿಕ್ಕಿತ್ತು ಎಂದು ಹೇಳಿದರು.

ನಮ್ಮ ಪ್ರಧಾನಿ ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ ಎಂದು ಹೇಳಿದರು, ಹಾಗಾದರೆ ರಕ್ತ ಮತ್ತು ಕ್ರಿಕೆಟ್ ಹೇಗೆ ಒಟ್ಟಿಗೆ ಹರಿಯಲು ಸಾಧ್ಯ? ಯುದ್ಧ ಮತ್ತು ಕ್ರಿಕೆಟ್ ಒಂದೇ ಸಮಯದಲ್ಲಿ ನಡೆಯಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು. ದೇಶಭಕ್ತಿ ಎನ್ನುವುದು ಕೆಲವರಿಗೆ ವ್ಯಾಪಾರವಾಗಿದೆ, ಅವರೆಲ್ಲಾ ನಾಳೆ ಪಂದ್ಯವನ್ನು ಆಡಲಿದ್ದಾರೆ ಏಕೆಂದರೆ ಅವರಿಗೆಲ್ಲಾ ಆ ಪಂದ್ಯದಿಂದ ಸಿಗುವ ಹಣ ಮುಖ್ಯ ಎಂದರು. ನಾಳೆ ಶಿವಸೇನೆ (ಯುಬಿಟಿ) ಮಹಿಳಾ ಕಾರ್ಯಕರ್ತರು ಮಹಾರಾಷ್ಟ್ರದ ಪ್ರತಿ ಮನೆಯಿಂದ ಸಿಂಧೂರ ತೆಗೆದುಕೊಂಡು ಪ್ರಧಾನಿ ಮೋದಿ ಮನೆಗೆ ಕಳುಹಿಸಲಿದ್ದಾರೆ ಎಂದು ಈ ವೇಳೆ ಘೋಷಿಸಿದರು.

ಪಹಲ್ಗಾಮ್ ದಾಳಿಗೆ ಸೇಡು ತೀರಿಸಿಕೊಳ್ಳಲು ನಾವು ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿದ್ದೇವೆ ಮತ್ತು ನಮ್ಮ ರಕ್ಷಣಾ ಸಚಿವರು ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಎಂದು ಹೇಳುತ್ತಾರೆ, ವ್ಯಾಪಾರಕ್ಕಾಗಿ ಯುದ್ಧವನ್ನು ನಿಲ್ಲಿಸಿದೆ ಎಂದು ಅಮೆರಿಕ ಅಧ್ಯಕ್ಷರು ಹೇಳುತ್ತಾರೆ. ಪ್ರಧಾನಿ ಹಿಂದುತ್ವ ಮತ್ತು ದೇಶಕ್ಕಿಂತ ವ್ಯಾಪಾರವನ್ನು ದೊಡ್ಡದಾಗಿ ಪರಿಗಣಿಸುತ್ತಾರೆಯೇ ಎಂದರು.

ಪ್ರಧಾನಿ ಮೋದಿ ವಿಶ್ವದ ಬೇರೆ ಬೇರೆ ದೇಶಗಳಿಗೆ ಇಲ್ಲಿನ ನಿಯೋಗಗಳನ್ನು ಕಳುಹಿಸಿ, ಭಯೋತ್ಪಾದನೆಯ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರಲಿದೆ ಎಂದು ಘೋಷಿಸಿದ್ದರು, ಈಗ ಪ್ರಧಾನಿಗಳು ಈ ಪಂದ್ಯದ ಬಗ್ಗೆ ಏನು ಹೇಳುತ್ತಾರೆ ? ಸರ್ಕಾರ ಕ್ರಿಕೆಟ್ ಪಂದ್ಯ ಆಡಲು ಅನುಮತಿ ನೀಡುವ ಮೂಲಕ ದೇಶಭಕ್ತಿಯನ್ನು ಅಪಹಾಸ್ಯ ಮಾಡುತ್ತಿದೆ, ಇದರಲ್ಲಿ ವ್ಯಾಪಾರವಲ್ಲದೆ ಬೇರೇನೂ ಅಡಗಿಲ್ಲ, ಇನ್ನಾದರೂ ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಯುದ್ಧದ ಅಂತ್ಯವನ್ನು ಘೋಷಿಸಲಿದ್ದಾರೆಯೇ ಎಂದು ಠಾಕ್ರೆ ಪ್ರಶ್ನಿಸಿದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net