

Narendra Modi: ಹೊಸ ಭರವಸೆಯ ಉದಯ ಮಣಿಪುರದ ಬಾಗಿಲನ್ನು ತಟ್ಟುತ್ತಿದೆ, ರಾಜ್ಯದ ಅಭಿವೃದ್ದಿಯಾಗಬೇಕಾದರೆ ಶಾಂತಿ ತುಂಬಾ ಮುಖ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಚುರಾಚಂದ್ಪುರದಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಇಷ್ಟು ದಿನ ಹಿಂಸಾಚಾರ ದೇಶದ ಅದ್ಭುತವಾದ ಪ್ರದೇಶವನ್ನು ಆವರಿಸಿತ್ತು. ಶಿಬಿರಗಳಲ್ಲಿ ವಾಸಿಸುತ್ತಿರುವ ಜನರನ್ನು ಭೇಟಿಯಾಗಿ, ಅವರೊಂದಿಗೆ ಮಾತನಾಡಿದ ನಂತರ ಮಣಿಪುರದ ಬಾಗಿಲುಗಳು ಹೊಸ ಭರವಸೆಯ ಅಧ್ಯಾಯಕ್ಕೆ ತಯಾರಾಗಿದೆ ಎಂದು ಹೇಳಬಲ್ಲೆ, ಇಲ್ಲಿನ ಜನರ ಕಲ್ಯಾಣವಾಗಬೇಕಾದರೆ ಶಾಂತಿಸ್ಥಾಪನೆ ಅಗತ್ಯವಾಗಿದೆ ಎಂದರು.
ಹಿಂಸಾಚಾರ ಪೀಡಿತ ರಾಜ್ಯದ ಜನರ ಜೀವನವನ್ನು ಮೊದಲಿನಂತೆ ಮಾಡಲು ಕೇಂದ್ರ ಸರ್ಕಾರ ತನ್ನ ಪ್ರಯತ್ನಗಳನ್ನು ಮಾಡುತ್ತಿದೆ, ಕಳೆದ 11 ವರ್ಷಗಳಲ್ಲಿ ಈಶಾನ್ಯದಲ್ಲಿ ನಡೆಯುತ್ತಿದ್ದ ಅನೇಕ ವಿವಾದಗಳು ಕೊನೆಗೊಂಡಿವೆ. ಜನರು ಶಾಂತಿಯನ್ನು ಆರಿಸಿಕೊಂಡಿದ್ದಾರೆ. ಮಾತುಕತೆ ಪ್ರಾರಂಭವಾಗಿದೆ. ಶಾಂತಿಯ ಹಾದಿಯಲ್ಲಿ ಮುಂದುವರಿಯಿರಿ ಮತ್ತು ನಿಮ್ಮ ಮಕ್ಕಳ ಭವಿಷ್ಯವನ್ನು ಉತ್ತಮಗೊಳಿಸಿ ಎಂದು ಮನವಿ ಮಾಡಿಕೊಂಡರು. ಭಾರತ ಸರ್ಕಾರ ಸದಾ ನಿಮ್ಮ ಬೆಂಬಲಕ್ಕಿದ್ದು, ನಿರಾಶ್ರಿತರಿಗೆ ಮತ್ತೆ ಮನೆಗಳನ್ನು ಒದಗಿಸುತ್ತಿದೆ. ಜನರ ಕಳವಳಗಳನ್ನು ಹೋಗಲಾಡಿಸಲು ಸರ್ಕಾರ ಕೆಲಸ ಮಾಡುತ್ತಿದೆ ಎಂದರು.
ಮಣಿಪುರವು ಗಡಿ ರಾಜ್ಯವಾಗಿರುವುದರಿಂದ ಇಲ್ಲಿನ ಸಂಪರ್ಕವು ಯಾವಾಗಲೂ ಪ್ರಮುಖ ಸವಾಲಾಗಿದ್ದು, ಹದಗೆಟ್ಟ ರಸ್ತೆಗಳಿಂದಾಗಿ ಇಲ್ಲಿನ ಜನ ಎದುರಿಸಿದ ತೊಂದರೆಗಳನ್ನು ನಾನು ಅರ್ಥಮಾಡಿಕೊಂಡಿದ್ದೇನೆ, ಆದ್ದರಿಂದಲೇ 2014 ರಿಂದ ಮಣಿಪುರದ ಸಂಪರ್ಕವನ್ನು ನಿರಂತರವಾಗಿ ಸುಧಾರಿಸುವತ್ತ ನಾನು ಬಲವಾಗಿ ಗಮನಹರಿಸಿದ್ದೇನೆ ಎಂದು ಅವರು ಹೇಳಿದರು.
ಮಣಿಪುರವು ತನ್ನ ಹೆಸರಿನಲ್ಲಿಯೇ ಮಣಿ ಹೊಂದಿದ್ದು, ಅಮೂಲ್ಯ ರತ್ನದ ಸಾರವಾಗಿದೆ, ಈ ರತ್ನವು ಭವಿಷ್ಯದಲ್ಲಿ ಇಡೀ ಈಶಾನ್ಯವನ್ನು ಬೆಳಗಲು ಸಹಾಯ ಮಾಡುತ್ತದೆ, ರಾಜ್ಯಕ್ಕೆ ಸುಮಾರು 7,000 ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಅಡಿಪಾಯ ಹಾಕಲಾಗಿದೆ, ಇದು ರಾಜ್ಯದ ಪ್ರಗತಿಯನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಮಣಿಪುರದ ಜನರ ಧೈರ್ಯ ಮತ್ತು ಚೈತನ್ಯವನ್ನು ಶ್ಲಾಘಿಸಿದ ಪ್ರಧಾನಿ, ಧೈರ್ಯ ಮತ್ತು ದೃಢಸಂಕಲ್ಪದ ಭೂಮಿ ಎಂದು ಕರೆದರು, ಇಲ್ಲಿನ ಬೆಟ್ಟಗಳು ಪ್ರಕೃತಿಯ ಅಮೂಲ್ಯ ಕೊಡುಗೆ ಮಾತ್ರವಲ್ಲದೆ ಜನರ ನಿರಂತರ ಕಠಿಣ ಪರಿಶ್ರಮದ ಪ್ರತಿಬಿಂಬವೂ ಆಗಿದೆ ಎಂದು ಹೇಳಿದರು.
ಇಂದು ಹೆಲಿಕಾಪ್ಟರ್ ಹಾರಾಡದಿರುವುದು ವರದಾನ
ಭಾರೀ ಮಳೆಯಿಂದಾಗಿ ತಮ್ಮ ಹೆಲಿಕಾಪ್ಟರ್ ಇಂದು ಹಾರಲು ಸಾಧ್ಯವಾಗದ ಕಾರಣ ರಸ್ತೆಯ ಮೂಲಕ ಪ್ರಯಾಣಿಸಬೇಕಾಯಿತು ಎಂದು ಪ್ರಧಾನಿ ಹೇಳಿದರು. ಮಾರ್ಗ ಬದಲಾವಣೆಯು ಸ್ಮರಣೀಯ ಅನುಭವವಾಗಿ ಮಾರ್ಪಡಾಯಿತು, ಇದರಿಂದಾಗಿ ದಾರಿಯುದ್ದಕ್ಕೂ ಜನರ ಉತ್ಸಾಹವನ್ನು ವೀಕ್ಷಿಸುವ ಅವಕಾಶ ದೊರೆಯಿತು ಎಂದು ಹೇಳಿದರು.(ಏಜೆನ್ಸೀಸ್)