26 ಜೀವಗಳಿಗಿಂತ ಹಣದ ಮೌಲ್ಯ ಹೆಚ್ಚೇ?; ಇಂಡಿಯಾ-ಪಾಕ್ ಕ್ರಿಕೆಟ್ ಬಗ್ಗೆ ಅಸಾದುದ್ದೀನ್ ಓವೈಸಿ ಕಿಡಿ| Asaduddin Owaisi

Untitled design (17)
Published on

Asaduddin Owaisi: ಏಷ್ಯಾ ಕಪ್-2025 ಟೂರ್ನಿಯಲ್ಲಿ ಇಂದು (ಸೆ.14) ಇಂಡಿಯಾ-ಪಾಕ್ ನಡುವೆ ಕ್ರಿಕೆಟ್ ಪಂದ್ಯ ಆಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ 26 ಜೀವಗಳಿಗಿಂತ ಹಣದ ಮೌಲ್ಯವೇ ಹೆಚ್ಚೇ? ಎಂದು ಕೇಂದ್ರ ಸರ್ಕಾರ ಮತ್ತು ಬಿಜೆಪಿ ವಿರುದ್ಧ ಹೈದರಾಬಾದ್​ ಸಂಸದ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಾಗ್ದಾಳಿ ನಡೆಸಿದ್ದಾರೆ.

ಭಾನುವಾರ ಹೈದರಾಬಾದ್​ನಲ್ಲಿ ಮಾತನಾಡಿರುವ ಅವರು, ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿ, ಆಪರೇಷನ್ ಸಿಂಧೂರ್ ನಂತರ ಉಭಯ ದೇಶಗಳ ಉದ್ವಿಗ್ನತೆಯ ನಡುವೆಯೇ, ಪಾಕಿಸ್ತಾನದೊಂದಿಗೆ ಏಷ್ಯಾ ಕಪ್ ಕ್ರಿಕೆಟ್ ಪಂದ್ಯವನ್ನು ಆಡಲು ಭಾರತಕ್ಕೆ ಅವಕಾಶ ನೀಡಿದ್ದಕ್ಕಾಗಿ ಬಿಜೆಪಿ ಸ್ಪಷ್ಟನೆ ನೀಡಲಿ ಎಂದು ಓವೈಸಿ ಕಿಡಿಕಾರಿದ್ದಾರೆ.

ಅಸ್ಸಾಂ ಸಿಎಂ, ಉತ್ತರ ಪ್ರದೇಶ ಸಿಎಂ ಮತ್ತು ಬಿಜೆಪಿಗರಿಗೆ, ಪಹಲ್ಗಾಮ್​ನಲ್ಲಿ ನಮ್ಮ 26 ನಾಗರಿಕರ ಧರ್ಮವನ್ನು ಕೇಳಿ ಗುಂಡು ಹಾರಿಸಿದ ಪಾಕಿಸ್ತಾನದ ವಿರುದ್ದ ಕ್ರಿಕೆಟ್ ಪಂದ್ಯ ಆಡಲು ನಿರಾಕರಿಸುವ ಅಧಿಕಾರ ನಿಮಗೆ ಇಲ್ಲವೇ?, 26 ಮಂದಿಯ ಜೀವಕ್ಕಿಂತ ಕ್ರಿಕೆಟ್ ಪಂದ್ಯದ ಮೂಲಕ ಗಳಿಸಿದ ಹಣವೇ ಹೆಚ್ಚು ಮೌಲ್ಯಯುತವೇ ಎಂದು ಪ್ರಶ್ನಿಸಿದ್ದಾರೆ.

ಪ್ರಧಾನಿ ಮೋದಿ "ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ, ಮಾತುಕತೆ ಮತ್ತು ಭಯೋತ್ಪಾದನೆ ಒಟ್ಟಿಗೆ ನಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಆದರೆ ಈಗ ಬಿಸಿಸಿಐ ಒಂದು ಕ್ರಿಕೆಟ್ ಪಂದ್ಯದಿಂದ ಎಷ್ಟು ಹಣವನ್ನು ಪಡೆಯುತ್ತದೆ? 2000 ಕೋಟಿ ರೂ., 3000 ಕೋಟಿ ರೂ.? ನಮ್ಮ 26 ನಾಗರಿಕರ ಜೀವಕ್ಕಿಂತ ಹಣದ ಮೌಲ್ಯ ಹೆಚ್ಚೇ? ಎಂದು ಪ್ರಧಾನಿ ಮೋದಿಯನ್ನು ಕುಟುಕಿದ್ದಾರೆ.

ನಾವು ನಿನ್ನೆಯೂ ಮೃತರಾದ 26 ನಾಗರಿಕರೊಂದಿಗೆ ನಿಂತಿದ್ದೇವೆ, ಇಂದು ಅವರೊಂದಿಗೆ ನಿಲ್ಲುತ್ತೇವೆ ಮತ್ತು ನಾಳೆಯೂ ಅವರೊಂದಿಗೆ ನಿಲ್ಲುತ್ತೇವೆ ಎಂದು ಹೇಳಿದ್ದಾರೆ.

ಇಂಡಿಯಾ-ಪಾಕ್ ಕ್ರಿಕೆಟ್ ಪಂದ್ ಬಹಿಷ್ಕರಿಸಲು ವಿಪಕ್ಷಗಳು ಕರೆ

ಇಂದು ಸಂಜೆ ನಡೆಯಲಿರುವ ಕ್ರಿಕೆಟ್ ಪಂದ್ಯವನ್ನು ಬಹಿಷ್ಕರಿಸುವಂತೆ ಹಲವು ವಿರೋಧ ಪಕ್ಷದ ನಾಯಕರು ಕರೆ ನೀಡಿದ್ದಾರೆ. ಕಾಂಗ್ರೆಸ್ ನಾಯಕ ಅಭಿಷೇಕ್ ದತ್ ಭಾರತ ಈ ಪಂದ್ಯದಲ್ಲಿ ಆಡುವುದನ್ನು ಟೀಕಿಸಿದ್ದು, ಪಂದ್ಯವನ್ನು ರದ್ದುಗೊಳಿಸಬೇಕೆಂದು ಕರೆ ನೀಡಿದ್ದಾರೆ.

ಇದು ಕೇಂದ್ರ ಸರ್ಕಾರದ ಭಯೋತ್ಪಾದನೆಯೊಂದಿಗೆ ಮಾತುಕತೆ ಇಲ್ಲ ಎಂಬ ಮಾತಿಗೆ ವಿರುದ್ಧವಾಗಿದೆ.ನೀವು ಆಪರೇಷನ್ ಸಿಂಧೂರ್ ಬಗ್ಗೆ ಮಾತನಾಡುತ್ತೀರಿ, ಭಯೋತ್ಪಾದನೆಯೊಂದಿಗೆ ಮಾತುಕತೆ ಇಲ್ಲ, ವ್ಯಾಪಾರವಿಲ್ಲ ಎಂದು ಹೇಳುತ್ತೀರಿ. ಆದರೆ ಪಾಕ್​ನೊಂದಿಗೆ ಕ್ರಿಕೆಟ್ ಆಡುತ್ತೀರಿ ಎಂದು ಕಿಡಿಕಾರಿದ್ದಾರೆ.

ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಮಾತನಾಡಿ, ಪ್ರಧಾನಿ ಮೋದಿಯವರ ನೀರು ಮತ್ತು ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ ಎಂಬ ಹೇಳಿಕೆ ಉಲ್ಲೇಖಿಸಿ, "ಯುದ್ಧ ಮತ್ತು ಕ್ರಿಕೆಟ್ ಒಂದೇ ಸಮಯದಲ್ಲಿ ಹೇಗೆ ಸಾಧ್ಯ" ಎಂದು ಪ್ರಶ್ನಿಸಿದ್ದಾರೆ. ಇವರು ದೇಶಭಕ್ತಿಯನ್ನೇ ವ್ಯಾಪಾರ ಮಾಡಿಕೊಂಡಿದ್ದಾರೆ. ಅವರಿಗೆ ಕೇವಲ ಹಣ ಬೇಕು" ಎಂದು ವಾಗ್ದಾಳಿ ನಡೆಸಿದ್ದಾರೆ.

ಇಂಡಿಯಾ-ಪಾಕ್ ಪಂದ್ಯ ಕುರಿತು ಬಿಜೆಪಿ ಪ್ರತಿಕ್ರಿಯೆ

ಇಂಡಿಯಾ-ಪಾಕ್ ಪಂದ್ಯದ ಬಗ್ಗೆ ಕೇಳಿಬರುತ್ತಿರುವ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಪಂದ್ಯವನ್ನು ವಿರೋಧಿಸುವುದ ನ್ಯಾಯಯುತವಲ್ಲ ಎಂದಿದೆ.

ಬಿಜೆಪಿ ನಾಯಕ ದಿಲೀಪ್ ಘೋಷ್ ಮಾತನಾಡಿ, ಕಾಂಗ್ರೆಸ್ ಆಳ್ವಿಕೆಯಲ್ಲೂ ಪಂದ್ಯಗಳನ್ನು ಆಡಲಾಗುತ್ತಿತ್ತು. ಪಾಕಿಸ್ತಾನದೊಂದಿಗಿನ ಪಂದ್ಯವನ್ನು ಆಡಿದಾಗ ಅವರ ದೇಶಭಕ್ತಿ ಜಾಗೃತವಾಗುತ್ತದೆ. ಅವರನ್ನು ವ್ಯಾಪಾರದಲ್ಲಿ ಬಹಿಷ್ಕರಿಸಲಾಗಿದೆ. ನಾವು ಪಾಕಿಸ್ತಾನದ ವಿರುದ್ಧ ಹೋರಾಡಬೇಕು. ನಮ್ಮ ನೆಲದಲ್ಲಿ ನಾವು ಅವರೊಂದಿಗೆ ಹೋರಾಡಿ ಅವರನ್ನು ಸೋಲಿಸಿದ್ದೇವೆ. ಪಾಕಿಸ್ತಾನದ ಅವರ ನೆಲದಲ್ಲಿ ನಾವು ಸೋಲಿಸಿದ್ದೇವೆ. ವಿದೇಶಿ ನೆಲದಲ್ಲಿಯೂ ಅವರನ್ನು ಸೋಲಿಸುತ್ತೇವೆ.  ನಾವು ಮೈದಾನದಿಂದ ಹಿಂದೆ ಸರಿಯಬಾರದು. ಪಾಕಿಸ್ತಾನಿ ಕಲಾವಿದರು ಇಲ್ಲಿಗೆ ಬಂದು, ಪ್ರದರ್ಶನ ನೀಡಿ, ವರ್ಷಗಳ ಕಾಲ ಹಣ ಸಂಪಾದಿಸಿದರು" ಎಂದು ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net