

ನವದೆಹಲಿ: ಇಂದಿನಿಂದ (ಜೂನ್. 01) ಪ್ರಾರಂಭವಾಗಿರುವ ಐಸಿಸಿ ಟಿ20 ವಿಶ್ವಕಪ್ ಟ್ರೋಫಿ ಪಂದ್ಯಾವಳಿಗಳನ್ನು ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ ದೇಶಗಳು ಅತಿಥ್ಯ ವಹಿಸಿದ್ದು, 20 ತಂಡಗಳ ನಡುವೆ ಟ್ರೋಫಿಗಾಗಿ ಭಾರೀ ಹಣಾಹಣಿ ಸಿದ್ಧವಾಗಿದೆ. ಈಗಾಗಲೇ ಟೀಂ ಇಂಡಿಯಾದ ಆಟಗಾರರ ಪಟ್ಟಿ ಕೂಡ ಅಧಿಕೃತವಾಗಿ ಘೋಷಣೆಯಾಗಿದ್ದು, ಯಾರೆಲ್ಲಾ ಎದುರಾಳಿಗಳ ವಿರುದ್ಧ ಮೈದಾನಕ್ಕಿಳಿಯಲಿದ್ದಾರೆ ಎಂಬುದು ಕ್ರಿಕೆಟ್ ಅಭಿಮಾನಿಗಳಿಗೆ ತಿಳಿದಿದೆ. ಇನ್ನು ತಂಡದಲ್ಲಿ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇರುವುದು ಅಭಿಮಾನಿಗಳಿಗೆ ಅತೀವ ಸಂತಸ ತಂದಿದ್ದೇ ಆದರೂ ಮಾಜಿ ಕ್ರಿಕೆಟಿಗರೊಬ್ಬರಿಗೆ ಮಾತ್ರ ಇದು ಭಾರೀ ಅಸಮಾಧಾನ ಮೂಡಿಸಿದೆ.
ಟೀಂ ಇಂಡಿಯಾದ ಸ್ಕ್ವ್ಯಾಡ್ಗೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಆಯ್ಕೆಯನ್ನು ಟೀಕಿಸಿದ ಭಾರತ ತಂಡದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್, "ವಿರಾಟ್ ಹಾಗೂ ರೋಹಿತ್ ಆಯ್ಕೆ ಸರಿಯಿಲ್ಲ. ಇದು ತಂಡದಲ್ಲಿರುವ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಅವರಿಗೆ ಉತ್ತಮ ಪ್ರದರ್ಶನ ನೀಡಲು ಮತ್ತು ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಹೆಚ್ಚು ಅವಕಾಶಗಳನ್ನು ನೀಡುವುದಿಲ್ಲ" ಎಂದರು.
"ನಾನು ಆಯ್ಕೆಗಾರರ ಸ್ಥಾನದಲ್ಲಿ ಇದ್ದಿದ್ದರೆ, ಖಂಡಿತವಾಗಿ ಯುವ ಆಟಗಾರರಿಗೆ ಹೆಚ್ಚು ಅವಕಾಶ ಕಲ್ಪಿಸುತ್ತಿದ್ದೆ. ಆದ್ರೆ, ಬಿಸಿಸಿಐನ ಆಯ್ಕೆಗಾರರು ಮಾತ್ರ ಕ್ರಿಕೆಟ್ ಐಕಾನ್ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾರಿಗೆ ಸೀಮಿತವಾಗಿದ್ದಾರೆ ಎಂಬುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಐಪಿಎಲ್ನಲ್ಲಿ ವಿರಾಟ್ ಅವರ ಓಪನಿಂಗ್ ಫಾರ್ಮ್ ನೋಡಿದ ಮೇಲೆ ಅವರನ್ನು ಮೂರನೇ ಕ್ರಮಾಂಕದಲ್ಲಿ ಕಳಿಸುವುದು ಕಷ್ಟಸಾಧ್ಯ. ಇನ್ನು ರೋಹಿತ್ ಬಗ್ಗೆ ಕೇಳುವುದೇ ಬೇಡ. ಓಪನರ್ ಆಗಿ ಕ್ಯಾಪ್ಟನ್ ಕ್ರೀಸ್ಗೆ ಇಳಿಯಲೇಬೇಕು. ಹೀಗಿದ್ದಮೇಲೆ ಇದು ತಂಡದಲ್ಲಿರುವ ಯುವ ಆಟಗಾರನ ಮೇಲೆ ಎಷ್ಟು ಪ್ರಭಾವ ಬೀರುತ್ತದೆ ಎಂಬುದನ್ನು ಸೆಲೆಕ್ಟರ್ಸ್ ಯೋಚಿಸಬೇಕಿತ್ತು" ಎಂದು ಕಿಡಿಕಾರಿದ್ದಾರೆ.
"ಓಪನಿಂಗ್ನಲ್ಲಿ ಇಬ್ಬರು ಬಲಗೈ ಬ್ಯಾಟ್ಸ್ಮನ್ಗಳು ಕ್ರೀಸ್ಗೆ ಬರಲಿದ್ದಾರೆ. ಇದರಿಂದ ಎಡಗೈ ಬ್ಯಾಟ್ಸ್ಮನ್ ಆದ ಜೈಸ್ವಾಲ್ಗೆ ತೊಂದರೆಯಾಗಲಿದೆ. ಇವರಿಬ್ಬರು ಓಪನಿಂಗ್ ಬಂದಾಗ ಯಶಸ್ವಿ ಮಾತ್ರ ಹೊರಗೆ ಕುಳಿತು ಪಂದ್ಯ ವೀಕ್ಷಿಸಬೇಕಷ್ಟೇ" ಎಂದಿದ್ದಾರೆ,(ಏಜೆನ್ಸೀಸ್).