

ಸುಶಾಂತ್ ಸಿಂಗ್ ಆತ್ಮಹತ್ಯೆ ವಿಚಾರವಾಗಿ ಬಾಲಿವುಡ್ನ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ, ಸೋಮವಾರ ಪೊಲೀಸರ ವಿಚಾರಣೆಗೆ ಹಾಜರಾಗಿದ್ದಾರೆ. ಈ ಸಂದರ್ಭದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸುಶಾಂತ್ ಅವರನ್ನು ನೋಡಿಲ್ಲ, ಅವರೊಂದಿಗೆ ಮಾತನಾಡಿಲ್ಲ ಎಂದು ಬನ್ಸಾಲಿ ಹೇಳಿದ್ದಾರೆ ಎನ್ನಲಾಗಿದೆ.
ಕಳೆದ ತಿಂಗಳು ಬಾಲಿವುಡ್ ನಟ ಸುಶಾಂತ್ ಸಿಂಗ್ ಡಿಪ್ರೆಶನ್ನಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವಿಷಯವಾಗಿ ಕುಟುಂಬದವರು, ಹಿತೈಷಿಗಳು, ಮನೆಗೆಲಸದವರು ... ಹೀಗೆ 29 ಹೆಚ್ಚು ಜನರನ್ನು ಮುಂಬೈ ಪೊಲೀಸ್ ವಿಚಾರಣೆಗೆ ಒಳಪಡಿಸಿದ್ದಾರೆ. 30ನೆಯವರಾಗಿ ಸಂಜಯ್ ಲೀಲಾ ಬನ್ಸಾಲಿ ಸೋಮವಾರ ವಿಚಾರಣೆಗೆ ಹಾಜರಾಗಿದ್ದಾರೆ. ಸುಮಾರು ನಾಲ್ಕು ಗಂಟೆಗಳ ಕಾಲ ವಿಚಾರಣೆಗೆ ಒಳಗಾದ ಬನ್ಸಾಲಿ, ಈ ಸಂದರ್ಭದಲ್ಲಿ ಹಲವು ವಿಷಯಗಳು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರಮುಖವಾಗಿ, ಸುಶಾಂತ್ ಅವರನ್ನು ಬನ್ಸಾಲಿ ತಮ್ಮ ಯಾವುದೇ ಚಿತ್ರದಿಂದಲೂ ಕೈಬಿಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ. ಬನ್ಸಾಲಿ, 'ರಾಮ್-ಲೀಲಾ' ಮತ್ತು 'ಬಾಜಿರಾವ್ ಮಸ್ತಾನಿ' ಎರಡು ಚಿತ್ರಗಳಲ್ಲಿ ಸುಶಾಂತ್ ಜತೆಗೆ ಕೆಲಸ ಮಾಡುವುದಕ್ಕೆ ಮುಂದಾಗಿದ್ದರಂತೆ. ಆದರೆ, ಸುಶಾಂತ್ ಬೇರೊಂದು ಚಿತ್ರದಲ್ಲಿ ಬ್ಯುಸಿಯಾಗಿದ್ದ ಕಾರಣ, ನಟಿಸುವುದಕ್ಕೆ ಹಿಂದೇಟು ಹಾಕಿದರಂತೆ. 2016ರ ನಂತರ ಅವರನ್ನು ನೋಡಿಲ್ಲ ಮತ್ತು ಮಾತಾಡಿಲ್ಲ ಎಂದು ಬನ್ಸಾಲಿ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.
ಅಷ್ಟೇ ಅಲ್ಲ, ಬನ್ಸಾಲಿ ಯಾವತ್ತೂ ಸುಶಾಂತ್ ಅವರ ಹತ್ತಿರದವರಾಗಿರಲಿಲ್ಲವಂತೆ. ಅವರಿಬ್ಬರ ಸಂಬಂಧ ಒಬ್ಬ ನಟ ಮತ್ತು ನಿರ್ದೇಶಕನದ್ದಾಗಿದ್ದು, ಅದರ ಹೊರತಾಗಿ ಯಾವುದೇ ಗೆಳೆತನ ಇರಲಿಲ್ಲವಂತೆ. ಹಾಗಾಗಿ, ಸುಶಾಂತ್ಗೆ ಡಿಪ್ರೆಶನ್ ಇದ್ದ ವಿಷಯ ತಮಗೆ ಗೊತ್ತಿಲ್ಲ ಎಂದು ಬನ್ಸಾಲಿ ಈ ವಿಚಾರಣೆಯ ಸಂದರ್ಭದಲ್ಲಿ ಹೇಳಿದ್ದಾರೆ ಎನ್ನಲಾಗುತ್ತಿದೆ.
ಸುಶಾಂತ್ ಸಿಂಗ್ ಆತ್ಮಹತ್ಯೆ ಸಂಬಂಧ ಬನ್ಸಾಲಿ ಅವರನ್ನು ಎರಡು ಪೊಲೀಸ್ ಸ್ಟೇಶನ್ಗಳಲ್ಲಿ ಸುಮಾರು ನಾಲ್ಕು ತಾಸುಗಳ ಕಾಲ ವಿಚಾರಣೆ ಮಾಡಲಾಗಿದ್ದು, ಈ ಸಂದರ್ಭದಲ್ಲಿ 40ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಿ, ಅವರಿಂದ ಉತ್ತರ ಪಡೆಯಲಾಗಿದೆ.