

ನಾಗಶೇಖರ್ ನಿರ್ದೇಶನದ ‘ಶ್ರೀಕೃಷ್ಣ @ ಜಿಮೇಲ್ ಡಾಟ್‌ಕಾಮ್’ ಚಿತ್ರದ ಮುಹೂರ್ತ ಇದೇ 18ಕ್ಕೆ ಫಿಕ್ಸ್ ಆಗಿದೆ. ಮುಂದಿನ ಗುರುವಾರ ಚಿತ್ರದ ಸಾಂಗ್ ಕಂಪೋಸಿಂಗ್ ಶುರುವಾಗುವುದರ ಜತೆಗೆ, ಸರಳವಾಗಿ ಮುಹೂರ್ತ ಕೂಡಾ ಪ್ರಾರಂಭವಾಗಲಿದೆ.
ಅಂದಹಾಗೆ, ನಿರ್ಮಾಪಕ ಸಂದೇಶ್ ನಾಗರಾಜ್ ಅವರಿಗೆ ನಾಗಶೇಖರ್ ನಿರ್ದೇಶಿಸಿಕೊಡುತ್ತಿರುವ ಎರಡನೆಯ ಚಿತ್ರ ಇದು. ಕಳೆದ ವರ್ಷ ಬಿಡುಗಡೆಯಾದ ಅಭಿಷೇಕ್ ಅಂಬರೀಶ್ ಅಭಿನಯದ ಮೊದಲ ಚಿತ್ರ ‘ಅಮರ್’ ಚಿತ್ರವನ್ನು ಸಹ ನಾಗಶೇಖರ್ ನಿರ್ದೇಶನ ಮಾಡಿದ್ದರು. ಆದರೆ, ಚಿತ್ರ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಈ ಮಧ್ಯೆ ನಿರ್ಮಾಪಕ-ನಿರ್ದೇಶಕರ ನಡುವೆ ದೊಡ್ಡ ಗಲಾಟೆಯಾಗಿದೆ, ಚಿತ್ರ ಸೋತಿದ್ದಕ್ಕೆ ಸಿಟ್ಟಾಗಿ ಸಂದೇಶ್ ನಾಗರಾಜ್ ನಿರ್ದೇಶಕರನ್ನು ದೂರ ಇಟ್ಟಿದ್ದಾರೆ ಎಂಬಂತಹ ಸುದ್ದಿಗಳು ಗಾಂಧಿನಗರದಲ್ಲಿ ಕೇಳಿ ಬಂದಿದ್ದವು.
ಈಗ ನೋಡಿದರೆ, ನಾಗಶೇಖರ್ ಅವರನ್ನು ಕರೆದು ಸಂದೇಶ್ ನಾಗರಾಜ್ ಇನ್ನೊಂದು ಚಿತ್ರ ಕೊಟ್ಟಿದ್ದಾರೆ. ಸಂದೇಶ್ ನಾಗರಾಜ್ ಮತ್ತು ನಾಗಶೇಖರ್ ನಡುವೆ ವೈಮನಸ್ಯ ಇರುವಾಗ, ಇವೆಲ್ಲಾ ಹೇಗೆ ಸಾಧ್ಯ ಎಂಬ ಪ್ರಶ್ನೆ ಬರುವುದು ಸಹಜ.
ಈ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿದ ನಾಗಶೇಖರ್, ‘ಈ ಸುದ್ದಿ ನಾನೂ ಕೇಳಿದ್ದೆ. ಆದರೆ, ಇವೆಲ್ಲಾ ಅಪ್ಪಟ ಸುಳ್ಳು. ನಮ್ಮಿಬ್ಬರ ನಡುವೆ ಜಗಳ ಆಗಿದ್ದರೆ, ಅವರು ನನ್ನನ್ನು ಮತ್ತೆ ಕರೆದು ಇನ್ನೊಂದು ಸಿನಿಮಾ ಮಾಡುವುದಕ್ಕೆ ಹೇಳುತ್ತಿದ್ದರಾ? ಹೋಗಲಿ ಅಷ್ಟೆಲ್ಲಾ ಜನರಿರುವಾಗ ನನ್ನನ್ನು ಹತ್ತಿರ ಸೇರಿಸುತ್ತಿದ್ದರಾ? ನಮ್ಮಿಬ್ಬರ ನಡುವೆ ಯಾವುದೇ ಜಗಳವಾಗಿಲ್ಲ. ನಿಜ ಹೇಳಬೇಕೆಂದರೆ, ನಾನು ಇವತ್ತು ಸಂತೋಷವಾಗಿದ್ದರೆ ಅದಕ್ಕೆ ಅವರೇ ಕಾರಣ. ಅವರು ನನ್ನ ಗಾಡ್‌ಫಾದರ್. ನನಗೊಂದು ಕಾರ್ ಕೊಡಿಸಿದ್ದಾರೆ. ನಮ್ಮಿಬ್ಬರ ಸಂಬಂಧ ಬಹಳ ಚೆನ್ನಾಗಿಯೇ ಇದೆ’ ಎನ್ನುತ್ತಾರೆ ನಾಗಶೇಖರ್.
ಇದನ್ನೂ ಓದಿ: ಬಾಲಿವುಡ್ನ ಈ ಸ್ಟಾರ್ ನಟಿ ಯಾರೆಂದು ನಿಮಗೆ ಗೊತ್ತಾ?
‘ಶ್ರೀಕೃಷ್ಣ @ ಜಿಮೇಲ್ ಡಾಟ್‌ಕಾಮ್’ ಚಿತ್ರದಲ್ಲಿ ‘ಲವ್ ಮಾಕ್ಟೇಲ್’ ಖ್ಯಾತಿಯ ಕೃಷ್ಣ ನಟಿಸುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದೆ.