

ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನರಾಗಿ ನಾಳೆ ಭಾನುವಾರಕ್ಕೆ ಒಂದು ವಾರವಾಗುತ್ತಿದೆ. ಒಂದು ವಾರವಾದರೂ ಚಿರಂಜೀವಿಗೆ ಏನು ಸಮಸ್ಯೆಯಾಗಿತ್ತು ಎಂಬ ಪ್ರಶ್ನೆಗೆ ಸರಿಯಾದ ಉತ್ತರ ಸಿಗುತ್ತಿಲ್ಲ.
ಚಿರಂಜೀವಿ ಸರ್ಜಾ ಅವರು ಹೃದಯಾಘಾತದಿಂದ ನಿಧನರಾದರು ಎಂದು ಆಸ್ಪತ್ರೆಯು ಅಧಿಕೃತವಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಆದರೆ, ಚಿರಂಜೀವಿಗೆ ಇಷ್ಟಕ್ಕೂ ಆಗಿದ್ದೇನು ಎಂಬುದು ಇನ್ನೂ ಸ್ಪಷ್ಟವಾಗುತ್ತಿಲ್ಲ.
ಹೃದಯಾಘಾತವಾಗುವುದಕ್ಕಿಂತ ಎರಡು ದಿನಗಳ ಮುಂಚೆಯೇ ಅವರಿಗೆ ಲಘು ಹೃದಯಾಘಾತವಾಗಿತ್ತಂತೆ, ಹಿಂದಿನ ದಿನವಷ್ಟೇ ಫಿಟ್ಸ್ ಬಂದಿತ್ತಂತೆ, ಅವರಿಗೆ ಬ್ರೈನ್ ಸ್ಟ್ರೋಕ್ ಆಗಿತ್ತಂತೆ, ಈ ಸಂಬಂಧ ಅವರು ಒಂದು ಬಾರಿ ಆಸ್ಪತ್ರೆಗೆ ಹೋಗಿ ಬಂದಿದ್ದರಂತೆ, ಆ ನಂತರ ಭಾನುವಾರ ಮಧ್ಯಾಹ್ನ ಮತ್ತೊಮ್ಮೆ ವೈದ್ಯರನ್ನು ಭೇಟಿ ಮಾಡುವುದಕ್ಕೆ ಅಪಾಯಿಂಟ್ಮೆಂಟ್ ತೆಗೆದುಕೊಂಡಿದ್ದರಂತೆ, ಅವರು ಮನೆಯಲ್ಲಿ ಕುಸಿದು ಬಿದ್ದಾಗ ಯಾರೂ ಇರಲಿಲ್ಲವಂತೆ ... ಹೀಗೆ ಹಲವು ಅಂತೆ-ಕಂತೆಗಳು ಕೇಳಿ ಬರುತ್ತಲೇ ಇವೆ. ಹಾಗಾಗಿ ಚಿರು ಸಾವಿಗೆ ಹೃದಯಾಘಾತ ಕಾರಣವಾದರೂ, ಅದಕ್ಕೆ ಪೂರಕವಾಗಿ ಅವರಿಗೆ ಏನೇನು ಆರೋಗ್ಯ ಸಮಸ್ಯೆಗಳಿದ್ದವು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಇನ್ನು ಈ ಕುರಿತಾಗಿ ಅವರ ಕುಟುಂಬದವರು ಇನ್ನಷ್ಟೇ ಮಾತನಾಡಬೇಕಿದೆ. ಕಾರಣ, ಚಿರಂಜೀವಿಗೆ ಆರೋಗ್ಯದ ಸಮಸ್ಯೆ ಎದುರಾದಾಗ ಅವರ ಮೆನಯವರೆಲ್ಲರೂ ಆಸ್ಪತ್ರೆಗೆ ಹೊರಟು ನಿಂತರು. ಆಸ್ಪತ್ರೆಯಲ್ಲಿ ಚಿರು ನಿಧನರಾಗಿದ್ದಾರೆಂಬ ಸುದ್ದಿ ಕೇಳಿದಾಗ ದಿಗ್ಭ್ರಆಂತರಾದರು. ಅರ್ಜುನ್ ಸರ್ಜಾ ಅವರ ಚೆನ್ನೈನಲ್ಲಿದ್ದುದರಿಂದ ಅವರು ಬರುವುದು ತಡವಾಯಿತು. ಧ್ರುವ ಹೆಗಲ ಮೇಲೆ ಆ ಸಮಯಕ್ಕೆ ಹಲವು ಜವಾಬ್ದಾರಿಗಳಿದ್ದುದರಿಂದ ಅವರು ಮಾತನಾಡಲಾಗಲಿಲ್ಲ.
ಹಾಗಾಗಿ ಚಿರುಗೆ ನಿಖರವಾಗಿ ಏನಾಗಿತ್ತು, ಅವರಿಗಿದ್ದ ಆರೋಗ್ಯ ಸಮಸ್ಯೆಗಳೇನು, ಅದಕ್ಕೆ ಯಾವ ಚಿಕಿತ್ಸೆ ಪಡೆಯುತ್ತಿದ್ದರು ಎಂಬುದನ್ನು ಕುಟುಂಬದವರಿಗೆ ಹೇಳುವುದಕ್ಕೆ ಸಾಧ್ಯವಾಗಲಿಲ್ಲ. ಇನ್ನು ಚಿರು ಅವರನ್ನು ದೂರದಿಂದ ಬಲ್ಲವರು ತಮಗೆ ಗೊತ್ತಿದ್ದಷ್ಟನ್ನು ಹೇಳುತ್ತಾ ಹೋದರು. ಹಾಗಾಗಿ ಚಿರಂಜೀವಿ ಅವರ ಸಾವಿಗೆ ಹಲವು ಕಾರಣಗಳು ಕೇಳಿ ಬರುತ್ತಿವೆ.
ಈ ಒಂದು ವಾರದಲ್ಲಿ ಚಿರು ಸಾವಿಗೆ ಕಾರಣವೇನು, ಅವರಿಗಿದ್ದ ಆರೋಗ್ಯದ ಸಮಸ್ಯೆಗಳೇನು ಎಂಬುದರ ಬಗ್ಗೆ ಸಾಕಷ್ಟು ಚರ್ಚೆಯಾಗಿವೆ. ಆದರೆ, ಯಾವುದಕ್ಕೂ ಸ್ಪಷ್ಟವಾದ ಉತ್ತರ ಇದುವರೆಗೂ ಸಿಕ್ಕಿಲ್ಲ. ಇನ್ನಾದರೂ ಸರ್ಜಾ ಕುಟುಂಬದದವರು, ಚಿರುಗಿದ್ದ ಆರೋಗ್ಯದ ಸಮಸ್ಯೆಗಳೇನು ಎಂಬ ಬಗ್ಗೆ ಸ್ಪಷ್ಟತೆ ಕೊಡುತ್ತಾರಾ ಎಂದು ಕಾದು ನೋಡಬೇಕಿದೆ.