ಶಿವಣ್ಣ ಹುಟ್ಟುಹಬ್ಬಕ್ಕೆ ಭಜರಂಗಿ 2 ತಂಡದ ಸರ್​ಪ್ರೈಸ್​ ಗಿಫ್ಟ್​!

Bhajarangi 2 - Final
Published on

ಶಿವರಾಜಕುಮಾರ್ ಅಭಿನಯದ ‘ಭಜರಂಗಿ 2’ ಕೆಳದ ವರ್ಷವೇ ಪ್ರಾರಂಭವಾಗಿತ್ತು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಇಷ್ಟರಲ್ಲಿ ಚಿತ್ರ ಬಿಡುಗಡೆಯಾಗುತಿತ್ತೇನೋ. ಆದರೆ, ಎರಡೆರೆಡು ಅಗ್ನಿ ಆಕಸ್ಮಿಕಗಳಿಂದ ಚಿತ್ರೀಕರಣ ತಡವಾಗುತ್ತಾ ಹೋಯಿತು. ಇನ್ನು ಕೆಲವೇ ದಿನಗಳ ಚಿತ್ರೀಕರಣ ಇದೆ ಎನ್ನುವಷ್ಟರಲ್ಲಿ ಲಾಕ್‌ಡೌನ್ ಶುರುವಾಯಿತು.

ಲಾಕ್‌ಡೌನ್ ಶುರುವಾದ ಮೇಲೆ, ಬೇರೆಲ್ಲಾ ದೊಡ್ಡ ಚಿತ್ರಗಳು ಆಗಾಗ ಸುದ್ದಿಯಾಗುತ್ತಿದ್ದರೂ, ಅದೇ ‘ಭಜರಂಗಿ 2’ ಚಿತ್ರದ ಬಗ್ಗೆ ಚಿತ್ರತಂಡ ಮಾತನಾಡಿರಲಿಲ್ಲ. ಸದ್ದಿಲ್ಲದೆ ಕೆಲಸಗಳು ನಡೆಯುತ್ತಲೇ ಇದ್ದು, ಈಗ ಒಂದು ಹಂತಕ್ಕೆ ಬಂದಿರುವ ಹಾಗಿದೆ. ಇದೀಗ ಚಿತ್ರತಂಡದವರು ಅಭಿಮಾನಿಗಳಿಗೆ ದೊಡ್ಡ ಸರ್‌ಪ್ರೈಸ್ ಕೊಡುವುದಕ್ಕೆ ಸಜ್ಜಾಗಿದೆ.

ಹೌದು, ಲಾಕ್‌ಡೌನ್ ಸಮಯದಲ್ಲಿ ಸುಮ್ಮನಿದ್ದ ಚಿತ್ರತಂಡವು, ಶಿವರಾಜಕುಮಾರ್ ಅಭಿಮಾನಿಗಳಿಗೆ ಒಂದು ಸರ್‌ಪ್ರೈಸ್ ಕೊಡುವುದಕ್ಕೆ ತಯಾರಿ ನಡೆಸಿದೆ. ಹೇಗೂ ಮುಂದಿನ ತಿಂಗಳು (ಜುಲೈ 12) ಶಿವಣ್ಣ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಒಂದು ಸರ್‌ಪ್ರೈಸ್ ಕೊಡುವುದು ಚಿತ್ರತಂಡದ ಆಸೆ.

ಈ ಕುರಿತು ಚಿತ್ರತಂಡದವರೇ ಸ್ವತಃ ಒಂದು ಟ್ವೀಟ್ ಮಾಡಿದ್ದಾರೆ. ‘ಇಷ್ಟು ದಿನ ಕೋವಿಡ್ ಮಹಾಮಾರಿಯಿಂದ ಏನೂ ಅಪ್ಡೇಟ್ ಕೊಡಲಿಲ್ಲ. ಭಜರಂಗಿ ಅಂದ್ರೇನೆ ದುಷ್ಟ ಶಕ್ತಿಗಳ ಹುಟ್ಟಡಗಿಸೋ ಹೆಸರು. ಕೆಟ್ಟದ್ದನ್ನೆಲ್ಲಾ ಸಂಹಾರ ಮಾಡಿ ಹೊಸ ಶಕ್ತಿಯೊಂದಿಗೆ ಬರುತ್ತಿದ್ದೇವೆ. ಫಸ್ಟ್ ಲುಕ್ ಎಲ್ಲಾ ಆಯ್ತು. ಇವಾಗ ಹೊಸ ಸರ್‌ಪ್ರೈಸ್ ... ಎಲ್ಲಾ ಶಿವಣ್ಣನ ಅಭಿಮಾನಿಗಳಿಗೆ ಅವರ ಹುಟ್ಟುಹಬ್ಬದಂದು’ ಎಂದು ಟ್ವೀಟ್ ಮಾಡಿದ್ದಾರೆ.

ಇಷ್ಟಕ್ಕೂ ಆ ಸರ್‌ಪ್ರೈಸ್ ಏನು? ಚಿತ್ರತಂಡದವರೇ ಹೇಳಿದಂತೆ, ಫಸ್ಟ್‌ಲುಕ್ ಅಂತೂ ಆಗಿದೆ. ಇನ್ನೇನಾದರೂ ಟೀಸರ್ ಬಿಡುಗಡೆಯಾಗಬಹುದಾ? ಎಂಬ ಕುತೂಹಲ ಎಲ್ಲರಿಗೂ ಇದೆ. ಉತ್ತರಕ್ಕಾಗಿ ಇನ್ನೂ ಒಂದು ತಿಂಗಳು ಕಾಯಬೇಕು.

ಅಂದ ಹಾಗೆ, ‘ಭಜರಂಗಿ 2’ ಚಿತ್ರವನ್ನು ಜಯಣ್ಣ ನಿರ್ಮಿಸಿದರೆ, ಎ. ಹರ್ಷ ನಿರ್ದೇಶನ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net