

ಬೆಂಗಳೂರು: ನಾಡಪ್ರಭು ಕೆಂಪೇಗೌಡರ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿರುವ ನಟ ಚೇತನ್ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಹಿರಿಯ ನಟ ಜಗ್ಗೇಶ್ ಆತನ ಹೆಸರು ಉಲ್ಲೇಖಿಸದೇ ನಾಯಿ, ನರಿ ಬೊಗಳಿದರೆ ಇತಿಹಾಸ ಬದಲಾಗುವುದೇ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಶೂಟಿಂಗ್ ವೇಳೆ ಖ್ಯಾತ ನಟನ ಕಾಲಿಗೆ ಗಾಯ
'ಪ್ರಸ್ತುತ ಕರ್ನಾಟಕದ ಪ್ರಮುಖ ಐಕಾನ್ ಆಗಿರುವ ಕೆಂಪೇಗೌಡ ಅತ್ಯಲ್ಪ ಐತಿಹಾಸಿಕ ವ್ಯಕ್ತಿ. ಉಳಿಗಮಾನ್ಯ ಜಾತಿ ಲಾಬಿಗಳ ಪ್ರಭಾವದಿಂದ ಕೆಂಪೇಗೌಡ ಪ್ರಸಿದ್ಧಿಗೆ ಬಂದಿದ್ದಾರೆ. ಹಾಗೆ ನೋಡಿದರೆ ಟಿಪ್ಪು ಸುಲ್ತಾನ್ ಐತಿಹಾಸಿಕವಾಗಿ ಬಹಳ ಮಹತ್ವದ ವ್ಯಕ್ತಿಯಾಗುತ್ತಾರೆ. ಅವರು ಮುಸ್ಲಿಮರಾಗಿ ಹುಟ್ಟಿರುವುದೇ ಇಂದಿನ ಅವರ ಮಾನ್ಯತೆಗೆ ಅಡ್ಡಿಯಾಗಿದೆ. ದುರಾದೃಷ್ಟವಶಾತ್ ಒಬ್ಬ ವ್ಯಕ್ತಿಯು ಹುಟ್ಟಿದ ಸಮುದಾಯಕ್ಕೆ ಅವನ/ಅವಳ ಸಾಮಾಜಿಕ ಕೊಡುಗೆಗಳಿಗಿಂತ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ' ಎಂದು ಚೇತನ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುವ ಮೂಲಕ ಭಾರಿ ವಿವಾದ ಸೃಷ್ಟಿಸಿದ್ದಾರೆ.
ಈ ಅವಹೇಳನಕಾರಿ ಪೋಸ್ಟ್ ಮಾಡಿರುವ ನಟ ಚೇತನ್ ಹೆಸರು ಉಲ್ಲೇಖಿಸದೇ ನಟ ಜಗ್ಗೇಶ್, ತಮ್ಮ 'X'(ಎಕ್ಸ್) ಖಾತೆಯಲ್ಲಿ ಚೇತನ್ ಹೆಸರನ್ನು ಉಲ್ಲೇಖಿಸದೆ, 'ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ಒಡೆಯನ ತೊಡೆಯ ಮೇಲೆ ಕೂತು ಬೆಳೆದ ಮಗು. ಮುಂದೆ ಸಾಮಾಜಿಕ ನ್ಯಾಯ ಎತ್ತಿ ಹಿಡಿದ ಸಾರ್ವಭೌಮ. ಇಂದಿನ ನಾಯಿ, ನರಿ ಬೊಗಳಿದರೆ ಅವರ ಇತಿಹಾಸ ಬದಲಾಗುವುದೇ? ಚಿತ್ರರಂಗದಲ್ಲಿ ನೆಲೆಕಾಣದೆ ಛಾಪು ಮೂಡಿಸಲು ಸಲಕರಣೆ ಸಿಗದ ಅಲೆಮಾರಿಗಳು ಬೊಗಳಿದರೆ ಇತಿಹಾಸ ಬದಲಾಗುತ್ತದೆಯೇ? ಕಾನೂನಿನಿದೆ ಎಚ್ಚರ ಎಂದು ಜಗ್ಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ನಡುವೆ 'ನಟ ಎಂದು ಹೇಳಿಕೊಳ್ಳುವ ವಿದೇಶಿ ಪ್ರಜೆಯಾದ ಚೇತನ್ ಅವರಿಂದ ನಾಡಪ್ರಭು ಕೆಂಪೇಗೌಡರಿಗೆ ಅವಹೇಳನ ಮಾಡಿದ್ದಾನೆ’ ಎಂದು ಆತನ ವಿರುದ್ಧ ವಕೀಲ ಆರ್.ಎಲ್.ಎನ್ ಮೂರ್ತಿ ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರು ಇಡುವ ಕುರಿತು ನಡೆಯುತ್ತಿರುವ ವಾದ-ಪ್ರತಿವಾದಗಳ ಕುರಿತು ನಟ ಚೇತನ್ ಈಹಿಂದೆ ಟ್ವೀಟ್ ಮಾಡಿ ಹಲವರ ಆಕ್ರೋಶಕ್ಕೆ ಕಾರಣನಾಗಿದ್ದ. ಸದಾ ವಿವಾದಾತ್ಮಕ ಹೇಳಿಕೆ ಕೊಡುವುದನ್ನೇ ರೂಢಿಸಿಕೊಂಡಿರುವ ಈತ ಸದ್ಯ ಕೆಂಪೇಗೌಡರ ವಿಷಯದಲ್ಲಿ ನೀಡಿರುವ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ.