

ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಮಾಫಿಯಾ ನಂಟಿನ ಪ್ರಕರಣದಡಿ ನಿನ್ನೆ(ಶುಕ್ರವಾರ) ಬೆಳಗ್ಗೆ ಸಿಸಿಬಿ ಪೊಲೀಸರ ಬಲೆಗೆ ಬಿದ್ದ 'ಮಾದಕ' ನಟಿ ರಾಗಿಣಿ ದ್ವಿವೇದಿಗೆ ರಾತ್ರಿಯಿಡೀ ಸೊಳ್ಳೆಗಳ ಕಾಟವಿತ್ತಂತೆ. ಬಂಧನಕ್ಕೊಳಪಟ್ಟ ಮೊದಲ ದಿನದ ರಾತ್ರಿಯನ್ನು ಹೊಸೂರು ರಸ್ತೆಯ ಮಹಿಳಾ ಸಾಂತ್ವನ ಕೇಂದ್ರದಲ್ಲೇ ಕಳೆದ 'ತುಪ್ಪ'ದ ಬೆಡಗಿಗೆ ಯಾವುದೇ ವಿಐಪಿ ಟ್ರೀಟ್ಮೆಂಟ್ ಸಿಕ್ಕಿಲ್ಲ.
ತಡರಾತ್ರಿ 2ಕ್ಕೆ ಮಲಗಿ 6ಗಂಟೆಗೆ ಎದ್ದರು. ನಾಲ್ಕು ಗಂಟೆ ಮಾತ್ರ ನಿದ್ದೆ ಮಾಡಿದ ರಾಗಿಣಿ, ಕೋಣೆಯಿಂದ ಹೊರಬಂದು ಸೊಳ್ಳೆ ಕಾಟದ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಶುಕ್ರವಾರ ಬೆಳಗ್ಗೆ ಸಿಸಿಬಿ ಪೊಲೀಸರ ಜತೆ ಬಂದಾಗ ಧರಿಸಿದ್ದ ಸೀರೆಯಲ್ಲೇ ರಾಗಿಣಿ ಇಡೀ ರಾತ್ರಿ ಕಳೆದರು. ಅವರು ಯಾವುದೇ ತರಹದ ಲಗೇಜ್ ತಂದಿರಲಿಲ್ಲ.
ಇನ್ನು ರಾಗಿಣಿಯ ಬಂಧನ ವಿಚಾರ ಹೊರಬೀಳುತ್ತಿದ್ದಂತೆ ಮಗಳನ್ನು ಭೇಟಿ ಮಾಡಲು ಮಹಿಳಾ ಸಾಂತ್ವನ ಕೇಂದ್ರ ಬಳಿಗೆ ಮಧ್ಯರಾತ್ರಿಯೇ ತಾಯಿ ರೋಹಿಣಿ ದ್ವಿವೇದಿ, ತಂದೆ ರಾಕೇಶ್ ದ್ವಿವೇದಿ ಬಂದಿದ್ದರು. ರಾಗಿಣಿಗೆ ಕೊಡಲೆಂದು ತಂದಿದ್ದ ಊಟ, ನೀರಿನ ಬಾಟಲಿ ಹಾಗೂ ಬಟ್ಟೆಯ ಜತೆಗೆ ಕೇಂದ್ರದ ಗೇಟ್ ಬಳಿಯೇ ಕೆಲಕಾಲ ಕಾಯುತ್ತ ನಿಂತಿದ್ದರು. ಕೊನೆಗೆ ಊಟ, ಬಟ್ಟೆ ವಾಪಸ್ ತೆಗೆದುಕೊಂಡು ಮನೆಗೆ ಹೋದರು. ಬೆಳಗ್ಗೆ ಎದ್ದ ನಂತರ ಮಹಿಳಾ ಸಾಂತ್ವನ ಕೇಂದ್ರದ ಆವರಣದಲ್ಲೇ ರಾಗಿಣಿ ವಾಕಿಂಗ್ ಮಾಡಿದರು. (ದಿಗ್ವಿಜಯ ನ್ಯೂಸ್)