More

    ತಾರೆಗಳ ನಶೆ ಇಳಿಸಿದ ಸಿಸಿಬಿ: ನಟಿ ರಾಗಿಣಿ ಸೇರಿ ಮೂವರ ಬಂಧನ

    ಬೆಂಗಳೂರು: ಚಂದನವನದಲ್ಲಿ ಕೋಲಾಹಲ ಎಬ್ಬಿಸಿರುವ ಡ್ರಗ್ಸ್ ಮೋಹದ ತನಿಖೆಗೆ ಮಹತ್ವದ ತಿರುವು ಲಭ್ಯವಾಗಿದೆ. ಪ್ರಕರಣದ ಇಂಚಿಂಚೂ ಜಾಲಾಡುತ್ತಿರುವ ಸಿಟಿ ಕ್ರೖೆಂ ಬ್ರಾ್ಯಂಚ್ (ಸಿಸಿಬಿ) ಅಧಿಕಾರಿಗಳು ಶುಕ್ರವಾರ ಖ್ಯಾತ ನಟಿ ರಾಗಿಣಿ ದ್ವಿವೇದಿ ಸಹಿತ ಮೂವರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ದೆಹಲಿಯ ಕುಖ್ಯಾತ ಡ್ರಗ್ಸ್ ಪೆಡ್ಲರ್ ಕೂಡ ಸೇರಿದ್ದಾನೆ.

    ದೊಡ್ಡಮಟ್ಟದಲ್ಲಿ ಆಯೋಜನೆಯಾಗುತ್ತಿದ್ದ ಪಾರ್ಟಿಗಳಲ್ಲಿ ನಟ-ನಟಿಯರು ಹಾಗೂ ಹಲವು ಗಣ್ಯರು ವಿದೇಶದಿಂದ ಬರುತ್ತಿದ್ದ ಮಾದಕ ದ್ರವ್ಯಗಳ ಮತ್ತೇರಿಸಿಕೊಳ್ಳುತ್ತಿದ್ದ ಸಂಗತಿ ತನಿಖೆಯಲ್ಲಿ ಬಯಲಾಗಿದೆ. ರಾಗಿಣಿ ಬಂಧನದ ಬೆನ್ನಲ್ಲೇ ಸ್ಯಾಂಡಲ್​ವುಡ್​ನ ಇನ್ನೂ ಕೆಲ ನಟ-ನಟಿಯರು ಹಾಗೂ ಗಣ್ಯ ವ್ಯಕ್ತಿಗಳ ಮಕ್ಕಳಿಗೂ ನಡುಕ ಶುರುವಾಗಿದ್ದು, ಡ್ರಗ್ಸ್ ದಂಧೆಯ ಉರುಳು ಹಲವರಿಗೆ ಸುತ್ತಿಕೊಳ್ಳುವುದು ನಿಶ್ಚಯವಾಗಿದೆ.

    ರಾಗಿಣಿ ಜತೆಗೆ ದೆಹಲಿಯ ಡ್ರಗ್ಸ್ ಕಿಂಗ್​ಪಿನ್ ವಿರೇನ್ ಖನ್ನಾ (38) ಹಾಗೂ ನಟಿ ಸಂಜನಾ ಗಲ್ರಾನಿ ಆಪ್ತ, ಉದ್ಯಮಿ ರಾಹುಲ್​ನನ್ನು (35) ಶುಕ್ರವಾರ ಬಂಧಿಸಲಾಗಿದೆ. ಗೋವಾ, ಮುಂಬೈ, ಪಂಜಾಬ್, ಆಂಧ್ರಪ್ರದೇಶ, ಕೇರಳದಲ್ಲಿ ಪಾರ್ಟಿಗಳನ್ನು ಆಯೋಜಿಸಿ ವಿದೇಶದಿಂದ ಡ್ರಗ್ಸ್ ತರಿಸಿಕೊಂಡು ಪೂರೈಕೆ ಮಾಡಲಾಗಿದೆ ಎಂಬುದು ಸಿಸಿಬಿ ತನಿಖೆಯಲ್ಲಿ ದೃಢಪಟ್ಟಿದೆ. ಪಾರ್ಟಿಗಳಲ್ಲಿ ಉದ್ಯಮಿಗಳು, ಸೆಲೆಬ್ರಿಟಿಗಳು, ನಟ-ನಟಿಯರು, ಡಿಜೆಗಳು, ಸಾಫ್ಟ್​ವೇರ್ ಉದ್ಯೋಗಿಗಳು ಹಾಗೂ ಇನ್ನಿತರ ಗಣ್ಯ ವ್ಯಕ್ತಿಗಳು ಭಾಗವಹಿಸಿ ಮಾದಕ ದ್ರವ್ಯ ಸೇವನೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ದಾಳಿ ಬಳಿಕ ಬಂಧನ: ಕೋರ್ಟ್​ನಿಂದ ಸರ್ಚ್ ವಾರೆಂಟ್ ಪಡೆದಿದ್ದ ಸಿಸಿಬಿ ಅಧಿಕಾರಿಗಳ ತಂಡ ಶುಕ್ರವಾರ ಬೆಳ್ಳಂಬೆಳಗ್ಗೆ ಯಲಹಂಕ ನ್ಯೂಟೌನ್​ನ ಅಪಾರ್ಟ್​ವೆುಂಟ್​ನಲ್ಲಿ ರಾಗಿಣಿಗೆ ಸೇರಿದ 2 ಫ್ಲಾ್ಯಟ್​ಗಳ ಮೇಲೆ ದಾಳಿ ನಡೆಸಿ, ದಾಖಲೆ ಪತ್ರಗಳನ್ನು ಜಪ್ತಿ ಮಾಡಿದರು. ರಾಗಿಣಿಯನ್ನು ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಕರೆತಂದು ಸಂಜೆವರೆಗೂ ವಿಚಾರಣೆ ನಡೆಸಲಾಯಿತು. ಡ್ರಗ್ಸ್ ಮಾಫಿಯಾದ ಜತೆ ನಂಟು ಹೊಂದಿರುವ ಆರೋಪದ ಮೇರೆಗೆ ಸಂಜೆ ವೇಳೆಗೆ ಬಂಧಿಸಿ, ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಇದೇ ವೇಳೆ ಇನ್ನೊಂದು ತಂಡ ದೆಹಲಿಗೆ ತೆರಳಿ ಅದ್ದೂರಿ ಪಾರ್ಟಿಗಳ ಆಯೋಜಕ ವಿರೇನ್ ಖನ್ನಾನನ್ನು ಬಂಧಿಸಿ ಕರೆತಂದಿದೆ. ವಿಚಾರಣೆಗೆ ಕರೆತಂದಿದ್ದ ಉದ್ಯಮಿ ರಾಹುಲ್​ನನ್ನೂ ಬಂಧಿಸಲಾಯಿತು.

    ವಿರೇನ್ ಖನ್ನಾ ಯಾರು ?

    ರವಿಶಂಕರ್ ಕೊಟ್ಟ ಸುಳಿವಿನ ಮೇರೆಗೆ ಸಿಸಿಬಿ ಇನ್​ಸ್ಪೆಕ್ಟರ್​ಗಳಾದ ಶ್ರೀಧರ್ ಪೂಜಾರ್ ಮತ್ತು ಲಕ್ಷ್ಮಿಕಾಂತಯ್ಯ ನೇತೃತ್ವದ ತಂಡ ಶುಕ್ರವಾರವೇ ದೆಹಲಿಗೆ ತೆರಳಿ ವಿರೇನ್ ಖನ್ನಾನನ್ನು ಬಂಧಿಸಿ ಕೋರ್ಟ್​ಗೆ ಹಾಜರುಪಡಿಸಿ 4 ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದಾರೆ. ಬೆಂಗಳೂರಿನಲ್ಲಿ ಗಣ್ಯಾತಿಗಣ್ಯರ ಪಾರ್ಟಿ ಆಯೋಜನೆ ದಂಧೆಯಲ್ಲಿ ವಿರೇನ್ ಕಿಂಗ್​ಪಿನ್ ಆಗಿದ್ದ. ಪಾರ್ಟಿಗಳಿಗೆ ಯಥೇಚ್ಛವಾಗಿ ಮಾದಕ ವಸ್ತು ಪೂರೈಕೆಯಾಗಿರುವ ಮಾಹಿತಿ ತನಿಖೆಯಲ್ಲಿ ದೃಢಪಟ್ಟಿದೆ. ಸಿಸಿಬಿ ತನಿಖೆ ಆರಂಭಿಸಿದ ಬಳಿಕ ವಿರೇನ್ ಖನ್ನ ದೆಹಲಿಯಲ್ಲಿ ತಲೆಮರೆಸಿಕೊಂಡಿದ್ದ. ಆತನ ಚಲನವಲನದ ಮೇಲೆ ನಿಗಾವಹಿಸಿ ಬಂಧಿಸಿ ನಗರಕ್ಕೆ ಕರೆ ತರಲಾಗಿದೆ ಎಂದು ಜಂಟಿ ಆಯುಕ್ತ (ಅಪರಾಧ) ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

    ವಿದೇಶದಲ್ಲಿಯೂ ಪಾರ್ಟಿ

    ನಟಿ ಸಂಜನಾ ಸ್ನೇಹಿತ ರಾಹುಲ್, ಬಿಇ ವ್ಯಾಸಂಗ ಮುಗಿಸಿದ್ದು, ಚನ್ನಮ್ಮನ ಅಚ್ಚುಕಟ್ಟು ಪ್ರದೇಶದಲ್ಲಿ ನೆಲೆಸಿದ್ದಾನೆ. ರಿಯಲ್ ಎಸ್ಟೇಟ್, ಆರ್ಕಿಟೆಕ್ಟ್ ಮತ್ತು ಕಾರ್ಯಕ್ರಮ ಆಯೋಜಕ ಎಂದು ಹೇಳಿಕೊಂಡಿದ್ದಾನೆ. ಆದರೆ, ರಿಯಲ್ ಎಸ್ಟೇಟ್ ನಡೆಸುತ್ತಿರುವ ಬಗ್ಗೆ ಯಾವುದೇ ಸುಳಿವು ಲಭ್ಯವಾಗಿಲ್ಲ. ಬದಲಿಗೆ ಶ್ರೀಲಂಕಾ ಸೇರಿದಂತೆ ನೆರೆಯ ದೇಶಗಳಲ್ಲಿ ಗಣ್ಯರ ಪಾರ್ಟಿ ಆಯೋಜನೆ ಮಾಡಿ ಮಾದಕ ದ್ರವ್ಯ ಪೂರೈಕೆ ಮಾಡುತ್ತಿದ್ದ. ಬೆಂಗಳೂರು ಮತ್ತು ಹೊರವಲಯದಲ್ಲಿ ಚಿತ್ರರಂಗದ ಕೆಲವರಿಗೆ ಔತಣ ಕೂಟ ನೀಡಿದ್ದ. ರಾಜಕಾರಣಿ ಹಾಗೂ ಉದ್ಯಮಿಗಳ ಪುತ್ರರು ಸಂಪರ್ಕದಲ್ಲಿ ಇದ್ದಾರೆ.

    ಸಿಸಿಬಿ ವಶದಲ್ಲಿ ಕಾರ್ತಿಕ್

    ಹೋಟೆಲ್ ಉದ್ಯಮಿ ಕಾರ್ತಿಕ್ ರಾಜ್, ರಾಗಿಣಿ ಮತ್ತು ರವಿಶಂಕರ್ ಸ್ನೇಹಿತ. ಕೋರಮಂಗಲದಲ್ಲಿ ಐಷಾರಾಮಿ ಹೋಟೆಲ್ ಹೊಂದಿರುವ ಕಾರ್ತಿಕ್​ನ ತಂದೆ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದಾರೆ. ಪಾರ್ಟಿ ವೇಳೆ ಹಲವು ನಟ-ನಟಿಯರ ಸ್ನೇಹ ಗಳಿಸಿದ್ದ ಕಾರ್ತಿಕ್, 2015ರಿಂದಲೇ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದಾನೆ. ನೈಜೀರಿಯಾ ಪ್ರಜೆಗಳು ಮತ್ತು ಪ್ರತೀಕ್ ಶೆಟ್ಟಿ ಸಂಪರ್ಕ ಮಾಡಿ ಮಾದಕ ದ್ರವ್ಯ ಪಡೆದು ಗಣ್ಯರಿಗೆ ಪೂರೈಕೆ ಮಾಡುತ್ತಿದ್ದ ಎನ್ನಲಾಗಿದೆ. ಈತನನ್ನು ವಶಕ್ಕೆ ಪಡೆದಿರುವ ಸಿಸಿಬಿ ತಂಡ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

    ಇಂದು ಎಸ್​ಪಿಗಳ ಸಭೆ

    ರಾಜ್ಯದಲ್ಲಿ ಡ್ರಗ್ಸ್ ದಂಧೆಗೆ ಸಂಪೂರ್ಣ ಕಡಿವಾಣ ಹಾಕುವ ಉದ್ದೇಶದಿಂದ ಶನಿವಾರ ಎಲ್ಲ ಜಿಲ್ಲೆಗಳ ಎಸ್​ಪಿಗಳ ಜತೆ ಸಭೆ ನಡೆಸುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

    ಪೇಜ್ ತ್ರಿ ಪಾರ್ಟಿಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಮೊದಲ ಹಂತದ ಆರೋಪಿ ಗಳನ್ನು ಬಂಧಿಸಲಾಗಿದೆ. 2ನೇ ಹಂತದ ಆರೋಪಿಗಳ ವಿರುದ್ಧ ಕಾರ್ಯಾಚರಣೆ ಮುಂದುವರಿದಿದೆ.

    | ಕಮಲ್ ಪಂತ್ ಬೆಂಗಳೂರು ನಗರ ಪೊಲೀಸ್ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts