ಮಾಸ್​ ಮಹಾರಾಜ ರವಿತೇಜಾ ಹೊಸ ಚಿತ್ರಕ್ಕೆ ಸ್ಯಾಂಡಲ್​ವುಡ್​ ನಟಿ! ಯಾರೀ ಬ್ಯೂಟಿ?

ವಿಜಯವಾಣಿ - 2024-01-21T193705.459
Published on

ಆಂಧ್ರಪ್ರಧೇಶ: ಟಾಲಿವುಡ್​ನ ಮಾಸ್​ ಮಹಾರಾಜ ಎಂದೇ ಕರೆಯಲ್ಪಡುವ ನಟ ರವಿತೇಜಾ ಕಳೆದ ವರ್ಷ 'ಟೈಗರ್ ನಾಗೇಶ್ವರ್​ ರಾವ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದೇ ಕೊನೆ​, ಅದಾದ ಬಳಿಕ ಅಷ್ಟಾಗಿ ಯಾವ ವೇದಿಕೆಗಳಲ್ಲಿಯೂ ನಟ ಕಾಣಿಸಿಕೊಳ್ಳಲಿಲ್ಲ. ಈ ಚಿತ್ರವು ಸಿನಿಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯದೆ ಬಾಕ್ಸ್ ಆಫೀಸ್​ನಲ್ಲಿ ಭಾರೀ ಹಿನ್ನಡೆಯನ್ನು ಅನುಭವಿಸಿತು. ಇದೀಗ ಹೊಸ ಪ್ರಾಜೆಕ್ಟ್​ನತ್ತ ಗಮನಹರಿಸಿರುವ ರವಿತೇಜಾ ಅವರಿಗೆ ಸ್ಯಾಂಡಲ್​ವುಡ್​ನ ಹೆಸರಾಂತ ನಟಿಯೊಬ್ಬರು ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

ಹರೀಶ್ ಶಂಕರ್ ನಿರ್ದೇಶನದ 'ಮಿಸ್ಟರ್ ಬಚ್ಚನ್' ಚಿತ್ರದ ಚಿತ್ರೀಕರಣದಲ್ಲಿ ಸದ್ಯ ರವಿತೇಜಾ ಬ್ಯುಸಿಯಾಗಿದ್ದಾರೆ. ಈ ಹಿಂದೆ ಗೋಪಿಚಂದ್ ಮಲಿನೇನಿ ಅವರೊಂದಿಗೆ ನಟ ಕೆಲಸ ಮಾಡಬೇಕಿತ್ತು, ಆದರೆ ಕೆಲವು ಕಾರಣಾಂತರಗಳಿಂದ ಚಿತ್ರವು ಸ್ಥಗಿತಗೊಂಡಿತು. ಇದರ ಬೆನ್ನಲ್ಲೇ ಯುವ ನಿರ್ದೇಶಕ ಅನುದೀಪ್ ಕೆ.ವಿ ಜತೆಗೆ ರವಿತೇಜ ಕೆಲಸ ಮಾಡಲಿದ್ದಾರೆ ಎಂಬ ಮಾತು ಬಹಳ ದಿನಗಳಿಂದ ಕೇಳಿಬಂದಿತ್ತು. ಅದು ಈಗ ನಿಜವಾಗಿದೆ.

ಜನವರಿ 26ರಂದು ರವಿತೇಜ ಅವರ ಹುಟ್ಟುಹಬ್ಬದಂದು ಈ ಹೊಸ ಪ್ರಾಜೆಕ್ಟ್‌ನ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ. ಈ ಚಿತ್ರಕ್ಕೆ ನಾಯಕಿಯ ಆಯ್ಕೆಗೆ ಮುಂದಾದ ನಿರ್ದೇಶಕರು, ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಸ್ಯಾಂಡಲ್​ವುಡ್​ ನಟಿ ರುಕ್ಮಿಣಿ ವಸಂತ್ ಅವರನ್ನು ತಮ್ಮ ಚಿತ್ರದಲ್ಲಿ ನಟಿಸುವಂತೆ ಕೇಳಿದ್ದಾರೆ ಎನ್ನಲಾಗಿದೆ. ಆದ್ರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇನ್ನು ಪ್ರಕಟವಾಗಿಲ್ಲ.

ವಿಜಯ್ ದೇವರಕೊಂಡ ಮತ್ತು ಗೌತಮ್ ತಿನ್ನನೂರಿ ಅವರ ಚಿತ್ರಕ್ಕೂ ಕೂಡ ರುಕ್ಮಿಣಿ ವಸಂತ್ ಅವರನ್ನು ನಾಯಕಿಯಾಗಿ ನಟಿಸಲು ಕೇಳಲಾಗಿದೆ ಎಂದು ಸಿನಿ ಮೂಲಗಳು ತಿಳಿಸಿವೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net