

ವಿಜಯವಾಣಿ ಸುದ್ದಿಜಾಲ ಗದಗ
ಮಕ್ಕಳು ಗಂಭೀರವಾಗಿ ಅಧ್ಯಯನ ಮಾಡಬೇಕು. ಹೆಚ್ಚು ಓದಿದವರನ್ನು ಸಮಾಜ ಗುರುತ್ತಿಸುತ್ತದೆ. ಸಮಯ ಬಂದಾಗ ಸಮುದಾಯದ ಪ್ರತಿಭಾನ್ವಿತ ಮಕ್ಕಳಿಗೆ ಬೆಂಬಲಿಸುತ್ತದೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ವತಿಯಿಂದ ಶನಿವಾರ ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ಏರ್ಪಡಿಸಿದ್ದ 2022-23 ನೇ ಸಾಲಿನ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪಾಲಕರು ಮಕ್ಕಳಿಗೆ ಆಸ್ತಿ ಮಾಡಬಾರದು. ಮಕ್ಕಳಿಗೆ ಶಿಕ್ಷಣ, ಸಂಸ್ಕೃತಿ ಕಲಿಸಿ ನಿಮ್ಮನ್ನು ದೇಶದ ಆಸ್ತಿಯನ್ನಾಗಿ ಮಾಡಿದರೆ ಅದುವೇ ದೇಶದ ಕಲ್ಯಾಣ ಎಂದು ಹೇಳಿದರು.
ಜಗಜ್ಯೋತಿ ಬಸವಣ್ಣ ಅವರನ್ನು ರಾಜ್ಯ ಸರ್ಕಾರ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದೆ. ಹಲವು ಮಠಾಧೀಶರು ಸರ್ಕಾರ ಮನವಿ ಮಾಡಿದ್ದರು. ಮನವಿಗೆ ಸರ್ಕಾರ ಸೂಕ್ತವಾಗಿ ಸ್ಪಂಧಿಸಿತು. ಬಸವಣ್ಣನ್ನ ಅವರನ್ನು ರಾಯಭಾರಿ ಎಂದು ಕರೆಯಬಹುದಿತ್ತು. ಆದರೆ, ಜಗತ್ತಿಗೆ ಪ್ರಜಾಪ್ರಭುತ್ವ ತೋರಿಸಿಕೊಟ್ಟ ಮಹಾನ್ ನಾಯಕ ಆಗಿದ್ದ ಅವರನ್ನು ಸರ್ಕಾರ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿತು.
ಬಸವಣ್ಣ ಅವರು ಮನಕುಲಕ್ಕೆ ಪ್ರಜಾಪ್ರಭುತ್ವ ನೀಡಿದರು. ಜಾಗತಿಕ ಪ್ರಜಾಪ್ರಭುತ್ವದ ಮೊದಲ ಕೇಂದ್ರವೇ ಅನುಭವ ಮಂಟಪವಾಗಿತ್ತು. ಸಂಸದೀಯ ವ್ಯವಸ್ಥೆಯನ್ನು ಬಸವಣ್ಣ ಅವರು ಕಲಿಸಿಕೊಟ್ಟರು. 800 ವರ್ಷಗಳ ಹಿಂದೆಯೇ ಸಾಮಾಜಿಕ ನ್ಯಾಯವನ್ನು ಧೈರ್ಯವಾಗಿ ಅನುಷ್ಠಾನ ಮಾಡಿದರು. ವರ್ಗಾತೀತ ಸಮಾಜ ಸೃಷ್ಟಿ ಮಾಡಲು ಅವರು ಶ್ರಮಿಸಿದ್ದರು.
ಎಚ್.ಕೆ. ಪಾಟೀಲ ಬೇಸರ: ಬಸವಣ್ಣ ಅವರನ್ನು ನಾವು ಭಾಷಣದ ವಸ್ತುವಾಗಿ ನೋಡುತ್ತಿದ್ದೇವೆ ಎಂದು ಎಚ್.ಕೆ. ಪಾಟೀಲ ಬೇಸರ ವ್ಯಕ್ತಪಡಿಸಿದರು. ಬಸವಣ್ಣ ಅವರ ಸಾಮಾಜಿಕ ನ್ಯಾಯದ ಸಂದೇಶಗಳನ್ನು ನಾವು ಅನುಸರಿಸದೇ ಇದ್ದರೆ ಅವರ ಗೌರವನ್ನೆ ಚ್ಯುತಿ ತಂದಂತೆ. ಅವರ ಸಂದೇಶಗಳನ್ನು ಜನರು ಅನುಸರಿಸಿದರೇ ಸರ್ಕಾರ ತೆಗೆದುಕೊಂಡ ನಿರ್ಣಯಕ್ಕೂ ಶೋಬೆ ಎಂದರು.
ಕಿತ್ತೂರು ನಗರವನ್ನು ರಾಣಿ ಚೆನ್ನಮ್ಮನ ಕಿತ್ತೂರು ಎಂದು, ಅಲ್ಲಮ ಪ್ರಭು ಉದ್ಯಾನವನ ಎಂದು, ಅನುಭವ ಮಂಟಪದ ಹಲವರನ್ನು ಸ್ಮರಿಸುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ ಎಂದು ಎಚ್.ಕೆ. ಪಾಟೀಲ ಹೇಳಿದರು.
ಮಾಜಿ ಸಚಿವ ಎಸ್.ಎಸ್. ಪಾಟೀಲ ಮಾತನಾಡಿ, ಬಸವಣ್ಣ ಕೇವಲ ರಾಜ್ಯದ ಸಾಂಸ್ಕೃತಿಕ ನಾಯಕರಲ್ಲದೇ ವಿಶ್ವದ ಸಾಂಸ್ಕೃತಿಕ ನಾಯಕರಾಗಿದ್ದಾರೆ. ಬಸವಣ್ಣ ಈಗ ಇದ್ದಿದ್ದರೆ ವಿಶ್ವಕ್ಕೆ ಮಾರ್ಗದರ್ಶಕ್ಕರಾಗಿ ಇರುತ್ತಿದ್ದರು ಎಂದು ಗಾಂಧಿಜಿ ಹೇಳಿದ್ದರು. ಫ.ಗು. ಹಳಕಟ್ಟಿ ಅವರು ವಚನಗಳನ್ನು ಸಂಶೋಧಿಸಿದರು. ಸಂಸತ್ ನಲ್ಲಿ ಬಸವಣ್ಣ ಅವರ ಅನುಭವ ಮಂಟಪ, ಅಂದಿನ ಪ್ರಜಾಪ್ರಭುತ್ವ ಬಗ್ಗೆ ಸಂಸತ್ ನಲ್ಲಿ ಚರ್ಚೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಸವಣ್ಣ ಅವರ ವಚನ ಸ್ಮರಿಸುತ್ತಾರೆ ಎಂದರು.
ಬಸವಣ್ಣ ಅವರ ಆದರ್ಶ ಜಾರಿ ಬಂದರೆ ಜಾತಿ ಸೊಂಕೇ ಇರುವುದಿಲ್ಲ. ಅಸ್ಪ್ರಶತೆ ತೊಲಗಬೇಕು. ಭ್ರಷ್ಟಾಚಾರ ನಿಯಂತ್ರಿಸಬೇಕು. ಮಹಿಳೆಯರಿಗೆ ಸ್ವತಂತ್ರ ಸಿಗಬೇಕು. ಅಂದಾಗ ಬಸತತ್ವ ಪಾಲನೆ ಆದಂತೆ. ಆದರೆ, ಇಂದು ಬಸತತ್ವವೇ ಸತ್ತು ಹೋಗಿದೆ. ವೀರಶೈವ ಲಿಂಗಾಯತರಲ್ಲಿ ಅತ್ಯಂತ ಜಾತಿ ನಡೆಯುತ್ತಿದೆ ಎಂದು ಎಸ್.ಎಸ್. ಪಾಟೀಲ ಹೇಳಿದರು
ರಾಮನ ದೇವಸ್ಥಾನ ಕಟ್ಟಿ, ರಾಮನ ಮೂರ್ತಿಗೆ ಅಭಿಷೇಕ ಮಾಡಿದರೆ ರಾಮ ರಾಜ್ಯ ಸ್ಥಾಪನೆ ಆಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಸರ್ಕಾರ ಘೋಷಣೆ ಮಾಡಿದ ಹಿನ್ನೆಲೆ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಅಭಿನಂದನಾ ಪತ್ರ ಸರ್ಕಾರಕ್ಕೆ ಸಲ್ಲಿಸಲಾಯಿತು. ಮಹಾಸಭಾ ವತಿಯಿಂದ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು.
ಸಚಿವ ಎಚ್.ಕೆ. ಪಾಟೀಲ, ಎಸ್.ಎಸ್. ಪಾಟೀಲ ಅವರನ್ನು ಮಹಾಸಭಾದಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್.ಎಸ್. ಪಾಟೀಲ, ಸಿದ್ದು ಪಲ್ಲೇದ, ಬಿ.ಬಿ. ಅಸೂಟಿ, ಬಸವರಾಜ ಕೊರ್ಲಹಳ್ಳಿ, ಎಂ.ಎಸ್. ಮಲ್ಲಾಪೂರ, ಸಿದ್ದು ಪಾಟೀಲ, ಜೀವನಗೌಡ್ರ, ಪಿಟಿ ನಾರಾಯಣಪೂರು, ಗಂಗಣ್ಣ ಕೋಟಿ, ಮಂಜುಳಾ ರೇವಡಿ ಇತರರು ಇದ್ದರು