

Samyuktha Menon : ಮಲಯಾಳಂ ನಟಿ ಸಂಯುಕ್ತಾ ಮೆನನ್ ಸದ್ಯ ದಕ್ಷಿಣ ಭಾರತದ ಎಲ್ಲ ಚಿತ್ರರಂಗಗಳಲ್ಲೂ ಮಿಂಚುತ್ತಿದ್ದಾರೆ. ಮಾಲಿವುಡ್ನಲ್ಲಿ 10ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಅವರು ಈಗಾಗಲೇ ಕೆಲವು ತಮಿಳು ಹಾಗೂ ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. 2023ರಲ್ಲಿ ಬಿಡುಗಡೆಯಾದ “ಗಾಳಿಪಟ 2 ಚಿತ್ರದ ಮೂಲಕ ಕನ್ನಡಕ್ಕೂ ಪದಾರ್ಪಣೆ ಮಾಡಿದ ಅವರು, ದಿಗಂತ್ಗೆ ಜೋಡಿಯಾಗಿದ್ದರು.
2022ರಲ್ಲಿ ಪವನ್ ಕಲ್ಯಾಣ್ ಅಭಿನಯದ “ಭೀಮ್ಲಾ ನಾಯಕ್’ ಮೂಲಕ ಟಾಲಿವುಡ್ಗೆ ಎಂಟ್ರಿ ಕೊಟ್ಟ ಅವರು, ಬಳಿಕ “ಬಿಂಬಿಸಾರ’ ಚಿತ್ರದಲ್ಲಿ ನಟಿಸಿದ್ದರು. 2023ರ ಏಪ್ರಿಲ್ನಲ್ಲಿ ಬಿಡುಗಡೆಯಾದ “ವಿರೂಪಾಕ್ಷ’ ಚಿತ್ರದ ಸಕ್ಸಸ್ ಬಳಿಕ ಸಂಯುಕ್ತಾಗೆ ಟಾಲಿವುಡ್ನಲ್ಲಿ ಬೇಡಿಕೆ ಹೆಚ್ಚಿದೆ. ಈಗಾಗಲೇ ನಂದಮೂರಿ ಕಲ್ಯಾಣ್ ನಾಯಕನಾಗಿರುವ “ಡೆವಿಲ್’ ಚಿತ್ರಕ್ಕೆ ಅವರು ಆಯ್ಕೆಯಾಗಿದ್ದು, ಅದರ ಬೆನ್ನಲ್ಲೇ “ಕಾರ್ತಿಕೇಯ’, “ಸ್ಪೈ’ ಖ್ಯಾತಿಯ ನಟ ನಿಖಿಲ್ ಸಿದ್ಧಾರ್ಥ್ ನಟಿಸುತ್ತಿರುವ “ಸ್ವಯಂಭೂ’ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಸಂಯುಕ್ತಾಗೆ ಪ್ರಯಾಣ ಎಂದರೆ ಹುಚ್ಚು. ಶೂಟಿಂಗ್ಗಾಗಿ ವಿವಿಧ ಸ್ಥಳಗಳಿಗೆ ಪ್ರಯಾಣಿಸುತ್ತಿದ್ದರೂ, ವೈಯಕ್ತಿಕ ಪ್ರಯಾಣವನ್ನು ತುಂಬಾ ಇಷ್ಟಪಡುತ್ತಾರೆ. ತಮ್ಮ ಪ್ರವಾಸದ ಸಮಯದಲ್ಲಿ ತಮ್ಮ ಸುಂದರ ತಾಣಗಳ ಜೊತೆಗೆ ಆಧ್ಯಾತ್ಮಿಕ ಮಹತ್ವವನ್ನು ಹೊಂದಿರುವ ಸ್ಥಳಗಳಿಗೂ ಭೇಟಿ ನೀಡುತ್ತಾರೆ. ಕುಂಭಮೇಳಕ್ಕೂ ಹೋಗಿ ಪವಿತ್ರ ಸ್ನಾನವನ್ನೂ ಮಾಡಿದ್ದಾರೆ.
ಸಂಯುಕ್ತಾ ಅವರು ಓರ್ವ ಅದ್ಭುತ ಆಹಾರ ಪ್ರಿಯೆ. ಕೇರಳ ಶೈಲಿಯ ಪಾಕಪದ್ಧತಿ ಅಂದ್ರೆ ಆಕೆಗೆ ತುಂಬಾ ಇಷ್ಟ. ಅದೇನೇ ಇರಲಿ, ಧೈರ್ಯದಿಂದ ಏನನ್ನಾದರೂ ಹೇಳುವುದು ಆಕೆಯ ಸಾಮಾನ್ಯ ಅಭ್ಯಾಸ. ಹೀಗಾಗಿ ಆಗಾಗ ಮದ್ಯಪಾನ ಮಾಡುತ್ತೇನೆ ಎಂದು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ. ಆದರೆ, ಎಲ್ಲ ಪಾರ್ಟಿಗಳಲ್ಲಿ ಅಲ್ಲ. ಆಪ್ತ ಸ್ನೇಹಿತರೊಂದಿಗೆ ಪಾರ್ಟಿ ಮಾಡುವಾಗ ಮಾತ್ರ ಆಲ್ಕೋಹಾಲ್ ಸೇವನೆ ಮಾಡುತ್ತೇನೆ ಎಂದು ಅನೇಕ ಸಂದರ್ಶನಗಳಲ್ಲಿ ಒಪ್ಪಿಕೊಂಡಿದ್ದಾರೆ.
ತೆಲುಗು ಸಿನಿಮಾ ಇಂಡಸ್ಟ್ರಿ ಬಗ್ಗೆ ಮಾತನಾಡಿರುವ ಸಂಯುಕ್ತಾ, ಟಾಲಿವುಡ್ನಲ್ಲಿ ನಾಯಕಿಯರನ್ನು ಗ್ಲಾಮರಸ್ ಆಗಿ ತೋರಿಸಲಾಗುತ್ತದೆ. ಆದರೂ, ತೆಲುಗು ಶೂಟಿಂಗ್ ಸೆಟ್ನ ಹೊರಗೆ ಮಹಿಳಾ ಕಲಾವಿದರನ್ನು ಸಭ್ಯವಾಗಿ ನಡೆಸಿಕೊಳ್ಳುವಷ್ಟು ಬೇರೆ ಯಾವುದೇ ಭಾಷೆಯಲ್ಲಿ ನಡೆಸಿಕೊಳ್ಳುವುದಿಲ್ಲ ಎಂದು ಸಂಯುಕ್ತಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು ಸಂಯುಕ್ತಾ ಅವರಿಗೆ ಪುಸ್ತಕಗಳೆಂದರೆ ತುಂಬಾ ಇಷ್ಟ. ಕಾಲ್ಪನಿಕ ಕಾದಂಬರಿಗಳನ್ನು ಎಷ್ಟು ಪ್ರೀತಿಸುತ್ತಾರೋ, ಭಾರತೀಯ ಸಂಸ್ಕೃತಿಯನ್ನು ತಿಳಿಸುವ ಪುಸ್ತಕಗಳನ್ನು ಸಹ ಅಷ್ಟೇ ಪ್ರೀತಿಸುತ್ತಾರಂತೆ. ನಂದಮೂರಿ ಬಾಲಕೃಷ್ಣ ಅವರೊಂದಿಗೆ ಆಭರಣ ಜಾಹೀರಾತಿನಲ್ಲಿ ನಟಿಸಿದಾಗ, ಅವರ ಜೊತೆ ನಟಿಸಲು ಯಾವಾಗ ಅವಕಾಶ ಸಿಗುತ್ತದೆ ಎಂದು ಯೋಚಿಸುತ್ತಿದ್ದರಂತೆ. ಆದರೆ, ಅಖಂಡ-2 ಚಿತ್ರದಲ್ಲಿ ಆಫರ್ ಪಡೆದಾಗ ಆ ಉತ್ಸಾಹವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. (ಏಜೆನ್ಸೀಸ್)