

ಸುಬ್ರಹ್ಮಣ್ಯ: ಶ್ರೀಕೃಷ್ಣ ದೇವರು ಧರ್ಮದ ರಕ್ಷಣೆಗಾಗಿ ರಾಜ ನೀತಿಜ್ಞನಾಗಿದ್ದನೇ ಹೊರತು ರಾಜನಾಗಲಿಲ್ಲ. ತನ್ನ ನಡೆಯ ಮೂಲಕ ಪ್ರಪಂಚ ಧರ್ಮವನ್ನು ಉಳಿಸಿಕೊಂಡ. ರಾಜನೀತಿಯನ್ನು ಸಕಾಲಿಕವಾಗಿ ಬಳಸಿ ಧರ್ಮ ಉಳಿಯುವಂತೆ ಮಾಡಿದ ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
28ನೇ ಚಾತುರ್ಮಾಸ್ಯ ವ್ರತ ಪ್ರಯುಕ್ತ ಸಾಂಸ್ಕೃತಿಕ ವೈಭವದಲ್ಲಿ, ಶ್ರೀಕೃಷ್ಣ ರಾಜನೀತಿ ಎಂಬ ವಿಷಯವಾಗಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.
ಉಪನ್ಯಾಸಕ ವಿದ್ವಾನ್ ಕೃಷ್ಣರಾಜ ಭಟ್ ಕುತ್ಪಾಡಿ ಮಾತನಾಡಿ, ಒಬ್ಬ ರಾಜ ಪ್ರಜೆಗಳಿಗಾಗಿ ಬದುಕುತ್ತಾನೆ ಎಂದಾದರೆ ಮಾತ್ರ ಆತ ರಾಜನಾಗಲು ಅರ್ಹ. ಅಂತಹ ರಾಜ ಮಾತ್ರ ಸಿಗುವ ಗೌರವ ಪಡೆಯಲು ಸೂಕ್ತ ಎಂದರು.
ಕುಕ್ಕೆ ಸುಬ್ರಹ್ಮಣ್ಯ ವೇದವ್ಯಾಸ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಸಗ್ರಿ ಆನಂದ ತೀರ್ಥ ಪ್ರಸ್ತುತಪಡಿಸಿದರು. ದಿವಾನ ಸುದರ್ಶನ ಜೋಯೀಸ, ಸಾಂಸ್ಕೃತಿಕ ವೈಭವದ ಸಂಘಟಕ ಕಲಾವಿದ ಕೆ.ಯಜ್ಞೇಶ್ ಆಚಾರ್, ಕಲಾವಿದ ಶ್ರೀಕೃಷ್ಣ ಶರ್ಮ ಮೊದಲಾದವರಿದ್ದರು. ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆ ಮುಖ್ಯಶಿಕ್ಷಕ ಸತ್ಯಶಂಕರ ಭಟ್ ಕಾರ್ಯಕ್ರಮ ನಿರೂಪಿಸಿದರು.