ದೇಹದ ಬಗ್ಗೆ ಮಾತನಾಡಿದ್ದ ಜನರಿಗೆ ಗರ್ಭ ಹೊತ್ತ ಫೋಟೋಗಳ ಮೂಲಕ ಉತ್ತರ ಕೊಟ್ಟ ನಟಿ

sameera reddy
Published on

ಮುಂಬೈ: ಸಿನಿಮಾ ರಂಗವೆಂದ ಮೇಲೆ ಪ್ರಚಾರ ಎಷ್ಟು ಮಾಮೂಲೋ ಅಷ್ಟೇ ಮಾಮೂಲು ಅಲ್ಲಿನ ಒಳಜಗಳಗಳು. ಸಿನಿಮಾದಲ್ಲಿ ನಟ ನಟಿಯರ ನಟನೆ ಬಗ್ಗೆ ಋಣಾತ್ಮಕವಾಗಿ ಮಾತನಾಡುವುದಷ್ಟೇ ಅಲ್ಲದೆ, ಅವರ ದೇಹ ಸೌಂದರ್ಯದನ್ನು ಹೀಯಾಳಿಸಿಕೊಳ್ಳುವವರೆಗೂ ಹೋಗಿ ನಿಲ್ಲುತ್ತದೆ ಅಭಿಮಾನಿಗಳ ಹುಚ್ಚುತನ. ಇತ್ತೀಚೆಗೆ ದೇಹದ ಕುರಿತಾಗಿ ಹೀಯಾಳಿಕೆಯನ್ನು ಅನುಭವಿಸಿದ್ದ ನಟಿ ತಾನು ಗರ್ಭವತಿಯಾದಾಗ ತೆಗೆಸಿಕೊಂಡ ಅದ್ಭುತ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ತಾನೆಷ್ಟು ಪಾಸಿಟಿವ್​ ಎಂದು ಹೇಳಿಕೊಂಡಿದ್ದಾರೆ.

ಬಾಲಿವುಡ್​ ನಟಿ ಸಮೀರಾ ರೆಡ್ಡಿ ಕಳೆದ ವರ್ಷ ಜುಲೈ ತಿಂಗಳಲ್ಲಿ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ನೈರಾ ಹೆಸರಿನ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ ಆಕೆಗೆ, ಗರ್ಭಾವಸ್ಥೆಯ ಸಮಯದಲ್ಲಿ ತೂಕ ಹೆಚ್ಚಿತ್ತು. ಬರೋಬ್ಬರಿ 32 ಕೆಜಿ ಹೆಚ್ಚಳ ಕಂಡ ಆಕೆಯ ಬಗ್ಗೆ ಜನರು ಅನೇಕ ರೀತಿಯಲ್ಲಿ ಚರ್ಚೆ ಮಾಡಿದ್ದರು. ಇದರಿಂದ ಕುಗ್ಗದ ಸಮೀರಾ ರೆಡ್ಡಿ ತಾನು 9 ತಿಂಗಳು ಗರ್ಭಿಣಿಯಿದ್ದಾಗ ನೀರಿನೊಳಗೆ ತೆಗೆಸಿಕೊಂಡ ಅದ್ಭುತ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಹಸಿರು ಬಣ್ಣದ ಬಿಕಿನಿ ತೊಟ್ಟಿರುವ ಫೋಟೋಗಳನ್ನು ಹಂಚಿಕೊಂಡಿರುವ ನಟಿ ಪ್ರತಿ ಫೋಟೋ ಜತೆಯಲ್ಲಿಯೂ ಸ್ಪೂರ್ತಿದಾಯಕ ನುಡಿಗಳನ್ನು ಬರೆದಿದ್ದಾರೆ. 9 ತಿಂಗಳ ಗರ್ಭಿಣಿಯಾಗಿದ್ದಾಗ ನಾನು ನನ್ನ ಗರ್ಭದ ಸೌಂದರ್ಯವನ್ನು ಆಚರಿಸಲು ಇಷ್ಟಪಟ್ಟಿದ್ದೆ. ಹೆಚ್ಚು ದುರ್ಬಲ ಎನಿಸುವ, ದಣಿವಾಗುವ, ಹೆದರಿಕೆಯಾಗುವ ಆ ಸಮಯ ಅತ್ಯಂತ ಸುಂದರವಾದ ಭಾವನೆಗಳನ್ನು ನೀಡುತ್ತದೆ ಎಂದು ಹೇಳಿಕೊಂಡಿದ್ದಾರೆ.

ದೇಹದ ಗಾತ್ರ ಹೇಗೇ ಬದಲಾದರೂ ನಾವು ನಮ್ಮನ್ನು ಸ್ವೀಕರಿಸಿಕೊಳ್ಳಬೇಕು ಮತ್ತು ಪ್ರೀತಿಸಿಕೊಳ್ಳಬೇಕು. ಯಾವುದೇ ವಿಚಾರದಲ್ಲಿ ಯಾರು ಏನೇ ಹೇಳಿದರೂ ಅದರ ಬಗ್ಗೆ ಭಯಪಟ್ಟು ಮೂಲೆಗುಂಪಾಗಿ ಕೂರಬಾರದು ಎಂದು ನಟಿ ನುಡಿದಿದ್ದಾರೆ.

ಸಮೀರಾ ರೆಡ್ಡಿ ಮತ್ತು ಅಕ್ಷಯ್​ ವರ್ಡೆ ದಂಪತಿಗೆ ಹ್ಯಾನ್ಸ್​ ಹೆಸರಿನ ಗಂಡು ಮಗನಿದ್ದು, ಕಳೆದ ಜುಲೈನಲ್ಲಿ ದಂಪತಿ ನೈರಾ ಹೆಸರಿನ ಹೆಣ್ಣು ಮಗುವಿಗೆ ಜನ್ಮವಿತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸದಾ ಆ್ಯಕ್ಟಿವ್​ ಇರುವ ಸಮೀರಾ ಫ್ಲಿಪ್​​ ದಿ ಸ್ವಿಚ್​ ಚಾಲೆಂಜ್​ಗೆ ಹೆಜ್ಜೆ ಹಾಕುವ ಮೂಲಕ ವೈರಲ್​ ಆಗಿದ್ದಾರೆ ಕೂಡ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net