ಯಾರಿಗೂ ಬೇಡವಾದ ಪುರಿ ಜಗನ್ನಾಥ್​ಗೆ ಸಾಥ್​ ನೀಡಿದ ಸಲ್ಮಾನ್​ …

Salman Khan - Puri Jagannath
Published on

ಹೈದರಾಬಾದ್​: 'ಲೈಗರ್​' ಚಿತ್ರದ ನಂತರ ಪುರಿ ಜಗನ್ನಾಥ್​ ಸಹವಾಸವೇ ಬೇಡ ಎಂಬ ನಿರ್ಧಾರಕ್ಕೆ ಟಾಲಿವುಡ್​ ಸ್ಟಾರ್​ಗಳು ಬಂದಂತಿದೆ. ಏಕೆಂದರೆ, ಆ ಚಿತ್ರದ ಭಯಂಕರ ಸೋಲಿನ ನಂತರ ಯಾರೂ ಪುರಿ ಜತೆಗೆ ಕೆಲಸ ಮಾಡುವುದಕ್ಕೆ ಮುಂದಾಗುತ್ತಿಲ್ಲ. ಹೀಗಿರುವಾಗಲೇ, ಬಾಲಿವುಡ್​ ನಟ ಸಲ್ಮಾನ್​ ಖಾನ್​, ಪುರಿ ಜತೆಗೆ ಕೆಲಸ ಮಾಡುವ ಸಾಧ್ಯತೆ ಇದೆ ಎಂಬ ಸುದ್ದಿಯೊಂದು ಕೇಳಿ ಬರುತ್ತಿದೆ.

ಟಾಲಿವುಡ್​ನ ಜನಪ್ರಿಯ ನಿರ್ದೇಶಕರ ಪೈಕಿ ಪುರಿ ಜಗನ್ನಾಥ್​ ಸಹ ಒಬ್ಬರು. ಒಂದು ಕಾಲಕ್ಕೆ ಹಿಟ್​ ಚಿತ್ರಗಳನ್ನು ನೀಡಿದ್ದ ಅವರ ಜತೆಗೆ ಕೆಲಸ ಮಾಡುವುದಕ್ಕೆ ಎಲ್ಲರೂ ಹಾತೊರೆಯುತ್ತಿದ್ದರು. ಆದರೆ, ಒಂದೇ ಒಂದು 'ಲೈಗರ್​' ಚಿತ್ರದ ಸೋಲು, ಪುರಿಗೆ ಯಾವ ರೀತಿ ಪೆಟ್ಟು ನೀಡಿದೆ ಎಂದರೆ ಯಾರೂ ಸಹ ಅವರ ಜತೆಗೆ ಕೆಲಸ ಮಾಡುವುದಕ್ಕೆ ಮುಂದಾಗುತ್ತಿಲ್ಲ. ಪುರಿ ಒಂದಿಷ್ಟು ಕಥೆಗಳನ್ನು ಮಾಡಿಟ್ಟುಕೊಂಡು, ತಮ್ಮ ಚಿತ್ರದಲ್ಲಿ ನಟಿಸುವುದಕ್ಕೆ ಕೆಲವು ಹೀರೋಗಳನ್ನು ಸಂಪರ್ಕಿಸಿದ್ದಾರಂತೆ. ಆದರೆ, ಯಾರೂ ಸಹ ಪುರಿ ಜತೆಗೆ ಕೆಲಸ ಮಾಡುವುದಕ್ಕೆ ಹೆದರುತ್ತಿದ್ದಾರೆ. 'ಲೈಗರ್​'ನಲ್ಲಿ ನಟಿಸಿದ್ದ ವಿಜಯ್​ ದೇವರಕೊಂಡ ಸಹ ಪುರಿ ಪೋನ್​ ಎತ್ತುತ್ತಿಲ್ಲವಂತೆ.

ಬರೀ ಟಾಲಿವುಡ್​ ಅಷ್ಟೇ ಅಲ್ಲ, ಬಾಲಿವುಡ್​ನಲ್ಲೂ ಪುರಿಗೆ ಇದೇ ಪರಿಸ್ಥಿತಿ ನಿರ್ಮಾಣವಾಗಿದೆಯಂತೆ. ಹೀಗಿರುವಾಗಲೇ, ಪುರಿ ಜತೆಗೆ ಕೆಲಸ ಮಾಡುವುದಕ್ಕೆ ಸಲ್ಮಾನ್​ ಒಪ್ಪಿದ್ದಾರಂತೆ. ಇತ್ತೀಚೆಗೆ ಪುರಿ, ಮುಂಬೈಗೆ ಹೋಗಿ ಸಲ್ಮಾನ್​ ಅವರನ್ನು ಭೇಟಿ ಮಾಡಿದ್ದಾರೆ. ಒಂದು ಕಥೆಯನ್ನೂ ಹೇಳಿದ್ದಾರೆ. ಕಥೆ ಕೇಳಿ ಇಂಪ್ರೆಸ್​ ಆದ ಸಲ್ಮಾನ್​, ಪುರಿ ಜತೆಗೆ ಕೆಲಸ ಮಾಡುವುದಕ್ಕೆ ಒಪ್ಪಿಕೊಂಡಿದ್ದಾರಂತೆ.

ಅಂದಹಾಗೆ, ಇದೊಂದು ಪಕ್ಕಾ ಆಕ್ಷನ್​ ಚಿತ್ರವಾಗಿದ್ದು, ಈ ಚಿತ್ರವನ್ನು ಯಾರು ನಿರ್ಮಿಸುತ್ತಾರೆ, ಜತೆಗೆ ಯಾರೆಲ್ಲ ಇರುತ್ತಾರೆ ಎಂಬ ವಿಷಯ ಇನ್ನಷ್ಟೇ ಹೊರಬೀಳಬೇಕಿದೆ. ಆದರೆ, ಸದ್ಯಕ್ಕಂತೂ ಸಲ್ಮಾನ್​ ಒಪ್ಪಿರುವುದು ಪುರಿಗೆ ಒಂದಿಷ್ಟು ಆಕ್ಸಿಜನ್​ ಸಿಕ್ಕಂತೆ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net