ಇದೊಂದು ಫೇಕ್​ ನ್ಯೂಸ್​ … ಕಂಗನಾ ಹೀಗೆ ಹೇಳಿದ್ದು ಯಾವ ವಿಷಯದ ಬಗ್ಗೆ?

Kangana Ranauat 1
Published on

ಮುಂಬೈ: ಅದ್ಯಾಕೋ ಕಂಗನಾ ಕೆಲವು ತಿಂಗಳುಗಳಿಂದ ತಾವಾಯಿತು, ತಮ್ಮ ಪಾಡಾಯಿತು ಎಂಬಂತೆ ಸುಮ್ಮನಿದ್ದು ಬಿಟ್ಟಿದ್ದಾರೆ. ಯಾವ ವಿಷಯಕ್ಕೂ ತಲೆ ಹಾಕದೆ, ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಷ್ಟಾದರೂ, ಕಂಗನಾ ಮೇಲೆ ಅಲ್ಲೊಂದು, ಇಲ್ಲೊಂದು ಸುದ್ದಿಗಳು ಕೇಳಿ ಬರುತ್ತಲೇ ಇರುತ್ತವೆ. ಹಾಗೆ ಕೇಳಿ ಬಂದಿರುವ ಸುದ್ದಿಗೆ ಕಂಗನಾ ಇದೀಗ ಪ್ರತಿಕ್ರಿಯಿಸಿದ್ದು, ಅದೆಲ್ಲ ಫೇಕ್​ ನ್ಯೂಸ್ ಎಂದು ಹೇಳಿದ್ದಾರೆ.

ಇಷ್ಟಕ್ಕೂ ಏನಾಯಿತು ಎಂಬ ಪ್ರಶ್ನೆ ಬರಬಹುದು? ಕಂಗನಾ, 'ಎಮರ್ಜೆನ್ಸಿ' ಎಂಬ ಚಿತ್ರವನ್ನು ನಿರ್ದೇಶಿಸಿ, ಅದರಲ್ಲಿ ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ವಿಷಯ ಗೊತ್ತಿರಬಹುದು. ಈ ಚಿತ್ರದಲ್ಲಿನ ಒಂದಿಷ್ಟು ಸನ್ನಿವೇಶಗಳನ್ನು ಕಂಗನಾ, ಸಂಸತ್ತಿನಲ್ಲಿ ಚಿತ್ರೀಕರಣ ಮಾಡುವುದಕ್ಕೆ ಮುಂದಾಗಿದ್ದು, ಅದಕ್ಕಾಗಿ ಅನುಮತಿ ಕೋರಿ ಪತ್ರ ಬರೆದಿದ್ದಾರೆ ಎಂಬ ಸುದ್ದಿಯೊಂದು ಕೇಳಿ ಬಂದಿತ್ತು.

ಕೆಲವರು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ಸಂಸತ್ತಿನಲ್ಲಿ ಕಂಗನಾ ಚಿತ್ರೀಕರಣ ಮಾಡುತ್ತಾರೆ ಎಂಬ ಸುದ್ದಿ ವೈರಲ್​ ಆಗಿತ್ತು. ಸಂಸತ್ತಿನಲ್ಲಿ ದೂರದರ್ಶನ ಮತ್ತು ಸಂಸದ್​ ಟಿವಿ ಬಿಟ್ಟರೆ, ಬೇರೆ ಮಾಧ್ಯಮದವರು ಕಾಲಿಡುವಂತಿಲ್ಲ. ಹಾಗಿರುವಾಗ, ಕಂಗನಾಗೆ ಮಾತ್ರ ವಿಶೇಷ ಅನುಮತಿ ಯಾಕೆ? ಎಂಬ ಪ್ರಶ್ನೆ ಕೇಳಿ ಬಂದಿತ್ತು. ಹೇಗೂ ಕಂಗನಾ, ಭಾರತೀಯ ಜನತಾ ಪಕ್ಷದ ಜತೆಗೆ ಗುರುತಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ಹೀಗಿರುವಾಗ, ಆಕೆಗೆ ಮಾತ್ರ ಅನುಮತಿ ಸಿಕ್ಕಿದೆ ಎಂಬ ಸುದ್ದಿ, ಬೇರೆ ತಿರುವು ಪಡೆದುಕೊಳ್ಳುತ್ತಲಿತ್ತು.

ಈಗ ಕಂಗನಾ ಈ ವದಂತಿಗಳಿಗೆ ಫುಲ್​ಸ್ಟಾಪ್​ ಹಾಕಿದ್ದಾರೆ. ಚಿತ್ರದ ಸುತ್ತ ಹರಿಡುರವ ವಿಷಯಗಳೆಲ್ಲ ಸುಳ್ಳು, ಇದೊಂದು ಫೇಕ್​ ನ್ಯೂಸ್​ ಎಂದು ಅವರು ತಮ್ಮ ಇನ್​ಸ್ಟಾಗ್ರಾಂ ಅಕೌಂಟ್​ನಲ್ಲಿ ಬರೆದುಕೊಂಡಿದ್ದಾರೆ.

ಅಂದಹಾಗೆ, 'ಎಮರ್ಜೆನ್ಸಿ' ಚಿತ್ರದಲ್ಲಿ ಕಂಗನಾ ಅಲ್ಲದೆ, ಅನುಪಂ ಖೇರ್​, ಮಹಿಮಾ ಚೌಧರಿ, ಶ್ರೇಯಸ್​ ತಲ್ಪಾಡೆ ಮುಂತಾದವರು ಅಭಿನಯಿಸಿದ್ದು, ಸದ್ಯ ಮುಂಬೈನಲ್ಲಿ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net