

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿ 5-6 ವರ್ಷಗಳಲೇ ಕಳೆದಿವೆ. ಹೀಗಾಗಿ ಬಾಲಿವುಡ್ ನಟ ದಕ್ಷಿಣ ಭಾರತದ ಸ್ಟಾರ್ ನಿರ್ದೇಶಕನ ಜೊತೆ ಕೆಲಸ ಮಾಡಲಿದ್ದಾರೆ.
ತಮಿಳು, ತೆಲುಗಿನಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಎಆರ್ ಮುರುಗದಾಸ್ ನಿರ್ದೇಶನ ಮಾಡಲಿರುವ ಸಿನಿಮಾದಲ್ಲಿ ಸಲ್ಮಾನ್ ಖಾನ್ ನಾಯಕನಾಗಿ ನಟಿಸಲಿದ್ದಾರೆ. ಈ ಸಿನಿಮಾವನ್ನು ಸಾಜಿದ್ ನಾಡಿಯಾವಾಲ ನಿರ್ಮಾಣ ಮಾಡಲಿದ್ದಾರೆ. ಇದು ದೊಡ್ಡ ಬಜೆಟ್ ಸಿನಿಮಾ ಆಗಿರಲಿದೆಯಂತೆ. ನಿರ್ದೇಶಕ ಮುರುಗದಾಸ್ ತಮ್ಮ ಹೊಸ ಚಿತ್ರದ ಸಂಬಂಧ ಮಂಗಳವಾರ (ಮಾ.12) ಟ್ವೀಟ್ ಮಾಡಿದ್ದಾರೆ.
ಚಿರಂಜೀವಿ ಅಭಿನಯದ ಸ್ಟಾಲಿನ್, ತುಪ್ಪಾಕಿ, ಸೆವೆಂತ್ ಸೆನ್ಸ್, ಸ್ಪೈಡರ್ ಗಜಿನಿ, ಇನ್ನೂ ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಎಆರ್ ಮುರುಗದಾಸ್ ಈಗ ಸಲ್ಮಾನ್ ಖಾನ್ರ ಮುಂದಿನ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ.
ಮುರುಗದಾಸ್ಗೆ ಹಿಂದಿ ಹೊಸದೇನೂ ಅಲ್ಲ. ಈ ಹಿಂದೆ ಆಮಿರ್ ಖಾನ್ ನಟಿಸಿದ್ದ ‘ಗಜಿನಿ’ ಸಿನಿಮಾ ನಿರ್ದೇಶನ ಮಾಡಿದ್ದರು. ಸೊನಾಕ್ಷಿ ಸಿನ್ಹ ನಟಿಸಿದ್ದ ‘ಅಕಿರಾ’ ಸಿನಿಮಾ ಸಹ ನಿರ್ದೇಶನ ಮಾಡಿದ್ದಾರೆ. ಸಲ್ಮಾನ್ ಖಾನ್ ಸಹ, ಮುರುಗದಾಸ್ ನಿರ್ದೇಶನ ಮಾಡಿದ್ದ ‘ಸ್ಟಾಲಿನ್’ ಸಿನಿಮಾವನ್ನು ಹಿಂದಿಯಲ್ಲಿ ‘ಜೈ ಹೋ’ ಹೆಸರಲ್ಲಿ ರೀಮೇಕ್ ಮಾಡಿದ್ದಾರೆ. ಈಗ ಇಬ್ಬರೂ ಒಟ್ಟಿಗೆ ಕೆಲಸ ಮಾಡಲಿದ್ದಾರೆ.
ಒಂದು ರೋಚಕ ಚಿತ್ರಕ್ಕಾಗಿ ನಿರ್ದೇಶಕ ಎ ಆರ್ ಮುರುಗದಾಸ್ ಮತ್ತು ನನ್ನ ಸ್ನೇಹಿತ, ನಿರ್ಮಾಪಕ ಸಾಜಿದ್ ನಾದಿಯಾದ್ವಾಲಾ ಅವರಂತಹ ಅದ್ಭುತ ಪ್ರತಿಭಾವಂತರ ಜೊತೆಗೆ ಕೈಜೋಡಿಸಲು ಸಂತೋಷವಾಗಿದೆ. ಈ ಕಾಂಬಿನೇಷನ್ ವಿಶೇಷವಾಗಿದೆ ಮತ್ತು ನಿಮ್ಮ ಪ್ರೀತಿ, ಆಶೀರ್ವಾದದೊಂದಿಗೆ ನಾನು ಈ ಜರ್ನಿಯನ್ನು ಎದುರು ನೋಡುತ್ತಿದ್ದೇನೆ. 2025ರ ಈದ್ ಹಬ್ಬಕ್ಕೆ ಈ ಸಿನಿಮಾವನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
400 ಕೋಟಿಯ ಅದ್ಧೂರಿ ಬಜೆಟ್ ನಲ್ಲಿ ಈ ಸಿನಿಮಾ ತಯಾರಾಗಲಿದೆ. ಈಗಾಗಲೇ ಶೂಟಿಂಗ್ ಲೊಕೇಶನ್ ಗಳನ್ನು ಫಿಕ್ಸ್ ಮಾಡಲಾಗಿದೆಯಂತೆ. ಈ ಸಿನಿಮಾವನ್ನು ಭಾರತ ಹಾಗೂ ಪೋರ್ಚುಗಲ್ ಮತ್ತು ಯುರೋಪ್ ದೇಶಗಳಲ್ಲಿ ಚಿತ್ರೀಕರಿಸಲಾಗುತ್ತದೆ ಎಂದು ಹೇಳಲಾಗಿದೆ.
ಅಷ್ಟೇ ಅಲ್ಲ..ಇದು ತಮ್ಮ ಕನಸಿನ ಪ್ರಾಜೆಕ್ಟ್ ಎಂದು ನಿರ್ಮಾಪಕ ಸಾಜಿದ್ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಸಲ್ಲೂ ಭಾಯ್ ಜೊತೆಗಿನ ಮುರುಗದಾಸ್ ಚಿತ್ರಕ್ಕೆ ಕಿಕ್-2 ಟೈಟಲ್ ಇಡಲು ಚಿಂತನೆ ನಡೆದಿದೆ ಎಂಬ ಮಾತು ಕೇಳಿ ಬರುತ್ತಿದೆ.
ನಿರ್ದೇಶಕ ಎ ಆರ್ ಮುರುಗದಾಸ್ ಅವರು ಶಿವಕಾರ್ತಿಕೇಯನ್ ಮತ್ತು ರುಕ್ಮಿಣಿ ವಸಂತ್ ಕಾಂಬಿಷೇನ್ನ ಹೊಸ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಸಿನಿಮಾ ಶೂಟಿಂಗ್ ಆರಂಭವಾಗಿದೆ. ಅದು ಮುಗಿದ ಬಳಿಕ ಸಲ್ಮಾನ್ ಖಾನ್ ಅವರ ಸಿನಿಮಾವನ್ನು ಆರಂಭಿಸುವ ಸೂಚನೆ ಇದೆ. ಅಲ್ಲದೆ, ಸಲ್ಮಾನ್ ಖಾನ್ ಅವರಂತೆಯೇ ಈಗ ಎ ಆರ್ ಮುರುಗದಾಸ್ ಅವರಿಗೂ ಬಿಗ್ ಸಕ್ಸಸ್ ಒಂದು ಬೇಕಾಗಿದೆ.