ಧೋನಿ ಸೋಷಿಯಲ್ ಮೀಡಿಯಾದಿಂದ ದೂರ, ಸಾಕ್ಷಿ ಬಳಿ ಇದೆ ಸಿಂಪಲ್ ಕಾರಣ!

dhoni1_web
Published on

ಬೆಂಗಳೂರು: ಸೆಲೆಬ್ರಿಟಿಗಳೆಂದರೆ ಸಾಮಾಜಿಕ ಜಾಲತಾಣದಲ್ಲಿ ಸದಾ ಚಟುವಟಿಕೆಗಳಿಂದ ಇರುತ್ತಾರೆ. ಕ್ರಿಕೆಟ್ ತಾರೆಯರೂ ಇದರಿಂದ ಹೊರತಾಗಿಲ್ಲ. ಆದರೆ ಟೀಮ್ ಇಂಡಿಯಾ ನಾಯಕ ಎಂಎಸ್ ಧೋನಿ ಮಾತ್ರ ಸೋಷಿಯಲ್ ಮೀಡಿಯಾದಿಂದ ಸದಾ ದೂರ ನಿಲ್ಲುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರಿಗೆ ಖಾತೆಗಳಿದ್ದರೂ, ಅದರಲ್ಲಿ ಅವರು ಆ್ಯಕ್ಟೀವ್ ಆಗಿರುವುದಿಲ್ಲ. ಟ್ವಿಟರ್‌ನಲ್ಲಿ ಅಪರೂಪಕ್ಕೊಮ್ಮೆ ಟ್ವೀಟ್, ಇನ್‌ಸ್ಟಾಗ್ರಾಂನಲ್ಲಿ ಅಪರೂಪಕ್ಕೊಮ್ಮೆ ಪೋಸ್ಟ್ ಮಾಡುತ್ತಿರುತ್ತಾರೆ. ಸಾಮಾಜಿಕ ಜಾಲತಾಣಗಳ ಬಗ್ಗೆ ಧೋನಿ ಈ ರೀತಿಯ ವೈರಾಗ್ಯ ತೋರಿಸುತ್ತಿರುವುದೇಕೆಂದು ಅವರ ಪತ್ನಿ ಸಾಕ್ಷಿ ಸಿಂಗ್ ಬಳಿ ಉತ್ತರವಿದೆ.

ಇನ್‌ಸ್ಟಾಗ್ರಾಂ ಲೈವ್ ಮಾತುಕತೆಯ ವೇಳೆ ಸಾಕ್ಷಿ, ಧೋನಿ ಯಾಕೆ ಆನ್‌ಲೈನ್‌ನಲ್ಲಿರುವುದಿಲ್ಲ ಎಂಬುದಕ್ಕೆ ಕಾರಣ ವಿವರಿಸಿದ್ದಾರೆ. ‘ನಿಮಗೆ ಗೊತ್ತೇ ಮಹಿ ಹೇಗಿರುತ್ತಾರೆಂದು. ಅವರು ಇನ್‌ಸ್ಟಾ ಲೈವ್‌ಗೆ ಬಂದು ಮಾತನಾಡುವುದೇ ಇಲ್ಲ. ಕರೊನಾ ವೈರಸ್ ಜಾಗೃತಿಗೆ ಸಂಬಂಧಿಸಿದಂತೆ ವಿಡಿಯೋ ಪೋಸ್ಟ್ ಮಾಡಬೇಕೆಂದು ಅವರ ಮೇಲೆ ಒತ್ತಡಗಳು ಬರುತ್ತಿವೆ. ಆದರೂ ಅವರು ಹಾಗೆ ಮಾಡುವುದಿಲ್ಲ. ಯಾಕೆಂದರೆ, ಪ್ರಧಾನಿ ನರೇಂದ್ರ ಮೋದಿಯವರು ಏನಾದರೂ ಹೇಳಿದರೆ ಜನರು ಅದಕ್ಕೆ ಸೂಕ್ತ ಸ್ಪಂದನೆ ನೀಡುತ್ತಿದ್ದಾರೆ. ಈಗ ದೇಶದಲ್ಲಿ ಪ್ರಧಾನಿಗಿಂತ ದೊಡ್ಡವರು ಯಾರೂ ಇಲ್ಲ. ಹೀಗಾಗಿ ಅವರು ಸಾಮಾಜಿಕ ಜಾಲತಾಣಗಳಿಗೆ ಬಂದು ಪೋಸ್ಟ್ ಮಾಡುವ ಅಗತ್ಯವಿಲ್ಲವೆಂದು ನಂಬಿದ್ದಾರೆ’ ಎಂದು ಸಾಕ್ಷಿ ವಿವರಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಧೋನಿ ಸದಾ ಲೋ-ಪ್ರೊಫೈಲ್ ಕಾಯ್ದುಕೊಳ್ಳುತ್ತಾರೆ. ಜನರು ಅವರ ಬಗ್ಗೆ ತಿಳಿದುಕೊಳ್ಳಲು ಕಾತರದಿಂದಿರುತ್ತಾರೆ. ಆದರೆ ಅವರು ಇನ್‌ಸ್ಟಾಗ್ರಾಂನಲ್ಲಿ ಅಪರೂಪಕ್ಕಷ್ಟೇ ಪೋಸ್ಟ್‌ಗಳನ್ನು ಹಾಕುತ್ತಿರುತ್ತಾರೆ ಎಂದು ಸಾಕ್ಷಿ ಹೇಳಿದ್ದಾರೆ. ಇನ್ನು ಧೋನಿ ಗೈರಿನಲ್ಲಿ ಸಾಕ್ಷಿ ಅವರ ಜೀವನದ ದಿನಚರಿಗಳ ಬಗ್ಗೆ ಅಭಿಮಾನಿಗಳಿಗೆ ಸದಾ ಮಾಹಿತಿ ಹಂಚಿಕೊಳ್ಳುತ್ತಿರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಾಕ್ಷಿ ಸದಾ ಚಟುವಟಿಕೆಯಲ್ಲಿದ್ದು, ಧೋನಿ ಅಭಿಮಾನಿಗಳಿಗೆ ಅವರ ಚಿತ್ರ, ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net