1983ರ ವಿಶ್ವಕಪ್ ವಿಜೇತರ ವಾಟ್ಸ್‌ಆ್ಯಪ್ ಗ್ರೂಪ್ ಹೆಸರೇನು ಗೊತ್ತೇ?

1983_web
Published on

ಬೆಂಗಳೂರು: ಕಪಿಲ್ ದೇವ್ ಸಾರಥ್ಯದಲ್ಲಿ 1983ರಲ್ಲಿ ಏಕದಿನ ವಿಶ್ವಕಪ್ ಜಯಿಸಿದ ಬಳಿಕ ಭಾರತೀಯ ಕ್ರಿಕೆಟ್‌ನ ಚಿತ್ರಣವೇ ಬದಲಾಗಿದೆ. ಆ ಸಾಧನೆಯಿಂದ ಸ್ಫೂರ್ತಿಗೊಂಡು ಹಲವರು ಸ್ಟಾರ್ ಕ್ರಿಕೆಟಿಗರಾಗಿ ಬೆಳೆದಿದ್ದರೆ, ಕ್ರಿಕೆಟ್ ಆಟವೂ ಸಾಕಷ್ಟು ಶ್ರೀಮಂತವಾಗಿ ಬೆಳೆದಿದೆ. ಕಪಿಲ್ ದೇವ್ ಸಾರಥ್ಯದಲ್ಲಿ ವಿಶ್ವಕಪ್ ಜಯಿಸಿದ ಸಮಯದಲ್ಲಿ ಮೊಬೈಲ್ ಬಿಡಿ, ದೂರವಾಣಿ ಕೂಡ ಸುಲಭದಲ್ಲಿ ಕೈಗೆಟುಕುವಂತಿರಲಿಲ್ಲ. ಆದರೆ ಆಧುನಿಕ ಜಗತ್ತಿನಲ್ಲಿ ಎಲ್ಲರ ಕೈಯಲ್ಲೂ ಮೊಬೈಲ್‌ಗಳು ಓಡಾಡುತ್ತಿದ್ದು, ಕಪಿಲ್ ಡೆವಿಲ್ಸ್ ಕೂಡ ಇದರಿಂದ ಹೊರತಾಗಿಲ್ಲ. ಹೀಗಾಗಿ ವಿಶ್ವಕಪ್ ವಿಜೇತ ಭಾರತ ತಂಡದ ವಾಟ್ಸ್‌ಆ್ಯಪ್ ಗ್ರೂಪ್ ಒಂದು ರಚನೆಯಾಗಿದ್ದು, ಎಲ್ಲ 15 ಆಟಗಾರರು ಅದರಲ್ಲಿದ್ದಾರೆ. ‘ಚಾಂಪಿಯನ್ಸ್ ಫಾರೆವರ್’ (ಎಂದೆಂದಿಗೂ ಚಾಂಪಿಯನ್ಸ್) ಎಂಬುದು ಆ ಗ್ರೂಪ್‌ನ ಹೆಸರು!

ವಿಶ್ವಕಪ್ ವಿಜೇತ ತಂಡದ ಸದಸ್ಯ ಹಾಗೂ ವೇಗಿ ಬಲ್ವಿಂದರ್ ಸಿಂಗ್ ಸಂಧು, ಕಪಿಲ್ ದೇವ್ ಬಳಗದ ವಾಟ್ಸ್‌ಆ್ಯಪ್ ಗ್ರೂಪ್‌ನ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ವಿಶ್ವಕಪ್ ಯಶೋಗಾಥೆಯ ಬಗ್ಗೆ ಸಿದ್ಧಗೊಳ್ಳುತ್ತಿರುವ ‘83’ ಸಿನಿಮಾದ ಚಿತ್ರೀಕರಣದಲ್ಲಿ ಚಿತ್ರತಂಡಕ್ಕೆ ಸಹಾಯಕ ನಿರ್ದೇಶಕರಾಗಿ ನೆರವಾಗಿರುವ ಬಲ್ವಿಂದರ್ ಸಿಂಗ್ ಸಂಧು, ಈ ವೇಳೆ ಏನಾದರೂ ಮಾಹಿತಿ ಬೇಕಿದ್ದರೆ ಈ ವಾಟ್ಸ್‌ಆ್ಯಪ್ ಗ್ರೂಪ್‌ನಿಂದಲೇ ಪಡೆದುಕೊಳ್ಳುತ್ತಿದ್ದರಂತೆ. ಏನಾದರೂ ಅನುಮಾನಗಳು ಬಂದರೆ ನಾನು ಗ್ರೂಪ್‌ನಲ್ಲಿ ಅದನ್ನು ಹಾಕುತ್ತಿದ್ದೆ. ತಕ್ಷಣ ಉತ್ತರ ದೊರೆಯುತ್ತಿತ್ತು. ತಂಡದ ಮ್ಯಾನೇಜರ್ ಆಗಿದ್ದ ಆರ್‌ಪಿ ಮಾನ್ ಸಿಂಗ್ ಕೂಡ ಗ್ರೂಪ್‌ನಲ್ಲಿದ್ದು, ಅವರ ಬಳಿ ಎಲ್ಲ ಪ್ರಶ್ನೆಗಳಿಗೂ ಉತ್ತರ ಇರುತ್ತಿತ್ತು ಎಂದು ಸಂಧು ವಿವರಿಸಿದ್ದಾರೆ.

81 ವರ್ಷದ ಮಾನ್ ಸಿಂಗ್ ವಿಶ್ವ ವಿಜೇತ ತಂಡದ ಅತ್ಯಂತ ಹಿರಿಯ ಸದಸ್ಯರಾಗಿದ್ದಾರೆ. ತಂಡದ ಮ್ಯಾನೇಜರ್ ಆಗಿ ಅವರೂ ಯಶಸ್ಸಿನಲ್ಲಿ ಪ್ರಮುಖ ಪಾತ್ರವನ್ನೇ ನಿರ್ವಹಿಸಿದ್ದರು. ಲಾಕ್‌ಡೌನ್ ನಂತರ ಆದಷ್ಟು ಬೇಗನೆ ತಂಡದ ಆಟಗಾರರೊಂದಿಗೆ ಕುಳಿತು ಸಿನಿಮಾ ನೋಡುವ ಆಸೆ ಅವರದಾಗಿದೆ. ಸಿನಿಮಾದಲ್ಲಿ ಅವರ ಪಾತ್ರವನ್ನು ಪಂಕಜ್ ತ್ರಿಪಾಠಿ ನಿರ್ವಹಿಸಿದ್ದಾರೆ.

ಎಲ್ಲವೂ ಅಂದುಕೊಂಡಂತೆ ಸಾಗಿದ್ದರೆ ಕಳೆದ ಏಪ್ರಿಲ್ 10ರಂದು ‘83’ ಸಿನಿಮಾ ಬಿಡುಗಡೆಯನ್ನೂ ಕಾಣಬೇಕಾಗಿರುತ್ತಿತ್ತು. ಆದರೆ ಕರೊನಾ ವೈರಸ್ ಹಾವಳಿ ಶುರುವಾದ ಕಾರಣ ಮಾರ್ಚ್‌ನಲ್ಲಿ ಸಿನಿಮಾದ ಟೀಸರ್ ಕೂಡ ಬಿಡುಗಡೆಯಾಗಿರಲಿಲ್ಲ. ಸಿನಿಮಾದ ಮುಂದಿನ ಬಿಡುಗಡೆ ದಿನಾಂಕ ಸದ್ಯಕ್ಕೆ ಗೌಪ್ಯವಾಗಿಯೇ ಉಳಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net