

Virat Kohli: ಟೀಮ್ ಇಂಡಿಯಾದ ಚೇಸ್ ಮಾಸ್ಟರ್, ದಾಖಲೆಗಳ ಸರದಾರ ಹಾಗೂ ರನ್ ಮೆಷಿನ್ ಎಂದೇ ಖ್ಯಾತಿ ಪಡೆದಿರುವ ವಿರಾಟ್ ಕೊಹ್ಲಿ ನಿನ್ನೆ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದು ಅಭಿಮಾನಿಗಳಿಗೆ ತುಂಬಾ ಬೇಸರವಾಗಿದೆ. ಆದರೂ, ಕೊಹ್ಲಿ ನಿರ್ಧಾರವನ್ನು ಸ್ವಾಗತಿಸಿದ್ದು, ಅವರ ಮುಂದಿನ ಜೀವನ ಚೆನ್ನಾಗಿರಲಿ ಎಂದು ಹಾರೈಸುತ್ತಿದ್ದಾರೆ. ಮಾಜಿ ಕ್ರಿಕೆಟಿಗರು ಕೂಡ ಕೊಹ್ಲಿ ಶುಭ ಕೋರುತ್ತಿದ್ದಾರೆ. ಇದೇ ಸಂದರ್ಭದಲ್ಲಿ, ಕೊಹ್ಲಿ ಯುವ ಕ್ರಿಕೆಟಿಗರಿಗೆ ಸ್ಫೂರ್ತಿ ಎಂದು ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಕೊಂಡಾಗಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಮನ ಮುಟ್ಟುವ ಘಟನೆಯ ಬಗ್ಗೆ ಬರೆದುಕೊಂಡಿರುವ ಸಚಿನ್, ಕೊಹ್ಲಿ ನಿವೃತ್ತಿ ಘೋಷಿಸಿದ್ದರಿಂದ ಆ ಘಟನೆಯನ್ನು ನಾನು ನೆನಪಿಸಿಕೊಂಡೆ. 12 ವರ್ಷಗಳ ಹಿಂದೆ, ನಾನು ವೃತ್ತಿಜೀವನದ ಕೊನೆಯ ಟೆಸ್ಟ್ ಆಡುತ್ತಿದ್ದಾಗ, ಕೊಹ್ಲಿ ನನ್ನ ಬಳಿ ಬಂದು ಒಂದು ದಾರವನ್ನು ಕೊಡಲು ಪ್ರಯತ್ನಿಸಿದರು. ಅದು ಕೊಹ್ಲಿಗೆ ಅವರ ದಿವಂಗತ ತಂದೆ ನೀಡಿದ ದಾರ. ಆ ದಾರ ಕೊಹ್ಲಿ ಅವರ ವೈಯಕ್ತಿಕ, ಅದಕ್ಕಾಗಿಯೇ ಅದನ್ನು ಸ್ವೀಕರಿಸಲು ನನ್ನಿಂದ ಸಾಧ್ಯವಾಗಲಿಲ್ಲ. ಆದರೆ, ಕೊಹ್ಲಿ ಆ ದಾರವನ್ನು ನೀಡಲು ಬಯಸಿದ್ದು ನನ್ನ ಹೃದಯವನ್ನು ಮುಟ್ಟಿತು ಎಂದು ಸಚಿನ್ ಹೇಳಿದ್ದಾರೆ.
ವಿರಾಟ್, ನಿಮ್ಮ ನಿಜವಾದ ಕ್ರಿಕೆಟ್ ಪರಂಪರೆ ಅಸಂಖ್ಯಾತ ಯುವ ಕ್ರಿಕೆಟಿಗರನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಲಿದೆ. ಕೊಹ್ಲಿ ಅವರ ವೃತ್ತಿಜೀವನ ಅದ್ಭುತ ಎಂದು ಸಚಿನ್ ಹೇಳಿದರು. ಭಾರತೀಯ ಕ್ರಿಕೆಟ್‌ಗೆ ಕೊಹ್ಲಿ ನೀಡಿದ ಅತ್ಯುತ್ತಮ ಸೇವೆಯನ್ನು ಸಚಿನ್ ಶ್ಲಾಘಿಸಿದರು.
ಅಂದಹಾಗೆ, ಸಚಿನ್ ಮಾತ್ರವಲ್ಲದೆ, ಅನೇಕ ಕ್ರಿಕೆಟಿಗರು ಮತ್ತು ಮಾಜಿ ಕ್ರಿಕೆಟಿಗರು ಭಾರತೀಯ ಕ್ರಿಕೆಟ್‌ಗೆ ಕೊಹ್ಲಿ ನೀಡಿದ ಸೇವೆಗಳನ್ನು ಶ್ಲಾಘಿಸುತ್ತಿದ್ದಾರೆ. ಟೀಮ್ ಇಂಡಿಯಾಕ್ಕೆ ಕೊಹ್ಲಿಯಂತಹ ಮತ್ತೊಬ್ಬ ಬ್ಯಾಟ್ಸ್‌ಮನ್ ಅವಶ್ಯಕ ಇದೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ಇಂದು ನಿವೃತ್ತಿ ಘೋಷಣೆ ಮಾಡಿದ ಕೊಹ್ಲಿ, ಇನ್ಸ್ಟಾಗ್ರಾಂನಲ್ಲಿ ಭಾವುಕರಾಗಿ ಬರೆದುಕೊಂಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ನಾನು ಮೊದಲ ಬಾರಿಗೆ ಬ್ಯಾಗಿ ಬ್ಲೂ ಧರಿಸಿ 14 ವರ್ಷಗಳಾಗಿವೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ಸ್ವರೂಪವು ನನ್ನನ್ನು ಕರೆದೊಯ್ಯುವ ಪ್ರಯಾಣವನ್ನು ನಾನು ಎಂದಿಗೂ ಊಹಿಸಿರಲಿಲ್ಲ. ಇದು ನನ್ನನ್ನು ಪರೀಕ್ಷಿಸಿತು, ನನ್ನನ್ನು ರೂಪಿಸಿತು ಮತ್ತು ನಾನು ಜೀವನಪರ್ಯಂತ ನನ್ನೊಂದಿಗೆ ತೆಗೆದುಕೊಂಡು ಹೋಗಬಹುದಾದ ಪಾಠಗಳನ್ನು ಕಲಿಸಿತು.
ಬಿಳಿ ಉಡುಪಿನಲ್ಲಿ ಆಡುವುದೆಂದರೆ ಅದೊಂದು ರೀತಿಯಲ್ಲಿ ಆಳವಾದ ವೈಯಕ್ತಿಕ ಬಂಧವಿದೆ. ಶಾಂತವಾದ ಜಂಜಾಟ, ದೀರ್ಘಾವಧಿ ಹಾಗೂ ಯಾರೂ ನೋಡದ ಆದರೆ ಶಾಶ್ವತವಾಗಿ ನಿಮ್ಮೊಂದಿಗೆ ಉಳಿಯುವ ಸಣ್ಣ ಕ್ಷಣಗಳು ಈ ಸ್ವರೂಪದಲ್ಲಿವೆ. ನಾನು ಈ ಸ್ವರೂಪದಿಂದ ದೂರ ಸರಿಯುವುದು ಸುಲಭವಲ್ಲ ಅನಿಸುತ್ತಿತ್ತು. ಆದರೆ, ಇದು ಸರಿಯಾದ ನಿರ್ಧಾರ ಅನಿಸುತ್ತದೆ. ನಾನು ನನ್ನಲ್ಲಿದ್ದ ಎಲ್ಲವನ್ನೂ ಈ ಸ್ವರೂಪಕ್ಕೆ ನೀಡಿದ್ದೇನೆ ಮತ್ತು ನಾನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನದನ್ನು ಟೆಸ್ಟ್ ಕ್ರಿಕೆಟ್ ನನಗೆ ಹಿಂತಿರುಗಿಸಿದೆ. ಈ ಟೆಸ್ಟ್ ಸ್ವರೂಪಕ್ಕಾಗಿ ಹಾಗೂ ನನ್ನೊಂದಿಗೆ ಮೈದಾನ ಹಂಚಿಕೊಂಡ ಜನರಿಗೂ ಮತ್ತು ಈ ಪ್ರಯಾಣದಲ್ಲಿ ನನ್ನೊಂದಿಗೆ ಸಾಗಿದ ಪ್ರತಿಯೊಬ್ಬ ವ್ಯಕ್ತಿಗೂ ನಾನು ಕೃತಜ್ಞತೆ ಸಲ್ಲಿಸುತ್ತಾ ತುಂಬಿದ ಹೃದಯದಿಂದ ಹೊರಡುತ್ತಿದ್ದೇನೆ. ನನ್ನ ಟೆಸ್ಟ್ ವೃತ್ತಿಜೀವನವನ್ನು ನಾನು ಯಾವಾಗಲೂ ನಗುವಿನೊಂದಿಗೆ ನೆನಪಿಸಿಕೊಳ್ಳುತ್ತೇನೆ ಎಂದು ಇನ್ಸ್ಟಾಗ್ರಾಂನಲ್ಲಿ ಬರೆದುಕೊಳ್ಳುವ ಮೂಲಕ ವಿರಾಟ್ ಕೊಹ್ಲಿ ಭಾವುಕ ವಿದಾಯ ಹೇಳಿದ್ದಾರೆ.
ಅಂದಹಾಗೆ, ವಿರಾಟ್ ಕೊಹ್ಲಿ ಅವರು ಟೀಮ್ ಇಂಡಿಯಾ ಪರ 123 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 46.9 ಸರಾಸರಿಯಲ್ಲಿ 9230 ರನ್ ಗಳಿಸಿದ್ದು, ಇದರಲ್ಲಿ 30 ಶತಕಗಳು ಮತ್ತು 31 ಅರ್ಧಶತಕಗಳು ಸೇರಿವೆ. ಅವರ ಗರಿಷ್ಠ ಸ್ಕೋರ್ ಅಜೇಯ 254 ರನ್. (ಏಜೆನ್ಸೀಸ್)