

Virat Kohli: ಟೀಮ್ ಇಂಡಿಯಾದ ದಿಗ್ಗಜ ಸ್ಟಾರ್ ಬ್ಯಾಟರ್, ದಾಖಲೆಗಳ ಸರದಾರ, ರನ್ ಮೆಷಿನ್ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ಇಂದು (ಮೇ 12) ನಿವೃತ್ತಿ ಘೋಷಿಸಿದರು. ಕೊಹ್ಲಿಯ ಈ ಒಂದು ನಿರ್ಧಾರ ಅಸಂಖ್ಯಾತ ಅಭಿಮಾನಿಗಳಿಗೆ ಅಚ್ಚರಿ ಮಾತ್ರವಲ್ಲದೇ ನೋವಿನ ಸಂಗತಿಯೂ ಆಗಿದೆ. ಐಪಿಎಲ್ 18ನೇ ಆವೃತ್ತಿಯ ಮಧ್ಯೆಯೇ ರೋಹಿತ್ ಶರ್ಮ ಟೆಸ್ಟ್ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಇದೀಗ ಕೊಹ್ಲಿ ಕೂಡ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿರುವುದು ದಿಗ್ಗಜ ಕ್ರಿಕೆಟಿಗರ ಯುಗಾಂತ್ಯವಾಗಿದೆ. ಸದ್ಯ ಕೊಹ್ಲಿ ಮತ್ತು ರೋಹಿತ್ ಕೆಲ ಕಾಲ ಏಕದಿನ ಸ್ವರೂಪದಲ್ಲಿ ಮುಂದುವರಿಯಲಿದ್ದಾರೆ.
9000 ರನ್ಗಳು, 30 ಶತಕಗಳ ಅಮೋಘ ದಾಖಲೆ ಹೊಂದಿರುವ ವಿರಾಟ್ ಕ್ರಿಕೆಟ್ ಜಗತ್ತಿನಲ್ಲಿ 'ಕಿಂಗ್ ಕೊಹ್ಲಿ' ಎಂದೇ ಗುರುತಿಸಿಕೊಂಡಿದ್ದಾರೆ. ಮೂರು ಫಾರ್ಮೆಟ್ನ ಕ್ರಿಕೆಟ್ನಲ್ಲಿ ಹಲವು ದಾಖಲೆಗಳು ತಮ್ಮ ಹೆಸರಿಗೆ ಸೇರಿಸಿಕೊಂಡಿರುವ ವಿರಾಟ್ ಕೊಹ್ಲಿಗೆ ದೇಶವ್ಯಾಪಿ ಮೆಚ್ಚುಗೆ, ಪ್ರಶಂಸೆಗಳು ವ್ಯಕ್ತವಾಗಿವೆ. ಕ್ರಿಕೆಟ್ ದಂತಕಥೆಯಾಗಿ ಉಳಿದಿರುವ ಕೊಹ್ಲಿ, ಪ್ರಸ್ತುತ ಐಪಿಎಲ್ 18ನೇ ಆವೃತ್ತಿಯಲ್ಲಿ ಆರ್ಸಿಬಿ ಪರ ಮಿಂಚುತ್ತಿದ್ದಾರೆ. ದಿಗ್ಗಜ ಕ್ರಿಕೆಟಿಗನ ನಿವೃತ್ತಿ ಕುರಿತು ಕ್ರಿಕೆಟ್ ಜಗತ್ತು ಮಾತ್ರವಲ್ಲದೇ ಚಿತ್ರೋದ್ಯಮ, ರಾಜಕೀಯ ಸೇರಿದಂತೆ ಗಣ್ಯರು ಕೊಹ್ಲಿ ಸಾಧನೆಯನ್ನು ಸ್ಮರಿಸಿ, ಗುಣಗಾನ ಮಾಡಿದ್ದಾರೆ.
"ಭಾರತೀಯ ಟೆಸ್ಟ್ ಕ್ರಿಕೆಟ್ನಲ್ಲಿ ಕೊಹ್ಲಿ ಪ್ರಾಮುಖ್ಯತೆ ಬಹಳಷ್ಟಿದೆ" ಎಂದ ಟೀಮ್ ಇಂಡಿಯಾದ ಮಾಜಿ ಹಿರಿಯ ಆಟಗಾರ ಮತ್ತು ಹೆಡ್ ಕೋಚ್ ಲಾಲ್ ಚಂದ್ ರಜಪುತ್, "ಅತ್ಯದ್ಭುತ ಕ್ರಿಕೆಟಿಗರಲ್ಲಿ ವಿರಾಟ್ ಕೂಡ ಒಬ್ಬರು. ಚೇಸಿಂಗ್ನಲ್ಲಿ ಅವರು ಗೆದ್ದಿರುವ ಪಂದ್ಯಗಳು ಅಮೋಘ. ಎರಡು ಫಾರ್ಮೆಟ್ನಲ್ಲಿ 75ಕ್ಕೂ ಹೆಚ್ಚು ಶತಕಗಳನ್ನು ದಾಖಲಿಸಿದ್ದಾರೆ. ಒಟ್ಟಾರೆ ಅವರ ರೆಕಾರ್ಡ್ಗಳನ್ನು ನೋಡಿದಾಗ ಸಚಿನ್ ತೆಂಡೂಲ್ಕರ್ ಬಿಟ್ಟು ಇನ್ಯಾರೂ ಕೊಹ್ಲಿ ದಾಖಲೆಯನ್ನು ಸರಿಗಟ್ಟಲು ಸಾಧ್ಯವಿಲ್ಲ" ಎಂದಿದ್ದಾರೆ,(ಏಜೆನ್ಸೀಸ್).