ಪತಿಗಾಗಿ ಸುಂದರ ಯುವತಿಯನ್ನು ಹುಡುಕ್ತಿರೋ ಪತ್ನಿ! ಜಾಹೀರಾತು ನೋಡಿ ಹೊಟ್ಟೆ ಉರಿದುಕೊಂಡ ಪುರುಷರು!

add
Published on

ಬ್ಯಾಂಕಾಕ್: ಪತಿ ಇನ್ನೊಬ್ಬ ಹೆಣ್ಣಿನತ್ತ ಅದರಲ್ಲಿಯೂ ಸುಂದರವಾಗಿರೋ ಹೆಣ್ಣಿನತ್ತ ದೃಷ್ಟಿ ಹಾಯಿಸಿದರೆ ಸಾಕು, ಎಷ್ಟೋ ಪತ್ನಿಯರಿಗೆ ತಳಮಳ ಶುರುವಾಗುತ್ತದೆ. ಗಂಡನ ಬಗ್ಗೆ ಗುಮಾನಿಯೂ ಶುರುವಾಗುತ್ತದೆ. ಇದೇ ಕಾರಣಕ್ಕೆ ದಂಪತಿ ನಡುವೆ ಜಗಳ, ಮನಸ್ತಾಪಗಳೂ ಆಗುತ್ತವೆ. ಆದರೆ ಇಲ್ಲೊಬ್ಬ ಪತ್ನಿ ಮಾತ್ರ ಸಂಪೂರ್ಣ ಭಿನ್ನಳಾಗಿದ್ದಾಳೆ. ಪತಿಗಾಗಿ ಸುಂದರ ಯುವತಿಯನ್ನು ಹುಡುಕುತ್ತಿದ್ದಾಳೆ!

ಕೇಳಲು ಸ್ವಲ್ಪ ವಿಚಿತ್ರ ಎನಿಸಿದರೂ ಇದು ನಿಜ. ಬ್ಯಾಂಕಾಕ್‌ನ 44 ವರ್ಷದ ಪತ್ತೀಮಾ ಚಮ್ನಾನ್ ಎಂಬಾಕೆ ಪತಿಗಾಗಿ ಜಾಹೀರಾತು ನೀಡಿದ್ದಾಳೆ. ಆತನಿಗೆ ಸುಂದರ ಯುವತಿ ಬೇಕು ಎಂದು ಹೇಳಿದ್ದಾಳೆ.

ಅಷ್ಟಕ್ಕೂ ಆಗಿರುವುದು ಏನೆಂದರೆ, ಈಕೆ ಕೆಲಸಕ್ಕೆ ಹೋಗುತ್ತಿದ್ದಾಳೆ. ಅದಕ್ಕಾಗಿ ತನ್ನ ಪತಿಗೆ ಹೆಚ್ಚು ಸಮಯ ಕೊಡಲು ಸಾಧ್ಯವಾಗುತ್ತಿಲ್ಲ ಎನ್ನುವುದು ಪತ್ತೀಮಾ ನೋವು. ಆತನ ಜತೆ ಎಷ್ಟೋ ವೇಳೆ ಮಲಗಲು ಕೂಡ ಆಗುತ್ತಿಲ್ಲ, ಅಷ್ಟು ಕೆಲಸದ ಒತ್ತಡ ಇದೆ ಎಂದಿರುವ ಫಾತೀಮಾ, ತನ್ನಿಂದಾಗಿ ತನ್ನ ಗಂಡ ಒಂಟಿತನ ಅನುಭವಿಸುತ್ತಿರುವುದನ್ನು ನೋಡಲು ಆಗದೇ ಈ ರೀತಿ ಜಾಹೀರಾತು ಕೊಟ್ಟಿದ್ದಾಳಂತೆ.

ನಾನು ನನ್ನ ಪತಿಯನ್ನು ಸಂತೋಷವಾಗಿಡಲು ಬಯಸುತ್ತಿದ್ದೇನೆ. ಆದ್ದರಿಂದ ಒಂಟಿಯಾಗಿರುವ, ನೋಡಲು ಸುಂದರವಾಗಿರುವ 30-35 ವರ್ಷ ವಯಸ್ಸಿನ ಒಳಗಿರುವ ಮೂವರು ಸ್ತ್ರೀಯರು ಬೇಕಾಗಿದ್ದಾರೆ. ಅವರು ವಿದ್ಯಾವಂತರಾಗಿರಬೇಕು. ಈ ಮೂವರಲ್ಲಿ ಇಬ್ಬರು ನನ್ನ ಕಚೇರಿಯಲ್ಲಿ ದಾಖಲೆಗಳ ಸಿದ್ಧತೆಗಾಗಿ ಮತ್ತು ಮಗುವನ್ನು ನೋಡಿಕೊಳ್ಳಲು ಹಾಗೂ ಇನ್ನೊಬ್ಬಳು ನನ್ನ ಪತಿಯನ್ನು ನೋಡಿಕೊಳ್ಳಲು ಎಂದು ಹೇಳಿದ್ದಾಳೆ. ವಿದ್ಯಾವಂತರು ತನ್ನ ಕಚೇರಿಯ ದಾಖಲೆ ನೋಡಿಕೊಳ್ಳಲು ಹಾಗೂ ಸುಂದರಿಯಾಗಿರುವವಳು ಗಂಡನ ಯೋಗಕ್ಷೇಮ ನೋಡಿಕೊಳ್ಳಲು ಎಂದು ಈಕೆ ಹೇಳಿದ್ದಾಳೆ.

ಇವರಿಗೆ £342 (ಸುಮಾರು 32,805 ರೂಪಾಯಿ) ವೇತನದ ಜತೆಗೆ ಉಚಿತವಾದ ಊಟ, ವಸತಿ ಇರುವುದಾಗಿ ಹೇಳಿದ್ದಾಳೆ. ಜತೆಗೆ ನಾನು ಪತ್ನಿ ಮನೆಯಲ್ಲಿ ಇರುವಾಗ ಬೇರೊಬ್ಬ ಹೆಣ್ಣು ಬಂದರೆ ಜಗಳ ಮಾಡುತ್ತೇನೆ ಎಂದು ತಿಳಿದುಕೊಳ್ಳಬೇಡಿ. ಯಾವುದೇ ಕಾರಣಕ್ಕೂ ನಮ್ಮ ನಡುವೆ ಜಗಳವಾಗುವುದಿಲ್ಲ ಎನ್ನುವ ಭರವಸೆ ನೀಡುತ್ತೇನೆ. ನನ್ನ ಪತಿ ಏಕಾಂಗಿಯಾಗಿ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ನಾನು ಅವನನ್ನು ಸಂತೋಷವಾಗಿಡಲು ಬಯಸುವ ಕಾರಣ ಹೀಗೆ ಮಾಡುತ್ತಿದ್ದೇನೆ ಎಂದಿರುವ ಫಾತೀಮಾ, ಕೆಲಸಕ್ಕೆ ಬರುವವರು ಮಕ್ಕಳನ್ನು ಹೊಂದಿರಬಾರದು, ಉತ್ತಮ ಸಂವಹನ ಕೌಶಲ ಇರಬೇಕು. ನನ್ನ ಪತಿಯನ್ನು ಮೆಚ್ಚಿಸಲು, ಅವನನ್ನು ಸಂತೋಷಪಡಿಸಲು ಹಾಗೂ ಒಡನಾಟದಲ್ಲಿ ಸಮರ್ಥರಾಗಿರುವಂತಹವರು, ಅವರಿಗೆ ಎಚ್​ಐವಿ ಪಾಸಿಟಿವ್​ ಇಲ್ಲ ಎಂಬ ದಾಖಲೆ ತರಬೇಕು ಎಂಬ ಷರತ್ತು ವಿಧಿಸಿದ್ದಾರೆ.

ಇದಕ್ಕಾಗಿ ಹಲವಾರು ಮಂದಿ ಅರ್ಜಿ ಸಲ್ಲಿಸುತ್ತಿದ್ದಾರೆ ಎಂದು ವರದಿಯಾಗಿದೆ. ಇದು ಸುದ್ದಿಯಾಗುತ್ತಲೇ ಹಲವು ಗಂಡಂದಿರು ತಮಗೂ ಇಂಥ ಪತ್ನಿ ಸಿಗಬಾರದೇ ಎಂದು ಹೊಟ್ಟೆ ಉರಿಸಿಕೊಳ್ಳುತ್ತಿರುವುದಾಗಿ ಸ್ಥಳೀಯ ಮಾಧ್ಯಮ ಪ್ರಕಟಿಸಿದೆ (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net