More

    ವೈಜಯಂತಿ ಮಾಲಾ@86: ಮೊದಲ ಬಾರಿಗೆ ಬಿಕಿನಿ ಧರಿಸಿ ಸಿನಿ ಜಗತ್ತಲ್ಲಿ ಹಂಗಾಮಾ ಸೃಷ್ಟಿಸಿದ್ದ ನಟಿ ಬಿಚ್ಚಿಟ್ಟ ಅನುಭವದ ಬುತ್ತಿ…

    ಮುಂಬೈ: 50-60ನೇ ದಶಕದಲ್ಲಿ ಸಿನಿ ಜಗತ್ತನ್ನು ಆಳಿದ ನಟಿಯರಲ್ಲಿ ಒಬ್ಬರು ವೈಜಯಂತಿ ಮಾಲಾ. ವೈಜಯಂತಿ ಮಾಲಾ ಭಾರತೀಯ ಚಿತ್ರರಂಗ ಕಂಡ ಅದ್ಭುತ ನಟಿ. 50-60ರ ದಶಕದಲ್ಲಿ ಚಿತ್ರರಂಗವನ್ನಾಳಿದ ವೈಜಯಂತಿ ಮಾಲಾ ಭಾರತೀಯ ಚಿತ್ರರಂಗದ ಮೊದಲ ಲೇಡಿ ಸೂಪರ್ ಸ್ಟಾರ್ ಅಂತಲೇ ಫೇಮಸ್. ನಟಿಯಾಗಿ, ನೃತ್ಯಗಾತಿಯಾಗಿ ಈಕೆ ನಟಿಸಿದ ಸೂಪರ್​ಹಿಟ್​ ಚಿತ್ರಗಳು ಅದೆಷ್ಟೋ. ಅಂದಿನ ಕಾಲದಲ್ಲಿ ನಟನಾ ವೃತ್ತಿಯಲ್ಲಿ ಹೆಣ್ಣುಮಕ್ಕಳು ತೊಡಗಿಸಿಕೊಳ್ಳುವುದು ಎಂದರೇನೇ ಏನೋ ಅಸಹ್ಯ ಪಡುವಂಥ ಮನೋಭಾವವಿತ್ತು. ಜನರು ಅಂಥವರನ್ನು ಕಡೆಗಣ್ಣಿನಿಂದಲೂ ನೋಡುತ್ತಿದ್ದರು. ಸಂಪ್ರದಾಯಸ್ಥ ಕುಟುಂಬದಲ್ಲಿ ಹುಟ್ಟಿದ ಹೆಣ್ಣುಮಕ್ಕಳಿಗಂತೂ ಸಿನಿ ಜಗತ್ತು ದೂರವೇ ಆಗಿತ್ತು.

    ಅಂಥ ಕಾಲದಲ್ಲಿಯೇ ಒಂದರ ಮೇಲೊಂದು ಸೂಪರ್​ಹಿಟ್​ ಚಿತ್ರ ನೀಡುತ್ತಾ, ಅಮೋಘ ನಟನೆಯಿಂದ ಅಸಂಖ್ಯ ಅಭಿಮಾನಿಗಳನ್ನು ಗಳಿಸಿದವರು ವೈಜಯಂತಿ ಮಾಲಾ. ಅಂದಿನ ಕಾಲದ ಬಾಲಿವುಡ್​ನ ಘಟಾನುಘಟಿ ನಟರಾದ ರಾಜ್ ಕಪೂರ್, ದಿಲೀಪ್ ಕುಮಾರ್, ಕಿಶೋರ್ ಕುಮಾರ್ ಜತೆ ಅಭಿನಯಿಸಿ ಸೈ ಎನಿಸಿಕೊಂಡ ನಟಿ. ಇವರೀಗ 86ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಆಗಸ್ಟ್​ 13ರಂದು ತಮ್ಮ 86ನೇ ಹುಟ್ಟುಹಬ್ಬದ ದಿನ ಅವರೊಂದು ಅಪರೂಪದ ಅನುಭವದ ಬುತ್ತಿಯನ್ನು ಬಿಚ್ಚಿಟ್ಟಿದ್ದಾರೆ.

    15ನೇ ವಯಸ್ಸಿನಲ್ಲಿಯೆ ಶಾಲೆಗೆ ಹೋಗುತ್ತಿರುವಾಗಲೇ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ವೈಜಯಂತಿ ಮಾಲಾ, ಕುಟುಂಬದ ಸ್ನೇಹಿತರಾಗಿದ್ದ ಎಂ.ವಿ.ರಾಮನ್ ಸಹಕಾರದ ಮೇರೆಗೆ 1949ರಲ್ಲಿ ಮೊದಲ ತಮಿಳು ಚಿತ್ರದಲ್ಲಿ ಅಭಿನಯಿಸಿದ್ದರು. ‘ವಾಳ್ಕೈ’ ಚಿತ್ರದ ಮೂಲಕ ಮೊದಲ ಬಾರಿಗೆ ಕ್ಯಾಮರಾ ಫೇಸ್ ಮಾಡಿವರು. ಮೊದಲ ಚಿತ್ರ ಸೂಪರ್ ಡ್ಯೂಪರ್ ಹಿಟ್ ಆಗುತ್ತಲೇ ತೆಲುಗು ಚಿತ್ರರಂಗದಿಂದ ಬುಲಾವ್​ ಬಂದಿತು. ಜೀವಿತಂ ಸಿನಿಮಾದ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ನಂತರ ಬಾಲಿವುಡ್ ಚಿತ್ರರಂಗಕ್ಕೆ ಕರೆ ಬಂತು. 60-65ರ ದಶಕದಲ್ಲಿ ಬಾಲಿವುಡ್ ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಎನ್ನುವ ಖ್ಯಾತಿಗಳಿಸಿದ್ದರು.

    ಬಾಲಿವುಡ್​ನಲ್ಲಿ ಇವರು ಸಿಕ್ಕಾಪಟ್ಟೆ ಖ್ಯಾತಿ ಗಳಿಸಲು ಕಾರಣವಾಗಿದ್ದು, ರಾಜ್​ಕಪೂರ್​ ನಟನೆಯ ಸಂಗಮ್​ ಚಿತ್ರ. 1964ರಲ್ಲಿ ಬಿಡುಗಡೆಗೊಂಡ ಈ ಚಿತ್ರದಲ್ಲಿ ಸ್ವಿಮ್ಮಿಂಗ್ ಡ್ರೆಸ್​ ಧರಿಸುವ ಮೂಲಕ ಇಡೀ ಚಿತ್ರರಂಗದಲ್ಲಿಯೇ ಹಂಗಾಮಾ ಸೃಷ್ಟಿಸಿದ್ದ ನಟಿ ಈಕೆ. ಈಗಿನ ಹೆಚ್ಚಿನ ಚಿತ್ರತಾರೆಯರು ಸಾಧ್ಯವಾದಷ್ಟು ಕಡಿಮೆ ಬಟ್ಟೆ ಧರಿಸಲು ಹಾತೊರೆಯುತ್ತಿದ್ದರೆ, ಅಂದು ಹಾಗಿರಲಿಲ್ಲ. ಅಂಥ ಡ್ರೆಸ್​ ಅನಿವಾರ್ಯವಾಗಿದ್ದರೆ ಒಳಗಡೆ ಮೈ ಬಣ್ಣದ ಮತ್ತೊಂದು ಡ್ರೆಸ್​ ಧರಿಸಿ ಅದರ ಮೇಲಿನಿಂದ ಮತ್ತೊಂದು ಬಟ್ಟೆ ಹಾಕಿಕೊಳ್ಳುತ್ತಿದ್ದರು. ಆದರೆ ಆಗಲೇ ಬಿಕಿನಿ ಧರಿಸಿದ್ದ ವೈಜಯಂತಿ ಮಾಲಾ ಹೀಗೆ ಸಿನಿರಂಗದಲ್ಲಿ ಬಿಕಿನಿ ಧರಿಸಿದ ದಕ್ಷಿಣ ಭಾರತದ ಮೊಟ್ಟಮೊದಲ ನಟಿ ಎನಿಸಿಕೊಂಡಿದ್ದಾರೆ.

    ಆ ದಿನಗಳನ್ನು ಈಗ ತಮ್ಮ ಹುಟ್ಟುಹಬ್ಬದಂದು ನೆನಪಿಸಿಕೊಂಡಿರುವ ವೈಜಯಂತಿ ಮಾಲಾ, ಈ ಡ್ರೆಸ್​ ಧರಿಸಲು ರಾಜ್​ಕಪೂರ್​ ಅವರು ತಮ್ಮ ಅಜ್ಜಿಯ ಬಳಿ ಬಂದು ಹೇಗೆಲ್ಲಾ ಮನವಿ ಮಾಡಿಕೊಂಡರು ಎಂಬುದನ್ನು ಹೇಳಿದ್ದಾರೆ. ಅವರು ಹೇಳಿದ್ದು ಹೀಗೆ:

    “ರಾಜ್​ ಕಪೂರ್​ ಅದ್ಭುತ ನಟ ಎನ್ನುವುದರಲ್ಲಿ ಎರಡು ಮಾತಿಲ್ಲ. ಸಂಗಮ್​ ಚಿತ್ರದಲ್ಲಿ ಸ್ವಿಮ್ಮಿಂಗ್​ ಸೂಟ್​ ಧರಿಸುವ ಸೀನ್​ ಇತ್ತು. ಆದರೆ ನಮ್ಮ ಮನೆಯಲ್ಲಿ ಅದಕ್ಕೆ ಅವಕಾಶವೇ ಇರಲಿಲ್ಲ. ಆಗ ರಾಜ್​ಕಪೂರ್​ ಅವರು ನನ್ನ ಅಜ್ಜಿಯ ಬಳಿ ಬಂದು, ಅವರ ಕಾಲ ಬುಡದಲ್ಲಿ ಕುಳಿತು ಅವರನ್ನು ಮಾತಿನಲ್ಲಿಯೇ ಮರುಳು ಮಾಡಿ, ಕೊನೆಗೆ ಸ್ವಿಮ್ಮಿಂಗ್​ ಡ್ರೆಸ್​ ಬಗ್ಗೆ ಹೇಳಿದರು. ನನ್ನ ಅಜ್ಜಿಯಂತೂ ಇದಕ್ಕೆ ಸುತರಾಂ ಒಪ್ಪಲಿಲ್ಲ. ಆದರೂ ಪಟ್ಟುಬಿಡದ ರಾಜ್​ ಕಪೂರ್​, ಸ್ವಿಮ್ಮಿಂಗ್​ ಡ್ರೆಸ್​ ಧರಿಸಲು ವೈಜಯಂತಿ ಒಪ್ಪಿದ್ದಾಳೆ. ಅದು ಹೇಗೆ ಎಂದರೆ, ಆಕೆ ಸ್ವಿಮ್ಮಿಂಗ್​ ಡ್ರೆಸ್​ ಧರಿಸಿದ ಬಳಿಕ ಎಲ್ಲಿಯೂ ಅವಳನ್ನು ಸಂಪೂರ್ಣವಾಗಿ ಜನರಿಗೆ ತೋರಿಸುವುದಿಲ್ಲ. ಅದೇನೆ ಇದ್ದರೂ ಆಕೆ ನೀರಿನಲ್ಲಿ ಮುಳುಗಿಯೇ ಇರುತ್ತಾಳೆ, ಆದ್ದರಿಂದ ಅವಳ ದೇಹ ಜನರಿಗೆ ಕಾಣಿಸುವುದಿಲ್ಲ. ಆಕೆ ನೀರಿನಿಂದ ಹೊರಬರುವ ದೃಶ್ಯಗಳನ್ನೆಲ್ಲಾ ಡುಪ್ಲಿಕೇಟ್​ ನಟಿಯನ್ನು ಬಳಸಿ ಚಿತ್ರೀಕರಣ ಮಾಡಲಾಗುವುದು ಎಂದರು. ಅಂತೂ ತುಂಬಾ ಹೇಳಿದ ಮೇಲೆ ಹೀಗೆಯೇ ಮಾಡಬೇಕು ಎಂದು ಷರತ್ತು ವಿಧಿಸಿದ ನನ್ನ ಅಜ್ಜಿ ಒಪ್ಪಿಕೊಂಡರು. ನಂತರ ಚಿತ್ರೀಕರಣವೂ ಹಾಗೆಯೇ ನಡೆಯಿತು” ಎಂದು ಸ್ಮರಿಸಿಕೊಂಡರು ನಟಿ.

    ಅಂದಹಾಗೆ, ವೈಜಯಂತಿ ಮಾಲಾ ಮತ್ತು ರಾಜ್ ಕಪೂರ್ ಹೆಸರು ಜೋರಾಗಿ ಸದ್ದು ಮಾಡುತ್ತಿದ್ದ ಸಮಯದಲ್ಲಿ ವೈಜಯಂತಿ, ರಾಜ್ ಕಪೂರ್ ಕುಟುಂಬದ ವೈದ್ಯ ಚಮನ್ ಲಾಲ್ ಬಾಲಿ ಜೊತೆ ಪ್ರೀತಿಯಲ್ಲಿ ಬೀಳುತ್ತಾರೆ. ಶೂಟಿಂಗ್ ಸಮಯದಲ್ಲಿ ವೈಜಯಂತಿ ಆಕಸ್ಮಿಕವಾಗಿ ಜಾರಿ ಬಿದ್ದು ಪೆಟ್ಟು ಮಾಡಿಕೊಂಡಿದ್ದ ಸಮಯದಲ್ಲಿ ಚಿಕಿತ್ಸೆ ನೀಡಿದ್ದ ವೈದ್ಯ ಚಮನ್ ಲಾಲ್ ಬಾಲಿ ಅವರನ್ನೇ ಪ್ರೀತಿಸಲು ಪ್ರಾರಂಭಿಸುತ್ತಾರೆ. 1968ರಲ್ಲಿ ಇವರ ಮದುವೆಯಾಗುತ್ತದೆ, ಚಮನ್ ಲಾಲ್ ಅವರು 1986ರಲ್ಲಿ ನಿಧನರಾದರು. (ಏಜೆನ್ಸೀಸ್​)

    PHOTOS: ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ನಟಿ ತಾರಾ ವಿಶೇಷ ಫೋಟೋ ಶೂಟ್‌

    ಪ್ರೀತಿಸಿದ ಮಹಿಳೆ ಜತೆ ಸೋಲೂರಿನ ಗದ್ದುಗೆ ಮಠದ ಸ್ವಾಮೀಜಿ ಎಸ್ಕೇಪ್​? ಪತ್ರದಲ್ಲಿದೆ ನೋವಿನ ನುಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts