VIDEO: ಪಿಸ್ತೂಲ್​ ಹಿಡಿದು ಬಂದ ಕಳ್ಳನನ್ನು ಕ್ಲೀನ್​ ಮಾಡೋ ಬಟ್ಟೆಯಿಂದ್ಲೇ ಓಡಿಸಿದಳು! ಇಲ್ಲಿದೆ ನೋಡಿ ಅಚ್ಚರಿಯ ವಿಡಿಯೋ

bakery
Published on

ಡೆವೆಂಟರ್‌ (ನೆದರ್ಲೆಂಡ್​): ಕೈಯಲ್ಲಿ ಶಸ್ತ್ರಾಸ್ತ್ರ ಇದ್ದರೂ ಕಳ್ಳರು ಬಂದಾಗ ಎಂಥವರೂ ನಡುಗಿ ಹೋಗುವುದು ಸಹಜ. ಆದರೆ ಇಲ್ಲೊಬ್ಬ ಮಹಿಳೆ ಅಂಗಡಿ ಕ್ಲೀನ್​ ಮಾಡುವ ಬಟ್ಟೆಯಿಂದಲೇ ಪಿಸ್ತೂಲುಧಾರಿ ಕಳ್ಳನನ್ನು ಹಿಮ್ಮೆಟ್ಟಿಸಿದ್ದಾಳೆ! ಅದರ ವಿಡಿಯೋ ಭಾರಿ ವೈರಲ್​ ಆಗಿದ್ದು, ಮಹಿಳೆಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

ನೆದರ್ಲೆಂಡ್​ನ ಡೆವೆಂಟರ್‌ನ ಮೆವ್ಲಾನಾ ಎಂಬ ಬೇಕರಿಯಲ್ಲಿ ಈ ಘಟನೆ ನಡೆದಿದೆ. ಬೇಕರಿ ಓಪನ್​ ಮಾಡಿದ ಅಲ್ಲಿನ ನೌಕರಸ್ಥ ಮಹಿಳೆ ಮೊದಲಿಗೆ ಬಟ್ಟೆಯೊಂದರಿಂದ ಬೇಕರಿ ತಿನಿಸು ಇಟ್ಟಿರುವ ಗಾಜಿನ ಬಾಕ್ಸ್​ಗಳನ್ನು ಕ್ಲೀನ್​ ಮಾಡುತ್ತಿದ್ದಳು. ಆ ಸಂದರ್ಭದಲ್ಲಿ ಕಪ್ಪು ಬಣ್ಣದ ಮುಖವಾಡ ಧರಿಸಿ, ಕೈಯಲ್ಲಿ ಪಿಸ್ತೂಲ್​ ಹಿಡಿದು ಏಕಾಏಕಿ ಖದೀಮ ಅಂಗಡಿಗೆ ನುಗ್ಗಿದ್ದಾನೆ.

ಏಕಾಏಕಿ ಮಹಿಳೆಯ ಪಕ್ಕಕ್ಕೆ ಬಂದು ಅಲ್ಲಿರುವ ಲಾಕರ್‌ನಲ್ಲಿ ಹಣ ಕದಿಯಲು ಯತ್ನಿಸಿದ್ದಾನೆ. ಅವನ ಕೈಯಲ್ಲಿ ಪಿಸ್ತೂಲ್​ ಇದ್ದುದನ್ನು ಗಮನಿಸಿದರೂ ಹೆದರಿಕೊಳ್ಳದ ಮಹಿಳೆ ಕ್ಲೀನ್ ಮಾಡುತ್ತಿದ್ದ ಬಟ್ಟೆಯಿಂದಲೇ ಮೊದಲಿಗೆ ಆತನನ್ನು ಥಳಿಸಿದ್ದಾಳೆ. ನಂತರ ಕಳ್ಳನಿಗೆ ಹಿಗ್ಗಾಮುಗ್ಗಾ ಹೊಡೆದಿದ್ದಾಳೆ. ಅವನ ಕೈಯಿಂದ ಪಿಸ್ತೂಲ್​ ಕೆಳಕ್ಕೆ ಬಿದ್ದಿದೆ. ನಂತರ ಹೊರಗಡೆ ಇದ್ದ ವ್ಯಕ್ತಿಯೊಬ್ಬ ಗಲಾಟೆ ಕೇಳಿ ಒಳಗೆ ಬಂದಿದ್ದಾನೆ. ಆ ವೇಳೆ ಕಳ್ಳ ಪರಾರಿಯಾಗಿದ್ದಾನೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಅದರ ವಿಡಿಯೋ ವೈರಲ್​ ಆಗಿದೆ.

ಶುಚಿಗೊಳಿಸುವ ಬಟ್ಟೆಯ ಶಕ್ತಿ ಕಡಿಮೆ ಎಂದು ಅಂದಾಜು ಮಾಡಬೇಡಿ ಎಂದು ಕ್ಯಾಪ್ಷನ್‍ನೊಂದಿಗೆ ತನ್ಸು ಯೆಗೆನ್ ಎನ್ನುವವರು ಈ ವಿಡಿಯೋ ಹಂಚಿಕೊಂಡಿದ್ದಾರೆ. ಮಹಿಳೆಯ ಧೈರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. (ಏಜೆನ್ಸೀಸ್​)

ಇಲ್ಲಿದೆ ನೋಡಿ ವಿಡಿಯೋ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net