

ಮುಂಬೈ: ಕೊನೆ ಕ್ಷಣದವರೆಗೂ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಲೇ ಶಿವಸೇನೆಯ ಬಂಡಾಯ ನಾಯಕ ಏಕನಾಥ್ ಶಿಂಧೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಎರಡು ದಿನಗಳೇ ಕಳೆದಿವೆ. ಇದರ ನಡುವೆಯೇ ನೂತನ ಸ್ಪೀಕರ್ ಆಯ್ಕೆಯ ಕುತೂಹಲಕ್ಕೂ ಇಂದು ತೆರೆ ಬಿದ್ದಿದ್ದು, ಬಿಜೆಪಿ ಶಾಸಕ, 45 ವರ್ಷದ ರಾಹುಲ್ ನಾರ್ವೇಕರ್ ಸ್ಪೀಕರ್ ಆಗಿ ಆಯ್ಕೆಯಾದರು.
288 ಸದಸ್ಯ ಬಲದ ವಿಧಾನಸಭೆಯಲ್ಲಿ 164 ಮತಗಳಿಂದ ನಾರ್ವೇಕರ್ ಆಯ್ಕೆಯಾಗಿದ್ದಾರೆ. ಈ ಮೂಲಕ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಶಿವಸೇನಾ ಶಾಸಕ ಮತ್ತು ಉದ್ಧವ್ ಠಾಕ್ರೆ ಆಪ್ತ ರಾಜನ್ ಸಾಲ್ವಿ ಅವರನ್ನು ಸೋಲಿಸಿದ್ದಾರೆ. ಸಾಲ್ವಿ ಅವರಿಗೆ 106 ಮತಗಳು ಬಂದಿವೆ.
ಇಲ್ಲಿಯವರೆಗೂ ಶಾಸಕ ರಾಹುಲ್ ನಾರ್ವೇಕರ್ ಅವರ ಹೆಸರು ಕೇಳಿದವರೇ ಬಲು ಅಪರೂಪ. ಅಂಥವರನ್ನು ಬಿಜೆಪಿ ಸ್ಪೀಕರ್ ಸ್ಥಾನಕ್ಕೆ ನಿಲ್ಲಿಸಿದಾಗ ಎಲ್ಲರೂ ಅಚ್ಚರಿ ಪಟ್ಟಿದ್ದರು. ಯಾರಿದ್ದರೆ ಯಾರೀ ನಾರ್ವೇಕರ್?
ವೃತ್ತಿಯಲ್ಲಿ ವಕೀಲರಾಗಿರುವ ನಾರ್ವೇಕರ್ ಅವರು ಈ ಹಿಂದೆ ಶಿವಸೇನಾ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದೊಂದಿಗೆ (ಎನ್‌ಸಿಪಿ) ಸಂಬಂಧ ಹೊಂದಿದ್ದರು, 2019ರ ಅಕ್ಟೋಬರ್ನಲ್ಲಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಪೂರ್ವದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಪಕ್ಷವು ಅವರನ್ನು ದಕ್ಷಿಣ ಮುಂಬೈನ ಕೊಲಾಬಾ ಕ್ಷೇತ್ರದಿಂದ ಕಣಕ್ಕಿಳಿಸಿತು, ಇವರನ್ನು ಬಿಜೆಪಿ ಕಣಕ್ಕೆ ಇಳಿಸಿದಾಗಲೇ ಅಚ್ಚರಿ ಪಟ್ಟವರು ಹಲವರು. ಆದರೆ ಈ ಕ್ಷೇತ್ರದಿಂದ ನಾರ್ವೇಕರ್ ಗೆಲುವು ಸಾಧಿಸಿದರು. ಪ್ರಸ್ತುತ ಇವರು ರಾಜ್ಯ ಬಿಜೆಪಿಯ ಮಾಧ್ಯಮ ಉಸ್ತುವಾರಿಯೂ ಆಗಿದ್ದಾರೆ.
ಮಹಾರಾಷ್ಟ್ರ ವಿಧಾನ ಪರಿಷತ್ತಿನ ಅಧ್ಯಕ್ಷರು ಮತ್ತು ಸ್ಪೀಕರ್ ಆಗಿರುವ ಹಿರಿಯ ಕಾಂಗ್ರೆಸ್ ನಾಯಕ ರಾಮರಾಜೆ ನಾಯ್ಕ್-ನಿಂಬಾಳ್ಕರ್ ಅವರ ಅಳಿಯ ಆಗಿರುವ ನಾರ್ವೇಕರ್, ಶಿವಸೇನೆಯೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದವರು. ಉದ್ಧವ್ ಠಾಕ್ರೆ ಅವರ ಪುತ್ರ ಆದಿತ್ಯ ನೇತೃತ್ವದ ಯುವ ಘಟಕವಾದ ಯುವಸೇನೆಯ ವಕ್ತಾರರಾಗಿದ್ದರು. 2014ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಶಿವಸೇನೆಯನ್ನು ತೊರೆದು ಕಾಂಗ್ರೆಸ್ ಸೇರಿದರು. ಈ ಚುನಾವಣೆಯಲ್ಲಿ ಮಾವಲ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದರು, ಶಿವಸೇನೆಯ ಶ್ರೀರಂಗ್ ಅಪ್ಪಾ ಬಾರ್ನೆ ವಿರುದ್ಧ ಸೋತರು.
ಒಂದು ಕುತೂಹಲದ ಸಂಗತಿಯೆಂದರೆ ನಾರ್ವೇಕರ್ ಅವರು, 2019ರ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಅವಧಿಯಲ್ಲಿ ಕಾಂಗ್ರೆಸ್ ಜತೆ ಗುರುತಿಸಿಕೊಂಡಿದ್ದರು. ಆದರೆ ನಾಮಪತ್ರ ಸಲ್ಲಿಸಲು ಇನ್ನೇನು ಒಂದು ಗಂಟೆ ಇದೆ ಎನ್ನುವಾಗಲೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡರು. ನಂತರ ಬಿಜೆಪಿಯಿಂದ ಚುನಾವಣಾ ಕಣಕ್ಕಿಳಿದರು. ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಜಗತಾಪ್ ಅವರನ್ನು ಸೋಲಿಸಿ, ಬಿಜೆಪಿ ಶಾಸಕರಾದರು!
ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ನಾರ್ವೇಕರ್ ಅವರ ಪರಿಣತಿಯು ರಾಜ್ಯ ವಿಧಾನಸಭೆಯನ್ನು ನಡೆಸಲು ಸಹಾಯ ಮಾಡುತ್ತದೆ. ನಾರ್ವೇಕರ್ ಅವರು ಮೊದಲ ಬಾರಿಗೆ ಶಾಸಕರಾಗಿದ್ದರೂ ಸಹ, ಅವರು ವಿವಿಧ ಪಕ್ಷಗಳೊಂದಿಗೆ ದೀರ್ಘಕಾಲ ಕೆಲಸ ಮಾಡಿದ್ದರಿಂದ ಅನುಭವಿ ನಾಯಕರಾಗಿದ್ದಾರೆ ಎಂದು ಇವರನ್ನು ಸ್ಪೀಕರ್ ಸ್ಥಾನಕ್ಕೆ ಇಳಿಸಿರುವುದರ ಕುರಿತು ಪಕ್ಷದ ಮೂಲಗಳು ಸಮರ್ಥಿಸಿಕೊಂಡಿವೆ.