

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತನ ಮೇಲೆ ಗುಂಡಿನ ದಾಳಿ ನಡೆದಿದ್ದು, ಅವರು ಮೃತಪಟ್ಟಿದ್ದಾರೆ.
ಪಾಸ್ಚಿಮ್ ಬರ್ಧಮನ್ ಜಿಲ್ಲೆಯ ಅಂಡಾಲ್ನಲ್ಲಿ ಈ ಘಟನೆ ನಡದಿದೆ. ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಮತ್ತಿಬ್ಬರು ಗಾಯಗೊಂಡಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ನಿನ್ನೆ ಬುಧವಾರ ರಾತ್ರಿ ಸುಮಾರು 11 ಗಂಟೆಯ ವೇಳೆ ಇಬ್ಬರು ಅಪರಿಚಿತರು ಧರ್ಮವೀರ್ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಧರ್ಮವೀರ್ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಸಂದರ್ಭದಲ್ಲಿ ಧರ್ಮವೀರ್ ಜತೆಗೆ ಇಬ್ಬರು ಇದ್ದು ಅವರಿಗೆ ತೀವ್ರವಾಗಿ ಗಾಯಗಳಾಗಿವೆ.
ಘಟನೆ ಹಿಂದೆ ರಾಜಕೀಯ ಕೈವಾಡವಿದೆ ಎಂಬುದನ್ನು ಸ್ಥಳೀಯ ಟಿಎಂಸಿ ನಾಯಕರು ನಿರಾಕರಿಸಿದ್ದಾರೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಇದು ಆಗಿರಬಹುದು ಎಂದಿದ್ದಾರೆ. ಅದೇ ಇನ್ನೊಂದೆಡೆ, ಕಲ್ಲಿದ್ದಲು ನಿಕ್ಷೇಪ ಹಂಚಿಕೆಯಲ್ಲಿನ ಬಣಗಳ ನಡುವಣ ಭಿನ್ನಾಭಿಪ್ರಾಯದಿಂದಾಗಿ ಈ ಹತ್ಯೆ ನಡೆದಿದೆ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ.
ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.