

ಲಖನೌ: ಪಂಚ ರಾಜ್ಯಗಳ ಚುನಾವಣೆ ಇನ್ನೇನು ಸಮೀಪಿಸುತ್ತಿದೆ. ಅದರಲ್ಲಿಯೂ ಉತ್ತರ ಪ್ರದೇಶ ಎಲ್ಲಾ ಪಕ್ಷಗಳಿಗೂ ಪ್ರತಿಷ್ಠೆಯ ಕ್ಷೇತ್ರವಾಗಿ ಪರಿಣಮಿಸಿದೆ. ಆದ್ದರಿಂದ ಎಲ್ಲಾ ಪಕ್ಷಗಳೂ ತಮ್ಮ ಗೆಲುವಿಗಾಗಿ ರಾತ್ರಿ-ಹಗಲು ಎನ್ನದೇ ಶ್ರಮಿಸುತ್ತಿವೆ. ಇದರ ನಡುವೆಯೇ ಕಾಂಗ್ರೆಸ್ ಪಕ್ಷವು 30 ವರ್ಷಗಳಲ್ಲಿ ಮೊದಲ ಬಾರಿಗೆ ಉತ್ತರ ಪ್ರದೇಶದ ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದ್ದು ಇತಿಹಾಸ ಸೃಷ್ಟಿಸಲಿದೆ.
ಈ ಕುರಿತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮಾಹಿತಿ ನೀಡಿದ್ದಾರೆ. ನಾವು ನಮ್ಮ ಸಾಮರ್ಥ್ಯದಿಂದ ಹೋರಾಡುತ್ತೇವೆ. ಕಳೆದ 30 ವರ್ಷಗಳಲ್ಲಿ ಮೊದಲ ಸಲ ಎಲ್ಲ ಕ್ಷೇತ್ರಗಳಿಂದ ಕಣಕ್ಕಿಳಿದಿದ್ದೇವೆ ಎಂದು ಪ್ರಿಯಾಂಕಾ ಹೇಳಿದರು. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಸಮ್ಮುಖದಲ್ಲಿ ಗಾಜಿಯಾಬಾದ್ನಲ್ಲಿ ಶುಕ್ರವಾರ ಮನೆ ಮನೆಗೆ ತೆರಳಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಪ್ರಿಯಾಂಕಾ ಗಾಂಧಿ ನಾವು ಈ ಬಾರಿ ಚುನಾವಣೆಯಲ್ಲಿ ನಮ್ಮ ಸರ್ವ ಶಕ್ತಿಯನ್ನೂ ಧಾರೆಯೆರೆಯುತ್ತಿದ್ದೇವೆ. ಹಾಗಾಗಿ ಎಲ್ಲ 403 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕುತ್ತಿದ್ದೇವೆ ಎಂದರು.
ಫೆ.10 ರಂದು ಮೊದಲ ಹಂತದ ಮತದಾನ ನಡೆಯಲಿದೆ. 2, 3, 4, 5, 6 ಹಾಗೂ 7ನೇ ಹಂತದ ಮತದಾನ ಕ್ರಮವಾಗಿ ಫೆ.14, ಫೆ,20, ಫೆ,23, ಫೆ,27, ಮಾ.3 ಮತ್ತು ಮಾ.7 ರಂದು ನಡೆಯಲಿದೆ. ಮಾ.10 ರಂದು ಫಲಿತಾಂಶ ಹೊರಬರಲಿದೆ.