VIDEO: ನಾನು ವಿರೋಧ ಪಕ್ಷದವನಾದ್ರೂ ಈ ವಿಷಯದಲ್ಲಿ ಮೋದಿಯನ್ನು ಹೊಗಳಲೇಬೇಕೆಂದ ಉಡುಪಿಯ ಮಾಜಿ ಸಚಿವ

udupi
Published on

ಉಡುಪಿ: ಕೆಲ ವರ್ಷಗಳಿಂದ ಪದ್ಮ ಪ್ರಶಸ್ತಿ ಪುರಸ್ಕೃತರ ಪಟ್ಟಿ ನೋಡಿದಾಗ ಇಡೀ ದೇಶವೇ ಕೊಂಡಾಡುತ್ತಿರುವುದಂತೂ ಅಕ್ಷರಶಃ ಸತ್ಯ. ಪದ್ಮ ಪ್ರಶಸ್ತಿ ಎಂದರೆ ಅದು ಜನಪ್ರಿಯ ವ್ಯಕ್ತಿಗಳಿಗಷ್ಟೇ ಸಲ್ಲುವ, ಪ್ರಚಾರದಲ್ಲಿರುವವರ ಪ್ರಶಸ್ತಿ ಎಂದೇ ಗುರುತಿಸಲಾಗಿತ್ತು. ಆದರೆ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಅಧಿಕಾರ ವಹಿಸಿಕೊಂಡ ಮೇಲೆ ಈ ಪಟ್ಟಿಯ ಚಿತ್ರಣವೇ ಬದಲಾಗಿದೆ. ಯಾರ ಗೋಜೂ ಇಲ್ಲದೆಯೇ, ಯಾವ ಪ್ರಚಾರವನ್ನೂ ಬಯಸದೆಯೇ ತಮ್ಮ ಪಾಡಿಗೆ ತಾವು ಜನೋಪಕಾರಿ ಕೆಲಸ ಮಾಡುತ್ತಾ ಜೀವನ ಸವೆಸುತ್ತಿದ್ದ ಅದೆಷ್ಟೋ ಎಲೆಮರೆಯ ಕಾಯಿಗಳು ಕನಸಿನಲ್ಲಿಯೂ ಊಹಿಸಿದರ ಪದ್ಮಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿಯನ್ನು ಹುಡುಕಿ ಹೋಗುವವರ ಮಧ್ಯೆಯೇ ಇಂಥ ಸಾಧಕರನ್ನು ಪ್ರಶಸ್ತಿಯೇ ಹುಡುಕಿ ಹೋಗುವಂಥ ಸನ್ನಿವೇಶ ಸೃಷ್ಟಿಯಾಗಿದೆ.

ಇಂಥ ಸಾಧಕರಿಗೆ ಪ್ರಶಸ್ತಿ ಬಂದಿರುವ ಬಗ್ಗೆ ಪಕ್ಷಾತೀತವಾಗಿ ಎಲ್ಲರೂ ಕೊಂಡಾಡಿದರೂ, ಇಷ್ಟು ದಶಕಗಳ ಕಾಲ ಗುರುತೇ ಇಲ್ಲದವರನ್ನು ಈಗ ಕೇಂದ್ರ ಸರ್ಕಾರ ಗುರುತಿಸುತ್ತಿರುವ ವಿಷಯ ಬಂದಾಗ ಮಾತ್ರ ವಿರೋಧ ಪಕ್ಷಗಳು ಸೇರಿದಂತೆ ಕೆಲವರು ಮೌನವಹಿಸುತ್ತಿರುವ ನಡುವೆಯೇ, ಉಡುಪಿಯ ಕಾಂಗ್ರೆಸ್‌ನ ಮಾಜಿ ಕ್ರೀಡಾ ಸಚಿವ, ಪ್ರಮೋದ್ ಮಧ್ವರಾಜ್ ಪ್ರಧಾನಿ ಮೋದಿಯವರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಕೇಂದ್ರ ಸರ್ಕಾರ ದೇಶದ ಅಪರೂಪದ ಸಾಧಕರನ್ನು ತಳಮಟ್ಟದಿಂದ ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಪ್ರಶಂಸನೀಯ ಎಂದಿದ್ದಾರೆ. ನಾನು ವಿರೋಧ ಪಕ್ಷದಲ್ಲಿದ್ದರೂ ಮೋದಿ ಸರ್ಕಾರ ಮಾಡಿದ ಒಳ್ಳೆ ಕೆಲಸಗಳನ್ನು ಹೊಗಳಲೇಬೇಕಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದ ಮೇಲೆ ಪದ್ಮಭೂಷಣ, ಪದ್ಮ ವಿಭೂಷಣ, ಪದ್ಮಶ್ರೀ ಪ್ರಶಸ್ತಿಗಳು ನಿಜವಾದ ಸಾಧಕರನ್ನು ಹುಡುಕಿಕೊಂಡು ಹೋಗುತ್ತಿದೆ. ಈ ಹಿಂದೆ ಅರ್ಜಿ ಹಾಕಿದವರಿಗೆಲ್ಲಾ ಪ್ರಶಸ್ತಿ ಕೊಡುತ್ತಿದ್ದರು, ಮೋದಿ ಸರ್ಕಾರದಲ್ಲಿ ಪ್ರಶಸ್ತಿಯನ್ನು ಹುಡುಕಿಕೊಂಡು ಕೊಡುತ್ತಿದ್ದಾರೆ, ಇಂಥ ಕಾರ್ಯವನ್ನು ಕಾಂಗ್ರೆಸ್‌ ನಾಯಕನಾಗಿ ಕೂಡ ನಾನು ಈ ಸಂದರ್ಭದಲ್ಲಿ ಮೆಚ್ಚಲೇಬೇಕಿದೆ ಎಂದರು.

ಇದರ ವಿಡಿಯೋ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದ್ದು, ನಿಜವಾದ ಕಾರ್ಯವನ್ನು ‍ಪಕ್ಷಾತೀತವಾಗಿ ಗುರುತಿಸಿ, ಮುಕ್ತಕಂಠದಿಂದ ಹೊಗಳಿದ ಕಾಂಗ್ರೆಸ್‌ನ ನಾಯಕನ ಕ್ರಮಕ್ಕೆ ಹಲವರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net