

ಉಡುಪಿ: ಉಡುಪಿಯ ಅತ್ರಾಡಿಯ ಓರ್ವ ಯುವತಿ ನಾಲ್ಕು ಸಂಬಂಧಗಳನ್ನು ಹೊಂದಿ, ನಾಲ್ಕನೆಯವನಿಂದ ಬರ್ಬರವಾಗಿ ಹತ್ಯೆಯಾಗಿರುವ ಪ್ರಕರಣವನ್ನು ಪೊಲೀಸರು 24 ಗಂಟೆಗಳಲ್ಲಿ ಭೇದಿಸಿದ್ದಾರೆ. ಅಮ್ಮನ ಜತೆ ಏನೂ ತಿಳಿಯದ 10 ವರ್ಷದ ಬಾಲಕಿಯೂ ಕೊಲೆಯಾಗಿರುವ ಭೀಕರ ಘಟನೆಯಿದು.
ಚೆಲುವಿ (28) ಮತ್ತು ಪ್ರಿಯಾ (10) ಕೊಲೆಯಾದವರು. ಚೆಲುವಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಹೋಂ ನರ್ಸ್ ಆಗಿ ಈ ಕೊಲೆ ನಿನ್ನೆ (ಮೇ.12) ನಡೆದಿತ್ತು. ಘಟನೆಯಾದ 24 ಗಂಟೆಗಳಲ್ಲಿಯೇ ಆರೋಪಿ ಗಂಡ ಭದ್ರಾವತಿ ನಿವಾಸಿ ಹರೀಶ್ನನ್ನು (29) ಪೊಲೀಸರು ಬಂಧಿಸಿದ್ದಾರೆ.
ಆರಂಭದಲ್ಲಿ ತಾಯಿ ಮಗಳ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸುದ್ದಿಯಾಗಿತ್ತು. ನಂತರ ಚೆಲುವಿ ಬಳಸುತ್ತಿದ್ದ ಮೊಬೈಲು, ಕೆಲವೊಂದು ಫೋಟೋಗಳು, ಮತ್ತು ಸುಮಾರು 50 ಸಾವಿರ ಮೌಲ್ಯದ ಚಿನ್ನಾಭರಣ ಕಳವಾಗಿತ್ತು. ಕಳ್ಳತನದ ಸಲುವಾಗಿ ಕೊಲೆ ಮಾಡಲಾಗಿದೆ ಎಂದು ಬಿಂಬಿಸುವ ಪ್ರಯತ್ನ ಇದಾಗಿತ್ತು. ನಂತರ ಪೊಲೀಸರು ಪ್ರಕರಣ ಭೇದಿಸಿದ್ದು, ಹರೀಶ್ ಎಂಬ ಯುವಕನನ್ನು ಅರೆಸ್ಟ್ ಮಾಡಿದ್ದಾರೆ.
ಇದೇನಿದು ನಾಲ್ಕು ಸಂಬಂಧ?
ಚೆಲುವಿಗೆ ಮೊದಲು ಒಂದು ಮದುವೆಯಾಗಿತ್ತು. ಈ ಮದುವೆಯಿಂದ ಇಬ್ಬರು ಮಕ್ಕಳಿದ್ದಾರೆ. ಗಂಡ ಕುಡಿದು ಚಿತ್ರಹಿಂಸೆ ನೀಡುತ್ತಾನೆ ಎಂದು ಜಗಳವಾಡುತ್ತಿದ್ದ ಚೆಲುವಿ ಇದೇ ಸಮಯದಲ್ಲಿ ಬೇರೆ ಧರ್ಮದ ಬಾರಿನಲ್ಲಿ ಕೆಲಸ ಮಾಡುವವನ ಸ್ನೇಹ ಬೆಳೆಸಿದ್ದಾಳೆ. ಆತನ ಜತೆ ದುಬೈಗೂ ಹೋಗಿ ಎರಡು ವರ್ಷ ಒಟ್ಟಿಗೆ ಇದ್ದಾಳೆ.
ಆದರೆ ಎರಡು ವರ್ಷಗಳ ನಂತರ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ವಾಪಸ್ ಅತ್ರಾಡಿಗೆ ಬಂದು ನರ್ಸ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಾಳೆ. ಅಲ್ಲಿ ಇನ್ನೊಬ್ಬನ ಜತೆ ಸಲುಗೆ ಬೆಳೆದಿತ್ತು ಎನ್ನಲಾಗಿದೆ. ಅಂದರೆ ಈ ಮೂರನೆಯ ವ್ಯಕ್ತಿ ಜತೆ ಚೆಲುವಿ ಸಲುಗೆಯಿಂದ ಇದ್ದಳು ಎನ್ನುವುದು ತಿಳಿದುಬಂದಿದೆ. ಅವರ ಸ್ನೇಹ ಕೂಡ ಏನಾಯಿತೋ ಗೊತ್ತಿಲ್ಲ. ನಂತರ ಸಿಕ್ಕವನೇ ಈ ಕೊಲೆ ಆರೋಪಿ ಹರೀಶ್. ಹರೀಶನ ಜತೆ ಬಹಳ ಸಲುಗೆಯಿಂದ ಇದ್ದಳು ಚೆಲುವಿ.
ಹರೀಶ್ಗೆ ಮದುವೆಯಾಗಿ ಎರಡು ಮಕ್ಕಳನ್ನು ಹೊಂದಿದ್ದ. ಈತ ಚೆಲುವಿಯನ್ನು ಮದುವೆಯಾಗು ಎಂದು ಕಾಡಿಸುತ್ತಿದ್ದ. ಮಾತ್ರವಲ್ಲದೇ ಆಕೆ ಬೇರೆಯವರ ಜತೆಯಲ್ಲಿ ಫೋನ್ನಲ್ಲಿ ಗಂಟೆಗಟ್ಟಲೆ ಮಾತನಾಡುವುದನ್ನು ನೋಡಿ ಜಗಳ ಮಾಡುತ್ತಿದ್ದ ಎನ್ನಲಾಗಿದೆ.
ಇವೆಲ್ಲಾ ಮಾಹಿತಿ ಪಡೆದ ಪೊಲೀಸರು ಸಿಸಿಟಿವಿ ಸೇರಿದಂತೆ ಇತರ ಸಾಕ್ಷ್ಯಾಧಾರ ನೋಡಿದಾಗ ಕೊಲೆಯಾದ ದಿನ ಇದೇ ಹರೀಶ್ ಅಲ್ಲಿ ಆಸುಪಾಸು ಸುಳಿದಾಡುವುದು ಕಂಡಿದೆ. ಅವನನ್ನು ಹಿಡಿದು ವಿಚಾರಿಸದಾಗ ಕೊಲೆ ಮಾಡಿರುವುದು ತಿಳಿದುಬಂದಿದೆ.