ತಾಳಿ ಕಟ್ಟಬೇಕೆನ್ನುವಷ್ಟರಲ್ಲಿಯೇ ಕುಸಿದುಬಿದ್ದು ವಧು ಸಾವು! ಬೆಚ್ಚಿಬೀಳಿಸಿದ ಮರಣೋತ್ತರ ಪರೀಕ್ಷೆ

marriage
Published on

ಮಧುರವಾಡ (ಆಂಧ್ರಪ್ರದೇಶ): ಇನ್ನೇನು ಕೆಲವೇ ಕ್ಷಣಗಳಲ್ಲಿ ಆ ಮದುವೆ ಪೂರ್ಣಗೊಳ್ಳುವುದರಲ್ಲಿತ್ತು. ಎಲ್ಲಾ ಶಾಸ್ತ್ರೋಕ್ತಗಳೂ ಮುಗಿದು, ವರ ವಧುವಿನ ಕುತ್ತಿಗೆಗೆ ತಾಳಿ ಕಟ್ಟಬೇಕಿತ್ತು. ಅದಕ್ಕೂ ಮೊದಲು ವೀಳ್ಯದೆಲೆ ಶಾಸ್ತ್ರ ನಡೆಯುತ್ತಿತ್ತು. ಅಷ್ಟರಲ್ಲಿ ನಡೆದೇ ಹೋಯ್ತು ದುರಂತ.

ನಗುನಗುತ್ತಾ ಇದ್ದ ಮದುಮಗಳು ಕುಸಿದು ಬಿದ್ದುಬಿಟ್ಟಳು. ಏನಾಯಿತು ಎಂದು ನೋಡುವಷ್ಟರಲ್ಲಿಯೇ ಪ್ರಾಣವೇ ಹೊರಟುಹೋಗಿತ್ತು! ಇಡೀ ಮಂಟಪವೇ ಶಾಕ್​ ಆಗಿ ಹೋಯಿತು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅದಾಗಲೇ ಮದುಮಗಳು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.

ಇಂಥದ್ದೊಂದು ದುರಂತ ನಡೆದದ್ದು ಆಂಧ್ರಪ್ರದೇಶದ ವಿಶಾಖಪಟ್ಟಣದ ಮಧುರವಾಡ ಎಂಬಲ್ಲಿ. ನಾಗೋಟಿ ಶಿವಾಜಿ ಎಂಬ ಯುವಕನ ಜತೆ ಹಸೆಮಣೆ ಏರಿದ್ದ ಸೃಜನಾ ಇಂಥದ್ದೊಂದು ಘೋರ ದುರಂತ ಕಂಡಿದ್ದಾಳೆ.

ಹೀಗೆ ಏಕಾಏಕಿ ಏನಾಯಿತು ಎಂದು ತಿಳಿಯದೇ ಎಲ್ಲರೂ ಶಾಕ್​ ಆಗಿರುವ ನಡುವೆಯೇ ಆಕೆಯ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಇದರಲ್ಲಿ ಕಂಡುಬಂದಿರುವ ವರದಿ ನೋಡಿ ಎಲ್ಲರೂ ಶಾಕ್​ ಆಗಿದ್ದು, ಎಲ್ಲವೂ ನಿಗೂಢದಂತೆ ತೋರುತ್ತಿದೆ.

ಮರಣೋತ್ತರ ಪರೀಕ್ಷೆಯಲ್ಲಿ ಸೃಜನಾಳ ದೇಹದಲ್ಲಿ ವಿಷ ಪತ್ತೆಯಾಗಿದೆ. ಇಡೀ ಮದುವೆಯ ಸಮಯದಲ್ಲಿ ನಗುನಗುತ್ತಲೇ ಇದ್ದಾಕೆ, ಫೋಟೋಗೂ ವರನ ಜತೆ ನಗುತ್ತಲೇ ಪೋಸ್​ ಕೊಟ್ಟಾಕೆ ಮದುವೆಯ ಮುನ್ನ ವಿಷ ಸೇವಿಸಿದ್ದಳು ಎಂದರೆ ನಂಬುವುದು ಎಲ್ಲರಿಗೂ ಅಸಾಧ್ಯವೇ ಆಗಿದೆ. ನಿಜಕ್ಕೂ ಆಕೆಯೇ ವಿಷ ಸೇವಿಸಿದ್ದಳೇ ಅಥವಾ ಯಾರಾದರೂ ಈಕೆಯ ಆಹಾರದಲ್ಲಿ ವಿಷ ಸೇವಿಸಿ ನೀಡಿದ್ದರೇ ಎನ್ನುವುದು ಮಾತ್ರ ತುಂಬಾ ನಿಗೂಢವಾಗಿಯೇ ಉಳಿದಿದೆ.

ಈ ನಿಗೂಢವನ್ನು ಪೊಲೀಸರು ಭೇದಿಸಲು ಪ್ರಯತ್ನಿಸುತ್ತಿದ್ದು, ಈ ಕುರಿತು ತನಿಖೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net