

ನವದೆಹಲಿ: ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ತವರು ಪಂಜಾಬ್ಗೆ ವಾಪಸಾಗುತ್ತಿದ್ದ ಸಂದರ್ಭದಲ್ಲಿ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ರೈತರು ಮೃತಪಟ್ಟಿದ್ದು, ಹಲವರಿಗೆ ಗಾಯಗಳಾಗಿವೆ.
ಇಂದು ಬೆಳಗ್ಗೆ ಹರಿಯಾಣದಲ್ಲಿನ ಕರ್ನಲ್ ಎಂಬಲ್ಲಿ ದೆಹಲಿ-ಚಂಡೀಗಢ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಈ ಘಟನೆ ನಡೆದಿದೆ. ಟ್ರ್ಯಾಕ್ಟರ್ನಲ್ಲಿ ರೈತರು ಬರುತ್ತಿದ್ದರು. ಆ ಸಮಯದಲ್ಲಿ ಮಧ್ಯರಾತ್ರಿ ಎರಡು ಗಂಟೆ ಸುಮಾರಿಗೆ ವಾಹನವೊಂದು ಟ್ರ್ಯಾಕ್ಟರ್ಗೆ ಗುದ್ದಿದೆ. ಈ ಘಟನೆಯಲ್ಲಿ ಇಬ್ಬರು ರೈತರು ಮೃತಪಟ್ಟಿದ್ದಾರೆ.
ಮೃತಪಟ್ಟವರನ್ನು ಪಟಿಯಾಲ ಜಿಲ್ಲೆಯ ಸಫೇರಾ ಗ್ರಾಮದ ಗುರ್ಪ್ರೀತ್ ಸಿಂಗ್ (24) ಹಾಗೂ ಲಾಭ್ ಸಿಂಗ್ (65) ಎಂದು ಗುರುತಿಸಲಾಗಿದೆ. ಗುರ್ಪ್ರೀತ್ ಸಿಂಗ್ ಸ್ಥಳದಲ್ಲೇ ಮೃತಪಟ್ಟರೆ, ಲಾಭ್ ಸಿಂಗ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮೃತಪಟ್ಟಿದ್ದಾರೆ.
ಇದೇ ಗ್ರಾಮದ ಇನ್ನಿತರ ಮೂವರು ರೈತರಿಗೆ ಗಂಭೀರ ಗಾಯಗಳಾಗಿದ್ದು, ಇನ್ನೂ ಕೆಲವರಿಗೆ ಚಿಕ್ಕಪುಟ್ಟ ಗಾಯಗಳಾಗಿರುವುದಾಗಿ ವರದಿಯಾಗಿದೆ.
ಗುರ್ಪ್ರೀತ್ ಅವರು ಕುಟುಂಬಕ್ಕೆ ಒಬ್ಬನೇ ಮಗನಾಗಿದ್ದು ಅವರೇ ಕುಟುಂಬಕ್ಕೆ ಆಧಾರವಾಗಿದ್ದರು ಎಂದು ಅಪಘಾತದಲ್ಲಿ ಗಾಯಗೊಂಡಿರುವ ರೈತ ನರೇಂದ್ರ ಸಿಂಗ್ ಹೇಳಿದ್ದಾರೆ. ಗಾಯಗೊಂಡಿರುವ ರೈತರಿಂದ ಹೇಳಿಕೆಗಳನ್ನು ಪಡೆಯಲಾಗುತ್ತಿದೆ. ಅಪಘಾತ ಮಾಡಿದ ವಾಹನ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.