

ಚೆನ್ನೈ: ತಮಿಳುನಾಡಿನಲ್ಲಿ ನಾಳೆ ಅಂದರೆ ಫೆ.19ರಂದು ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದೆ. ಡಿಎಂಕೆ, ಎಐಎಡಿಎಂಕೆ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಬಿರುಸಿನ ಮತಪ್ರಚಾರದಲ್ಲಿ ತೊಡಗಿವೆ. ಇದಾಗಲೇ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದ ಹಿನ್ನೆಲೆಯಲ್ಲಿ ಇಂದು (ಶುಕ್ರವಾರ) ಮನೆಮನೆಗೆ ಪ್ರಚಾರ ನಡೆಸಲು ಚುನಾವಣಾ ಆಯೋಗ ಅನುಮತಿ ನೀಡಿತ್ತು.
ಆದರೆ ದುರದೃಷ್ಟಕರವೆಂದರೆ ಇಂದು ಒಂದೇ ದಿನ ಇಬ್ಬರು ಡಿಎಂಕೆ ಅಭ್ಯರ್ಥಿಗಳು ಮತಯಾಚನೆ ವೇಳೆ ಮೃತಪಟ್ಟಿದ್ದಾರೆ. ಕಳೆದ ವಾರ ಓರ್ವ ಡಿಎಂಕೆ ಅಭ್ಯರ್ಥಿ ಮತಯಾಚನೆ ವೇಳೆಯೇ ಮೃತಪಟ್ಟಿದ್ದರು.
ಇಂದು ಅಯ್ಯಂಪೇಟ್ಟೈ 9ನೇ ವಾರ್ಡ್‌ನ ಡಿಎಂಕೆ ಪಕ್ಷದ ಅಭ್ಯರ್ಥಿ ಅನುಸೂಯಾ ಎಂಬುವವರು ತಂಜಾವೂರಿನಲ್ಲಿ ಪ್ರಚಾರದ ವೇಳೆಯೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ನಿನ್ನೆಯೂ ಕೊನೆಯ ದಿನದ ಪ್ರಯುಕ್ತ ಬೆಳಗ್ಗೆಯಿಂದ ರಾತ್ರಿವರೆಗೂ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿದ್ದ ಇವರು ತುಂಬಾ ಬಳಲಿದ್ದರು. ಅವರಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ. ಕುಳಿತು ಸುಧಾರಿಸಿಕೊಂಡು ಮತ್ತೆ ಮತಯಾಚನೆಗೆ ಮುಂದಾದಾಗ ಕುಸಿದು ಬಿದ್ದಿದ್ದಾರೆ. ಪಕ್ಷದ ಕಾರ್ಯಕರ್ತರು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯುವಾಗಲೇ ಅವರು ಕೊನೆಯುಸಿರೆಳೆದಿದ್ದಾರೆ.
ಅದೇ ರೀತಿ, ಪಟ್ಟಣ ಪಂಚಾಯಿತಿಯ 2ನೇ ವಾರ್ಡ್‌ಗೆ ಅಂತಿಯೂರು ತಾಲೂಕಿನ ಸುಂದರಂಪಾಳ್ಯದ 64 ವರ್ಷದ ಡಿಎಂಕೆ ಅಭ್ಯರ್ಥಿ ಜಿ. ಸಿತುರೆಡ್ಡಿ ಅವರು ಕೂಡ ಮತಯಾಚನೆ ವೇಳೆ ಹೃದಯಾಘಾತಕ್ಕೆ ಒಳಗಾಗಿ ನಿಧನರಾಗಿದ್ದಾರೆ. ಚಹ ಸೇವಿಸಿ ಬರುತ್ತಿರುವಾಗ ಕುಸಿದುಬಿದ್ದ ಅವರು ಆಸ್ಪತ್ರೆಗೆ ಸೇರಿಸುವಾಗಲೇ ಮೃತಪಟ್ಟಿದ್ದರು.
ಅಥಣಿ ಪಟ್ಟಣ ಪಂಚಾಯಿತಿಯ 3ನೇ ವಾರ್ಡ್‌ನ ಡಿಎಂಕೆ ಪಕ್ಷದ ಅಭ್ಯರ್ಥಿಯಾಗಿದ್ದ 51 ವರ್ಷದ ಎಂ.ಅಯ್ಯಪ್ಪನ್ ಎಂಬುವರು ಕಳೆದ ಮಂಗಳವಾರ ಹೃದಯಾಘಾತದಿಂದ ನಿಧನರಾಗಿದ್ದರು.