VIDEO: ‘ಈ ಕ್ಷಣಕ್ಕಾಗಿ 36 ವರ್ಷ ಕಾದೆ... ಅಂದು ಕ್ಯಾಮೆರಾ ವರ್ಕ್‌ ಆಗದೇ ಅತ್ತಿದ್ದೆ, ಇಂದು ಸಂತೋಷ ಹೇಳಲಾಗ್ತಿಲ್ಲ’ ಎಂದ ಸುದೀಪ್‌...

1205184
Published on

ಬೆಂಗಳೂರು: 1983ರಲ್ಲಿ ಭಾರತ ಕ್ರಿಕೆಟ್​ ತಂಡ ವಿಶ್ವಕಪ್​ ಗೆದ್ದ ಘಟನೆಯನ್ನು ಆಧರಿಸಿ ತಯಾರಾಗಿರುವ ‘83’ ಸಿನಿಮಾ ಶೀಘ್ರದಲ್ಲಿ ತೆರೆ ಕಾಣಲಿದೆ. ಈ ಚಿತ್ರದಲ್ಲಿ ಕಪಿಲ್​ ದೇವ್​ ಪಾತ್ರವನ್ನು ರಣವೀರ್​ ಸಿಂಗ್​ ಮಾಡಿದ್ದರೆ, ನಟ ಸುದೀಪ್‌ ಆ ಸಿನಿಮಾವನ್ನು ಕರ್ನಾಟಕದಲ್ಲಿ ಪ್ರಸ್ತುತಪಡಿಸುತ್ತಿದ್ದಾರೆ. ಈ ಚಿತ್ರ ಕನ್ನಡಕ್ಕೂ ಡಬ್​ ಆಗಿ ತೆರೆಕಾಣುತ್ತಿದೆ. ಈ ಚಿತ್ರದ ಮೂಲಕ ಸುದೀಪ್‌ ಅವರ 36 ವರ್ಷಗಳ ಕನಸೊಂದು ನನಸಾಗಿದೆ!

ಈ ಕುರಿತು ಅವರೇ ಟ್ವೀಟ್‌ ಮೂಲಕ ಇದನ್ನು ಬಹಿರಂಗಪಡಿಸಿದ್ದಾರೆ. ಅದೇನೆಂದರೆ ಕಪಿಲ್​ ದೇವ್​ ಅಭಿಮಾನಿಯಾಗಿರುವ ಸುದೀಪ್‌ ಅವರ ಜತೆ ಫೋಟೋ ತೆಗೆಸಿಕೊಳ್ಳಬೇಕು ಎಂದು ಬಾಲ್ಯದಿಂದಲೂ ಅಂದುಕೊಳ್ಳುತ್ತಿದ್ದರಂತೆ. ಆ ಆಸೆ ಈಗ ಇಡೇರಿದ್ದು, ತಮಗೆ ಎಲ್ಲಿಲ್ಲದ ಖುಷಿ ತಂದಿದೆ ಎಂದು ಹೇಳಿದ್ದಾರೆ. 36 ವರ್ಷಗಳ ಬಳಿಕ ಆ ಕ್ಷಣ ಬಂತು ಎಂದು ಸುದೀಪ್​ ಟ್ವಿಟರ್‌ ಮೂಲಕ ವಿವರಿಸಿದ್ದಾರೆ.

ಚಿತ್ರಕ್ಕೆ ಸಂಬಂಧಿಸಿದಂತೆ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರಿಸಿದ ಸುದೀಪ್‌, ಇಂದು ಕಪಿಲ್‌ ದೇವ್‌ ಅವರ ಜತೆಗಿನ ಫೋಟೋ ಅನ್ನು ಶೇರ್‌ ಮಾಡಿಕೊಂಡಿದ್ದು, ಅದರಲ್ಲಿ ತಮ್ಮ ಕನಸು ನನಸಾಗಿರುವ ಬಗ್ಗೆ ಬರೆದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕಪಿಲ್​ ದೇವ್​, ಸುದೀಪ್​, ನಿರ್ದೇಶಕ ಕಬೀರ್​ ಖಾನ್​, ರಣವೀರ್​ ಸಿಂಗ್​ ಮುಂತಾದವರು ಹಾಜರಿದ್ದರು.

ಈ ಬಗ್ಗೆ ವಿವರಿಸಿದ ಸುದೀಪ್‌, ’1987-88 ಸಮಯ. ಕಪಿಲ್​ ದೇವ್​ ಅವರನ್ನು ನೋಡೋಕೆ ಪಾಲಕರು ಕರೆದುಕೊಂಡು ಹೋಗಿದ್ದರು. ಅಂದು ಕಪಿಲ್​ ದೇವ್​ ಒಬ್ಬರೇ ನಡೆದುಕೊಂಡು ಹೋಗುತ್ತಿದ್ದರು. ಓಡಿಹೋಗಿ ನಾನು ಅವರ ಕೋಟ್​ ಎಳೆದೆ. ಆಗ ನನ್ನ ಬಳಿ ಒಂದು ಚಿಕ್ಕ ಕ್ಯಾಮೆರಾ ಇತ್ತು. ನಿಮ್ಮ ಜತೆ ಫೋಟೋ ಬೇಕು ಅಂತ ಹೇಳಿದೆ. ಫೋಟೋ ತೆಗೆಯಲು ನನ್ನ ಅಕ್ಕ ನನ್ನ ಹಿಂದೆ ಓಡಿ ಬಂದರು. ಆದರೆ ದುರದೃಷ್ಟ ಎಂದರೆ, ಕ್ಯಾಮೆರಾ ವರ್ಕ್​ ಆಗುತ್ತಿರಲಿಲ್ಲ. ನಾನು ಅಳಲು ಆರಂಭಿಸಿದೆ. ಅಂದು ಅವರು ಕಣ್ಣೀರು ಒರೆಸಿ, ನನಗೆ ಸಮಾಧಾನ ಮಾಡಿದ್ದರು. ಮುಂದೊಂದು ದಿನ ನಾವು ಜತೆಯಾಗಿ ಫೋಟೋ ತೆಗೆದುಕೊಳ್ಳೋಣ ಅಂತ ಹೇಳಿದ್ದರು. ಆ ದಿನ ಈಗ ಬಂದಿದೆ’ ಎಂದು ಕಿಚ್ಚ ಸುದೀಪ್​ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಒಬ್ಬ ಕ್ರಿಕೆಟ್​ ಪ್ರೇಮಿಯಾಗಿ, ಭಾರತೀಯನಾಗಿ ಥಿಯೇಟರ್​ನಲ್ಲಿ ಈ ಚಿತ್ರವನ್ನು ನೋಡಿ ಎಂಜಾಯ್​ ಮಾಡಲು ಬಯಸುತ್ತೇನೆ. ಇಂಥ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ನಿರ್ದೇಶಕ ಕಬೀರ್​ ಖಾನ್​ ಮತ್ತು ಇಡೀ ತಂಡಕ್ಕೆ ನನ್ನ ಅಭಿನಂದನೆಗಳು. ಭಾರತ ವಿಶ್ವಕಪ್​ ಗೆದ್ದಾಗ ಎಷ್ಟು ಖುಷಿ ಆಗಿತ್ತೋ ಅದೇ ರೀತಿ ಈ ಸಿನಿಮಾ ತೆರೆ​ಕಾಣುತ್ತಿರುವುದಕ್ಕೆ ಖುಷಿ ಆಗುತ್ತಿದೆ ಎಂದು ಸುದೀಪ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net