VIDEO: ಮಂಟಪದಲ್ಲೇ ವರದಕ್ಷಿಣೆಗೆ ಬೇಡಿಕೆ ಇಟ್ಟ- ಮಾಡೇ ಬಿಟ್ರು ಮಹಾ ‘ವರಪೂಜೆ’: ಎದ್ದುಬಿದ್ದು ಓಡಿಹೋದ ಭಾವಿಪತಿ!

1205162
Published on

ಗಜಿಯಾಬಾದ್: ಹತ್ತು ಲಕ್ಷ ರೂಪಾಯಿ ವರದಕ್ಷಿಣೆ ಕೊಡಿ, ಇಲ್ಲದಿದ್ದರೆ ಮದುವೆ ಕ್ಯಾನ್ಸಲ್‌ ಮಾಡಿ ಎಂದು ಮದುವೆಯ ದಿನವೇ ಆಟಾಟೋಪ ಮಾಡಿದ ವರಮಹಾಶಯನಿಗೆ ವಧುವಿನ ಮನೆಯವರು ಥಳಿಸಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಸಾಹಿಬಾಬಾದ್‌ನಲ್ಲಿ ನಡೆದಿದೆ.

ಮೂರು ಲಕ್ಷ ನಗದು ಮತ್ತು ಒಂದು ಲಕ್ಷ ಮೌಲ್ಯದ ಆಭರಣ ವರದಕ್ಷಿಣೆ ರೂಪದಲ್ಲಿ ಪಡೆದುಕೊಂಡಿದ್ದರೂ, ಮದುವೆಯ ದಿನವೇ ಇನ್ನಷ್ಟು ಬೇಡಿಕೆ ಒಡ್ಡಿದ್ದು, ವಧುವಿನ ಕಡೆಯವರಿಗೆ ಸಿಟ್ಟು ತರಿಸಿದೆ. ವರದಕ್ಷಿಣೆ ಕೊಡದಿದ್ದರೆ ಮದುವೆ ಕ್ಯಾನ್ಸಲ್‌ ಮಾಡುತ್ತೇವೆ ಎಂದದ್ದೇ ತಡ, ಕೋಪ ನೆತ್ತಿಗೇರಿ ಆತನನ್ನು ಚೆನ್ನಾಗಿ ಥಳಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ.

ಸಾಹಿಬಾಬಾದ್‌ನ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಮದುವೆಯ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ಕೊನೆಗೆ ಮಹಿಳೆಯೊಬ್ಬರು ವರನನ್ನು ರಕ್ಷಿಸಿ ಕರೆದುಕೊಂಡು ಹೋಗುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ವರನಿಗೆ ಒಂದಿಷ್ಟು ದಕ್ಷಿಣೆ ಕೊಟ್ಟು ಮದುವೆ ಏರ್ಪಡಿಸಲಾಗಿತ್ತು. ಮದುವೆಯ ದಿನವೇ ಈತನಿಗೆ ಮೂರು ಮದುವೆಯಾಗಿರುವ ವಿಷಯವೂ ವಧುವಿನ ಕಡೆಯವರಿಗೆ ತಿಳಿದಿದೆ. ಎಲ್ಲ ಸಿಟ್ಟನ್ನೂ ಒಟ್ಟಿಗೇ ಹಾಕಿ ವರನಿಗೆ ಚೆನ್ನಾಗಿ ಥಳಿಸಿದ್ದು, ಆತನ ವಿರುದ್ಧ ವರದಕ್ಷಿಣೆ ಕೇಸ್‌ ಹಾಕಿದ್ದಾರೆ.

ಇಲ್ಲಿದೆ ನೋಡಿ ಇದರ ವಿಡಿಯೋ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net