

ವಾಷಿಂಗ್ಟನ್: ಈ ಚಿತ್ರದಲ್ಲಿ ಕಾಣಿಸುತ್ತಿರುವ ದಂಪತಿ ಹೆಸರು ಹಿಲರಿಯಾ ಮತ್ತು ಅಲೆಕ್ ಬಾಲ್ಡ್ವಿನ್. ಈ ದಂಪತಿ ಪ್ರಸಿದ್ಧ ನಟ-ನಟಿ, ಜತೆಗೆ ಹಿಲರಿಯಾ ಯೋಗ ಗುರು ಕೂಡ. ಕಳೆದ ಸೆಪ್ಟೆಂಬರ್ನಲ್ಲಿ ಆರನೇ ಮಗುವಿಗೆ ಜನ್ಮ ನೀಡಿರುವ ಬಗ್ಗೆ ಫೋಟೋ ಶೇರ್ ಮಾಡಿಕೊಂಡಿದ್ದ ಹಿಲರಿಯಾ ಆರೇ ತಿಂಗಳಿನಲ್ಲಿ ಇನ್ನೊಂದು ಫೋಟೋ ಹಾಕಿ ಏಳನೇ ಮಗುವಿಗೆ ಸ್ವಾಗತ ಕೋರುತ್ತಿರುವುದಾಗಿ ಹೇಳಿದ್ದಾರೆ, ಜತೆಗೆ ಅದರ ಫೋಟೋ ಕೂಡ ಹಾಕಿಕೊಂಡಿದ್ದಾರೆ.
ತಮ್ಮ ಪತಿಯ ಜತೆಗಿರುವ ಫೋಟೋದೊಂದಿಗೆ ಏಳೂ ಮಕ್ಕಳ ಫೋಟೋ ಹಾಕಿಕೊಂಡಿರುವ ಹಿಲರಿಯಾ ಕುರಿತು ಇದೀಗ ಭಾರಿ ಚರ್ಚೆ ಶುರುವಾಗಿದೆ. ಒಂದಾದ ಮೇಲೊಂದರಂತೆ ಮಗುವನ್ನು ಹೆರುವುದು ಮಾತ್ರವಲ್ಲದೇ, ಆರೇ ತಿಂಗಳಿನಲ್ಲಿ ಇನ್ನೊಂದು ಮಗುವಿಗೆ ಜನ್ಮ ನೀಡಿರುವುದು ಹೇಗೆ ಎಂಬ ಬಗ್ಗೆ ಚರ್ಚೆ ಶುರುವಾಗಿದೆ.
ಈಕೆ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸುದ್ದಿಯಾಗುತ್ತಿದೆ. "7" ಎಂಬ ಶೀರ್ಷಿಕೆಯಲ್ಲಿ ಈ ಫೋಟೋ ಹಂಚಿಕೊಂಡಿದ್ದಾರೆ ಈಕೆ.
ಅಂದಹಾಗೆ ಇವರಿಗೆ ಈ ಮೊದಲು ಇರುವ ಮಕ್ಕಳ ವಯಸ್ಸು ನೋಡಿದಾಗ ಇನ್ನಷ್ಟು ಅಚ್ಚರಿಯಾಗುತ್ತದೆ. ಇದಕ್ಕೆ ಕಾರಣ, ಆರು ತಿಂಗಳ ವಯಸ್ಸಿನ ಎಡು, ಎರಡೂವರೆ ವರ್ಷದ ರೋಮಿಯೋ ಅಲೆಜಾಂಡ್ರೊ ಡೇವಿಡ್, ನಾಲ್ಕು ವರ್ಷದ ಲಿಯೊನಾರ್ಡೊ ಏಂಜೆಲ್ ಚಾರ್ಲ್ಸ್, ಐದೂವರೆ ವರ್ಷದ ರಾಫೆಲ್ ಥಾಮಸ್ ಮತ್ತು ಏಳು ವರ್ಷದ ಮಗಳು ಕಾರ್ಮೆನ್ ಗೇಬ್ರಿಯೆಲಾ ಮಕ್ಕಳನ್ನು ಹೊಂದಿರುವ ಇವರೀಗ ಏಳನೇ ಮಗುವಿನ ಅಪ್ಪ- ಅಮ್ಮ.
ನಮಗೆ ಮಕ್ಕಳೆಂದರೆ ಬಹಳ ಪ್ರೀತಿ ಎಂದಿರುವ ಈ ದಂಪತಿ, ಆರೇ ತಿಂಗಳಿನಲ್ಲಿ ಮತ್ತೊಂದು ಮಗು ಹುಟ್ಟಿದ್ದು ಹೇಗೆ ಎಂಬ ಬಗ್ಗೆ ಕೇಳಿರುವ ಪ್ರಶ್ನೆಗೆ ಮೌನವಾಗಿದ್ದಾರೆ. ಈ ಮಗುವನ್ನು ಅವರಂತೂ ಹೆತ್ತಿರಲು ಸಾಧ್ಯವಿಲ್ಲ. ಬದಲಿಗೆ ಈ ಏಳನೇ ಮಗುವನ್ನು ಅವರು ದತ್ತು ಪಡೆದಿದ್ದಾರೋ ಅಥವಾ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದುಕೊಂಡಿದ್ದಾರೋ ಎಂಬ ಬಗ್ಗೆ ಇದೀಗ ಚರ್ಚೆ ಶರುವಾಗಿದೆ.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ಸ್ ಮಾಡಿ