

ನವದೆಹಲಿ: ಇಂದಿನಿಂದ ದೇಶದೆಲ್ಲೆಡೆ ಎರಡನೆಯ ಹಂತದ ಕರೊನಾ ಲಸಿಕೆ ಅಭಿಯಾನ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಇದಾಗಲೇ ಲಸಿಕೆಯನ್ನು ಪಡೆಯುವುದರ ಮೂಲಕ ಅರ್ಹರು ಕರೊನಾ ಲಸಿಕೆಯನ್ನು ಪಡೆದುಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ. ಎರಡನೆಯ ಹಂತದಲ್ಲಿ 60 ವರ್ಷದ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದ್ದು, ಇದರ ಫಲಾನುಭವಿಗಳು ಲಸಿಕೆ ಪಡೆಯುವಂತೆ ಅವರು ಹೇಳಿದ್ದರು. ಜನಸಾಮಾನ್ಯರಿಗೆ ಲಸಿಕೆಯ ಮೇಲೆ ಭರವಸೆ ಮೂಡುವ ನಿಟ್ಟಿನಲ್ಲಿ ಮೊದಲು ಸಚಿವರು, ವಿವಿಧ ಮುಖಂಡರು ಲಸಿಕೆ ಪಡೆದುಕೊಳ್ಳುವಂತೆ ಅವರು ಹೇಳಿದ್ದಾರೆ.
ಇಂದು ಬೆಳಗ್ಗೆ ದೆಹಲಿಯ ಏಮ್ಸ್‌ನಲ್ಲಿ ಭಾರತ್ ಬಯೋಟೆಕ್ನ ಕೊವಾಕ್ಸಿನ್ ಲಸಿಕೆ ಸ್ವೀಕರಿಸಿದ ನಂತರ ಅವರು ಈ ಮಾತನ್ನು ಹೇಳಿದರು.
ಆದರೆ ಅದರ ಬೆನ್ನಲ್ಲೇ ಇದೀಗ ಟ್ವೀಟ್ ಮಾಡಿರುವ ಹರಿಯಾಣದ ಆರೋಗ್ಯ ಸಚಿವ, ಅನಿಲ್ ವಿಜ್ ನಾನು ಲಸಿಕೆ ಪಡೆದುಕೊಳ್ಳುವುದಿಲ್ಲ. ನಾನು ಆರೋಗ್ಯವಾಗಿದ್ದೇನೆ ಎಂದು ಹೇಳಿದ್ದಾರೆ.
ಅದಕ್ಕೆ ಕಾರಣ ನೀಡಿರುವ ಅವರು, ಇಂದಿನಿಂದ ಸಾರ್ವಜನಿಕರಿಗೆ ಕರೊನಾ ಲಸಿಕೆ ನೀಡುವ ಅಭಿಯಾನ ಆರಂಭವಾಗಲಿದೆ. ಎಲ್ಲರೂ ಇದನ್ನು ಹಾಕಿಸಿಕೊಳ್ಳಲೇಬೇಕು. ಅದು ಆದರೆ ಆದರೆ ನಾನು ಮಾತ್ರ ಲಸಿಕೆ ಹಾಕಿಸಿಕೊಳ್ಳುವುದಿಲ್ಲ. ಏಕೆಂದರೆ ನಾನು ಇದಾಗಲೇ ಕೋವಿಡ್ನಿಂದ ಬಳಲಿದ್ದೇನೆ. ಕೋವಿಡ್ನಿಂದ ಆರೋಗ್ಯ ಪಡೆದ ನಂತರ ನನ್ನ ರೋಗ ನಿರೋಧಕ ಬಹಳಷ್ಟು ಹೆಚ್ಚಿದ್ದು ಆ್ಯಂಟಿಬಾಡಿ 300 ಆಗಿದೆ. ಬಹುಶಃ ನಾನು ಈ ಹಿಂದೆ ತೆಗೆದುಕೊಂಡ ಪ್ರಯೋಗ ಲಸಿಕೆಯೂ ಇದಕ್ಕೆ ಕಾರಣವಾಗಿರಬಹುದು. ಹಾಗಾಗಿ ಈಗ ನನಗೆ ಲಸಿಕೆಯ ಅವಶ್ಯಕತೆ ಇಲ್ಲ'. ಎಂದಿದ್ದಾರೆ.
ಸಚಿವ ಅನಿಲ್ ಅವರು ಕಳೆದ ನವೆಂಬರ್ನಲ್ಲಿ ಕೊವಾಕ್ಸಿನ್ ಡೋಸ್ ಪಡೆದುಕೊಂಡಿದ್ದರು. ಆದರೆ ನಂತರ ಅವರಿಗೆ ಕರೊನಾ ಸೋಂಕು ಕಾಣಿಸಿಕೊಂಡಿತ್ತು,. ಇದು ಬಹಳ ಚರ್ಚೆಗೆ ಗ್ರಾಸವಾಗಿತ್ತು. ನಿಯಮದ ಪ್ರಕಾರ ಅವರು, ಇಂದು ಎರಡನೇ ಡೋಸ್ ಪಡೆದುಕೊಳ್ಳಬೇಕಿತ್ತು. ಆದರೆ ಅವರು ಇದೀಗ ಈ ಟ್ವೀಟ್ ಮಾಡಿದ್ದು, ಮತ್ತೊಮ್ಮೆ ಈ ಟ್ವೀಟ್ ಕುರಿತು ಚರ್ಚೆ ಶುರುವಾಗಿದೆ.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ಸ್ ಮಾಡಿ