ಎಸ್‌ಡಿಪಿಐ, ಪಿಎಫ್‌ಐ ನಿಷೇಧ- ಸಚಿವಸಂಪುಟದಲ್ಲಿ ಬಂದ ಚರ್ಚೆ ಏನು?

SDPI ban
Published on

ಬೆಂಗಳೂರು: ಡಿಜೆಹಳ್ಳಿ, ಕೆಜಿಹಳ್ಳಿ ಸೇರಿದಂತೆ ಇದಾಗಲೇ ಹಲವು ಕಡೆಗಳಲ್ಲಿ ಗಲಭೆ ನಡೆಸುವ ಎಸ್‌ಡಿಪಿಐ ಹಾಗೂ ಪಿಎಫ್‌ಐ ಸಂಘಟನೆಯನ್ನು ನಿಷೇಧಿಸುವ ಬಗ್ಗೆ ತೀವ್ರ ಒತ್ತಡ ಬಂದಿರುವ ಹಿನ್ನೆಲೆಯಲ್ಲಿ, ಇಂದು ನಡೆದ ಸಚಿವ ಸಂಪುಟದಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ.

ವಿಷಯದ ಕುರಿತಂತೆ ವಿಸ್ತ್ರೃತ ಚರ್ಚೆ ನಡೆದಿದೆ. ಆದರೆ, ಸಭೆಯಲ್ಲಿ ಯಾವುದೇ ನಿರ್ದಿಷ್ಟ ತೀರ್ಮಾನವನ್ನು ತೆಗೆದುಕೊಂಡಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ. ಇವುಗಳ ನಿಷೇಧಕ್ಕೆ ಕುರಿತಂತೆ ಪೊಲೀಸ್‌ ಇಲಾಖೆಯಿಂದ ಹೆಚ್ಚಿನ ಸಾಕ್ಷ್ಯ ಮತ್ತು ಮಾಹಿತಿ ಕೇಳಲಾಗಿದ್ದು, ಅದರ ಆಧಾರದ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಅವರು ಹೇಳಿದರು.

ಯಾವುದೇ ಒಂದು ಸಂಘಟನೆ ನಿಷೇಧಿಸಲು ಶಿಫಾರಸು ಮಾಡಬೇಕಾದರೆ ಸಮಗ್ರ ವರದಿ ಬೇಕು. ಒಂದು ಘಟನೆಯನ್ನು ಇಟ್ಟುಕೊಂಡು ನಿಷೇಧ ಮಾಡುವುದು ಸರಿಯಲ್ಲ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯ ಸರಕಾರದ ಮುಂದೆ ಅಂತಹ ಸಮಗ್ರ ವರದಿ ಕೈಸೇರಿಲ್ಲ. ನಮಗೆ ಬರುವ ಮಾಹಿತಿಗಳ ಆಧಾರದ ಮೇಲೆ ಅವುಗಳ ನಿಷೇಧಕ್ಕೆ ಸಂಬಂಧಿಸಿದಂತೆ ಕೇಂದ್ರದ ಜತೆ ಚರ್ಚಿಸಲಾಗುವುದು ಎಂದು ಮಾಧುಸ್ವಾಮಿ ಹೇಳಿದ್ದಾರೆ.

ಗಲಭೆಯಲ್ಲಿ ಆಸ್ತಿಪಾಸ್ತಿ ಕಳೆದುಕೊಂಡವರಿಗೆ ಪರಿಹಾರ ನೀಡಲು ಗಲಭೆಕೋರರಿಂದಲೇ ದಂಡ ವಸೂಲಿ ಮಾಡಲಾಗುವುದು. ಗಲಭೆಯಲ್ಲಿ ನೇರವಾಗಿ ಭಾಗಿಯಾದರು ಮತ್ತು ಹಿಂದೆ ನಿಂತು ಪ್ರಚೋದಿಸಿದರಿಂದಲೂ ವಸೂಲಿ ಮಾಡುವ ಬಗ್ಗೆ ಚರ್ಚೆ ನಡೆದಿದೆ. ಇನ್ನು ಒಂದು ವಾರದೊಳಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮಾಧುಸ್ವಾಮಿ ಹೇಳಿದರು.

ಸಂಘಟನೆಗಳ ನಿಷೇಧ ಮತ್ತು ಗಲಭೆಕೋರರಿಂದ ದಂಡವನ್ನು ವಸೂಲಿ ಮಾಡುವ ಸಂಬಂಧ ಕಾಯ್ದೆಗೆ ಅಗತ್ಯ ತಿದ್ದುಪಡಿ ಮಾಡಲು ಸಿದ್ಧರಿದ್ದೇವೆ. ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಿದರೆ, ದಂಡ ವಸೂಲಿ ಮಾಡುವ ಬಗ್ಗೆ 1981 ರಲ್ಲಿ ಕಾಯ್ದೆಗೆ ತಿದ್ದುಪಡಿ ಮಾಡಲಾಗಿತ್ತು. ಕ್ಲೇಮ್‌ ಕಮಿಷನರ್‌ ನೇಮಕ ಆದ ಬಳಿಕ ಅವರಿಗೆ ಕಾಯ್ದೆಯನ್ನು ಒದಗಿಸಲಾಗುವುದು. ಈ ಸಂಬಂಧ ಉತ್ತರ ಪ್ರದೇಶ ರಾಜ್ಯದಲ್ಲಿ ಉತ್ತಮ ಕಾಯ್ದೆಯೊಂದನ್ನು ರೂಪಿಸಿದ್ದಾರೆ. ಅದನ್ನೂ ಅಧ್ಯಯನ ನಡೆಸಿ ಅಗತ್ಯವಿದ್ದರೆ, ಕಾಯ್ದೆಗೆ ತಿದ್ದುಪಡಿ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net