ಸಲ್ಮಾನ್​ ಖಾನ್​ರನ್ನು ತಡೆದು ರಾತ್ರೋರಾತ್ರಿ ಹೀರೋ ಆಗಿದ್ದ ಅಧಿಕಾರಿಯೀಗ ಸಂಕಷ್ಟದಲ್ಲಿ...!

salman
Published on

ಮುಂಬೈ: ಬಾಲಿವುಡ್​ ನಟ ಸಲ್ಮಾನ್​ ಖಾನ್​ರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ತಡೆದು ನಿಲ್ಲಿಸಿ ಭಾರಿ ಮೆಚ್ಚುಗೆಗೆ ಪಾತ್ರರಾಗಿದ್ದ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್​ಎಫ್​) ಯುವ ಅಧಿಕಾರಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸಲ್ಮಾನ್​ ಖಾನ್​ರನ್ನು ತಡೆದು ಭದ್ರತಾ ತಪಾಸಣೆ ನಡೆಸುವ ಮೂಲಕ ರಾತ್ರೋರಾತ್ರಿ​ ರಿಯಲ್​ ಹೀರೋ ಆಗಿ ಎಲ್ಲರ ಗಮನ ಸೆಳೆದಿದ್ದ ಸೋಮನಾಥ್​ ಮೊಹಂತಿ ಈಗ ತಾವು ಮಾಡಿರುವ ಚಿಕ್ಕದೊಂದು ತಪ್ಪಿನಿಂದ ಸಮಸ್ಯೆಗೆ ಸಿಕ್ಕಿಹಾಕಿಕೊಂಡಿದ್ದಾರೆ.

ಟೈಗರ್​ 3 ಚಿತ್ರದ ಚಿತ್ರೀಕರಣಕ್ಕಾಗಿ ಸಲ್ಮಾನ್​ ಖಾನ್​ ಅವರು ವಿದೇಶಕ್ಕೆ ತೆರಳಲೆಂದು ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಮೊಹಂತಿ ಏರ್​ಪೋರ್ಟ್​ನಲ್ಲಿ ಕರ್ತವ್ಯದಲ್ಲಿದ್ದರು. ಬಹುತೇಕರು ವಿಐಪಿಗಳು ಬಂದಾಗ ಭದ್ರತಾ ತಪಾಸಣೆ ನಡೆಸಲು ಹಿಂಜರಿಯುತ್ತಾರೆ. ಆದರೆ, ಯಾವುದಕ್ಕೂ ಕ್ಯಾರೆ ಎನ್ನದೇ ಮೊಹಂತಿ ಅವರು ಸಲ್ಮಾನ್​ ಭದ್ರತಾ ತಪಾಸಣೆ ನಡೆಸಿ ಕಳುಹಿಸಿದ್ದರು. ಸಲ್ಮಾನ್​ ಖಾನ್​ರನ್ನು ತಡೆದು ಸಾಮಾನ್ಯ ಜನರ ರೀತಿ ಸಾಲಿನಲ್ಲಿ ನಿಲ್ಲುವಂತೆಯು ಮತ್ತು ದಾಖಲಾತಿಗಳನ್ನು ತೋರಿಸುವಂತೆ ಹೇಳಿದರು.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದರಿಂದ ಹೀರೋ ಏನೋ ಆದರು. ಆದರೆ ಇದೇ ಅವರಿಗೆ ಮುಳುವಾಗಿದೆ. ಅದೇನೆಂದರೆ ವೈರಲ್​ ವಿಡಿಯೋಗೆ ಸಂಬಂಧಿಸಿದಂತೆ ಮಾಧ್ಯಮವೊಂದಕ್ಕೆ ಮೊಹಂತಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇದರಿಂದ ತೊಂದರೆಗೆ ಸಿಲುಕಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅವರಿಂದ ಪ್ರತಿಕ್ರಿಯೆ ಪಡೆಯಲು ಮಾಧ್ಯಮ ಪ್ರತಿನಿಧಿಗಳು ಕರೆ ಮಾಡಿದಾಗ ಅವರು ಪ್ರತಿಕ್ರಿಯೆ ನೀಡಿಬಿಟ್ಟಿದ್ದಾರೆ. ಅಸಲಿಗೆ ಸಿಐಎಸ್​ಎಫ್​ ಪ್ರೋಟೋಕಾಲ್​ ಪ್ರಕಾರ ಅವರು ಮಾಧ್ಯಮಗಳ ಜತೆಗೆ ಹಿರಿಯ ಅಧಿಕಾರಿಗಳ ಪೂರ್ವಾನುಮತಿ ಇಲ್ಲದೆಯೇ ಮಾತುಕತೆ ನಡೆಸುವಂತಿರಲಿಲ್ಲ. ಆದ್ದರಿಂದ ಇವರು ನಿಯಮ ಮೀರಿದ್ದರಿಂದ ಅವರ ಮೊಬೈಲ್​ ಫೋನ್​ ಅನ್ನು ಹಿರಿಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ, ಈಗ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net