ಮಕ್ಕಳ ಹೆಸರಲ್ಲಿ ಕೋಟಿ ಕೋಟಿ ಲೂಟಿ ಮಾಡಿದ್ರಾ ನಟ ಕೋಮಲ್​? ಸ್ವೆಟರ್​ ಟೆಂಡರ್​ನಲ್ಲಿ ಗೋಲ್​ಮಾಲ್​ ಆರೋಪ!

komal
Published on

ಬೆಂಗಳೂರು: ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆಯ ಶಾಲೆಗಳ ಮಕ್ಕಳಿಗೆ ವಿತರಿಸುವ ಸ್ವೆಟರ್​ ಹೆಸರಿನಲ್ಲಿ ಕೋಟಿ ಕೋಟಿ ರೂಪಾಯಿ ಭ್ರಷ್ಟಾಚಾರದ ಆರೋಪ ಹೊರಬಂದಿದ್ದು, ಇದೀಗ ಇದರ ಸುಳಿಯಲ್ಲಿ ಹಾಸ್ಯನಟ ಕೋಮಲ್​ ಸಿಲುಕಿದ್ದಾರೆ!

ಮಕ್ಕಳ ಹೆಸರಲ್ಲಿ ಪಾಲಿಕೆ ಅಧಿಕಾರಿಗಳು ಹಣ ಲೂಟಿ ಮಾಡಿರುವ ಆರೋಪವಿದ್ದು, ಇದಕ್ಕೆ ಸಂಬಂಧಿಸಿದಂತೆ ನಟ ಕೋಮಲ್​ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪಾಲಿಕೆ ಮಕ್ಕಳಿಗೆ ಸ್ವೆಟರ್​ ವಿತರಣೆ ಮಾಡಲು ಟೆಂಡರ್​ ಕರೆಯಲಾಗಿತ್ತು. ಆ ಟೆಂಡರ್​ ತೆಗೆದುಕೊಂಡಿರುವುದು ನಟ ಕೋಮಲ್​. ಆದರೆ ಮಕ್ಕಳಿಗೆ ಈ ಸ್ಟೆಟರ್ ಹಂಚಿಕೆಯಾಗಿಲ್ಲ. ಏಕೆಂದರೆ ಕಳೆದ ವರ್ಷ ಶಾಲಾ ಕಾಲೇಜುಗಳ ತರಗತಿಗಳು ನಡೆದಿಲ್ಲ. ಆದರೂ ಮಕ್ಕಳಿಗೆ ಸ್ಪೆಟರ್ ವಿತರಣೆ ಮಾಡಿದ್ದೇವೆ ಅಂತ ಹಣ ಬಿಡುಗಡೆ ಮಾಡಲಾಗಿದೆ ಎಂಬ ಆರೋಪವಿದೆ. ಪಾಲಿಕೆ ಅಧಿಕಾರಗಳ ಮೇಲೆ ಸಚಿವ ಆರ್ ಅಶೋಕ್, ಜಗ್ಗೇಶ್ ಒತ್ತಡ ಹಾಕಿಸಿ ಹಣ ಬಿಡುಗಡೆ ಮಾಡಿಕೊಂಡಿದ್ದಾರೆಂಬ ಗಂಭೀರ ಆರೋಪವಿದೆ.

ಮಕ್ಕಳಿಗೆ ಸ್ಪೆಟರ್ ನೀಡಿದ್ದೇವೆ ಎಂದು ಒಂದು ಮುಕ್ಕಾಲು ಕೋಟಿ ಹಣವನ್ನು ಪಾಲಿಕೆ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಬಿಬಿಎಂಪಿ ಕಚೇರಿ ಮುಂಭಾಗ ಒಂದು ಸ್ಪೆಟರ್ 50 ಬೆಲೆ ನಿಗದಿ ಮಾಡಿ ಹರಾಜು ಮಾಡಲಾಗಿದೆ ಎಂದು ಪಾಲಿಕೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಶುರುವಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ನಟ ಕೋಮಲ್​, ನನಗೂ ಈ ಟೆಂಡರ್​ಗೂ ಯಾವುದೇ ಸಂಬಂಧ ಇಲ್ಲ, ನನ್ನ ವಿರುದ್ಧ ವೃಥಾ ಆರೋಪ ಹೊರಿಸಲಾಗಿದೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net