ಆರ್​ಆರ್​ನಗರ: ಮತ್ತೆ ಶುರುವಾಯ್ತಾ ಅಕ್ರಮ? ಮತದಾರರಿಗೆ ಫೋನ್​ಕಾಲ್​!

RRnagar
Published on

ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಕಣವಾಗಿರುವ ರಾಜರಾಜೇಶ್ವರಿನಗರ ಕ್ಷೇತ್ರದ ಚುನಾವಣೆಯಲ್ಲಿ (ಆರ್​,ಆರ್​.ನಗರ) ಈ ಹಿಂದೆ ಬೃಹತ್​ ಅಕ್ರಮದ ಕುರಿತು ಸುದ್ದಿ ಸುಳಿದಾಡುತ್ತಿತ್ತು. ಈಗ ಮತ್ತೆ ಅಕ್ರಮದ ಘಾಟು ಹೊಡೆಯುತ್ತಿದೆ.

ಈ ಕುರಿತು ಕ್ಷೇತ್ರದ ಮತದಾರರಿಂದ ಚುನಾವಣಾಧಿಕಾರಿಗಳಿಗೆ ದೂರುಗಳು ಬರುತ್ತಿವೆಯಂತೆ. ಕ್ಷೇತ್ರದ ಮತದಾರರಿಗೆ ಅಪರಿಚಿತ ವ್ಯಕ್ತಿಗಳು ಕರೆ ಮಾಡಿ, ನಿಮ್ಮ ವೋಟರ್ ಐಡಿ ಹಾಗೂ ಮೊಬೈಲ್ ಸಂಖ್ಯೆ ನೀಡುವಂತೆ ಒತ್ತಾಯಿಸುತ್ತಿರುವುದಾಗಿ ದೂರುಗಳು ದಾಖಲಾಗಿವೆ.

ಈ ಮೊದಲು ನಡೆದಿದ್ದ ವಿಧಾನಸಭಾ ಚುನಾವಣೆ ವೇಳೆ ಅಕ್ರಮ ವೋಟರ್ ಐಡಿ ಕಾರ್ಡ್ ಜಾಲದ ಕುರಿತು ಭಾರಿ ಸುದ್ದಿಯಾಗಿತ್ತು. ಈ ಪ್ರಕರಣ ನಂತರ ಸುಪ್ರೀಂಕೋರ್ಟ್​ ಬಾಗಿಲಿಗೂ ಹೋಗಿತ್ತು. ಕಾಂಗ್ರೆಸ್​ ಅಭ್ಯರ್ಥಿಯಾಗಿದ್ದ ಮುನಿರತ್ನ ವಿರುದ್ಧ ಆಗ ಆರೋಪ ಕೇಳಿಬಂದಿತ್ತು. ಆದರೆ ವಿಚಾರಣೆ ನಡೆಸಿದ್ದ ಕೋರ್ಟ್​, ಈ ಅಕ್ರಮದಲ್ಲಿ ಮುನಿರತ್ನ ಅವರ ಪಾತ್ರವಿಲ್ಲ ಎಂದು ಹೇಳುವ ಮೂಲಕ, ಅವರ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿತ್ತು.

ಆದರೆ ಬರುವ ನವೆಂಬರ್​ 3ರಂದು ನಡೆಯಲಿರುವ ಉಪಚುನಾವಣೆಗೆ ಸಂಬಂಧಿಸಿದಂತೆ ಮತ್ತದೇ ಆರೋಪಗಳು ಕೇಳಿಬರುತ್ತಿವೆ. ಆದರೆ ಈ ಬಾರಿ ಯಾರಿಂದ ಕರೆ ಬಂದಿದೆ ಎಂಬುದು ಇದುವರೆಗೆ ಸ್ಪಷ್ಟವಾಗಿಲ್ಲ. ಆದರೆ ಮತದಾರರು ಮಾತ್ರ ಕರೆಗಳಿಂದ ಬೇಸತ್ತು ಚುನಾವಣಾಧಿಕಾರಿಗಳಿಗೆ ದೂರು ದಾಖಲು ಮಾಡುತ್ತಿದ್ದಾರೆ.

ಈ ದೂರಿನ ಕುರಿತಂತೆ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ಅವರು ಮಾತನಾಡಿ, ಅಪರಿಚಿತರು ಕರೆ ಮಾಡಿ ತಮ್ಮ ವೋಟರ್ ಐಡಿ ನಂಬರ್ ಹಾಗೂ ಮೊಬೈಲ್ ಸಂಖ್ಯೆ ಕೇಳುತ್ತಿದ್ದಾರೆ ಎಂಬುದಾಗಿ ಆರ್​ಆರ್​ನಗರ ಕ್ಷೇತ್ರದ ಮತದಾರರು ದೂರು ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಬೇರೆಯವರ ವೋಟರ್‌ ಐ.ಡಿ. ಮಾಹಿತಿ ಕೇಳುವುದು ಅಪರಾಧ. ಈ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿಯನ್ನು ನೀಡಲಾಗಿದೆ. ಆರ್.ಆರ್. ನಗರದಲ್ಲಿ ಹಲವು ವರ್ಷಗಳಿಂದ ಅಧಿಕಾರಿಗಳು ಒಂದೇ ಜಾಗದಲ್ಲಿರುವ ಮಾಹಿತಿ ಇದೆ. ಹೀಗಾಗಿ ಕೆಲವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಮಂಜುನಾಥ್​ ಪ್ರಸಾದ್​ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net