

ಬೆಂಗಳೂರು: ಬಹು ವಿವಾದ ಸೃಷ್ಟಿಸಿರುವ ಪಿಯುಸಿ ಪಠ್ಯ ಪರಿಷ್ಕರಣೆ ಸಮಿತಿಯಿಂದ ಚಿಂತಕ ರೋಹಿತ್ ಚಕ್ರತೀರ್ಥ ಅವರನ್ನು ಶಿಕ್ಷಣ ಇಲಾಖೆ ಕೈಬಿಟ್ಟಿದೆ. ಚಕ್ರತೀರ್ಥ ನೇತೃತ್ವದ ಸಮಿತಿಯನ್ನು ವಿಸರ್ಜಿಸಿರುವ ಕಾರಣ, ಪಿಯುಸಿ ಪಠ್ಯಪುಸ್ತಕ ಪರಿಷ್ಕರಣೆಯ ವರದಿಯನ್ನು ಪಡೆಯುವುದಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾಹಿತಿ ನೀಡಿದ್ದಾರೆ.
ದ್ವಿತೀಯ ಪಿಯುಸಿಯಲ್ಲಿ ಅಧ್ಯಾಯ 4.2ರ ಹೊಸ ಧರ್ಮಗಳ ಉದಯ ಪಠ್ಯಭಾಗದ ಪರಿಷ್ಕರಣೆ ಈ ಮೊದಲು ಸರ್ಕಾರ ಮುಂದಾಗಿತ್ತು. ಪಠ್ಯ ಪರಿಷ್ಕರಣೆ ಜವಾಬ್ದಾರಿಯನ್ನು ರೋಹಿತ್ ಚಕ್ರತೀರ್ಥ ಅವರಿಗೆ ವಹಿಸಲಾಗಿತ್ತು. ಶಾಲೆಗಳ ಪಠ್ಯದ ಪರಿಷ್ಕರಣೆ ವಿವಾದ ಹಿನ್ನೆಲೆಯಲ್ಲಿ ‘ ಚಕ್ರತೀರ್ಥ ನೇತೃತ್ವದ ಸಮಿತಿಯನ್ನು ಕೈಬಿಡಲು ಸರ್ಕಾರ ಮುಂದಾಗಿದೆ ಎಂದು ಸಚಿವ ನಾಗೇಶ್ ತಿಳಿಸಿದ್ದಾರೆ.
ಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣೆ ಸಮಿತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದೇ 3 ರಂದು ವಿಸರ್ಜಿಸಿದ್ದರು. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿ ಸ್ಪಷ್ಟನೆ ನೀಡಿದ್ದ ಮುಖ್ಯಮಂತ್ರಿಗಳು, 'ಪಠ್ಯ ಪರಿಷ್ಕರಣೆಯ ಕ್ರಮಗಳ ಬಗ್ಗೆ ಎದ್ದಿರುವ ವಿವಾದಗಳ ಕಾರಣಕ್ಕೆ ಅಥವಾ ಯಾವುದೇ ಒತ್ತಡಕ್ಕೆ ಮಣಿದು ಈ ಸಮಿತಿಯನ್ನು ವಿಸರ್ಜಿಸುತ್ತಿಲ್ಲ' ಎಂದು ಸ್ಪಷ್ಟಪಡಿಸಿದ್ದರು. ‘ಶಾಲಾ ಶಿಕ್ಷಣದಲ್ಲಿ ಪಠ್ಯಕ್ರಮ ಮತ್ತು ಪಠ್ಯ ಪುಸ್ತಕಗಳನ್ನು ಕಾಲಕಾಲಕ್ಕೆ ತಕ್ಕಂತೆ ಪರಿಷ್ಕರಿಸಲಾಗುತ್ತದೆ. ರಾಜ್ಯದಲ್ಲಿ ಹಲವು ಬಾರಿ ಪಠ್ಯ ಪುಸ್ತಕಗಳನ್ನು ಪರಿಷ್ಕರಣೆ ಮಾಡಲಾಗಿದೆ’ ಎಂದೂ ಅವರು ಹೇಳಿದ್ದರು.